Advertisement

ಮಾತೃವಿಯೋಗದ ದುಃಖದ ನಡುವೆ ಪರೀಕ್ಷೆ ಬರೆದ ಧೀರೆ

01:31 AM Mar 29, 2019 | Sriram |

ಉಳ್ಳಾಲ: ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಅಲ್‌ ಮದೀನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ತನ್ನ ತಾಯಿಯ ಸಾವಿನ ದುಃಖದ ನಡುವೆಯೂ ಬುಧವಾರ ಪರೀಕ್ಷೆ ಬರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದು ಮೊಂಟೆಪದವು ಸರಕಾರಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ವಿಶೇಷ ಕೊಠಡಿಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿದ್ದರು.

Advertisement

ನರಿಂಗಾನ ಗ್ರಾಮದ ಕೊಡಂಚಿಲ್‌ ಅಬ್ಟಾಸ್‌ ಮತ್ತು ಸೆಫಿಯಾ ದಂಪತಿ ಪುತ್ರಿ ಶೈಬಾ ಮಾತೃವಿಯೋಗದ ದುಃಖ ತಾಳಿಕೊಂಡೇ ಪರೀಕ್ಷೆ ಬರೆದಿದ್ದಾರೆ. ಅನಾರೋಗ್ಯದಲ್ಲಿದ್ದ ಶೈಬಾ ಅವರ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ನಡುವೆ ಕನ್ನಡ ಪರೀಕ್ಷೆಗೆ ತಯಾರಿಯಲ್ಲಿದ್ದ ಶೈಬಾಳಿಗೆ ದುಃಖದ ನಡುವೆಯೇ ಪರೀಕ್ಷೆ ಬರೆಯಲು ಆಕೆಯ ಸಂಬಂಧಿಕರು, ಕುಟುಂಬದ ಸದಸ್ಯರು ಧೈರ್ಯ ನೀಡಿದ್ದರು.

ಈ ವಿಚಾರವನ್ನು ಶಾಲೆಯ ಮುಖ್ಯಸ್ಥರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಮೊಂಟೆಪದವು ಶಾಲಾ ಮುಖ್ಯ ಶಿಕ್ಷಕ ಸಂತೋಷ್‌ ಅವರ ಮಾರ್ಗದರ್ಶನದಲ್ಲಿ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ಮಾನಸಿಕವಾಗಿ ಧೈರ್ಯ ನೀಡುವ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಸಹಕರಿಸಿದರು. ಪರೀಕ್ಷೆ ಮುಗಿದ ಬಳಿಕ ತಾಯಿಯ ಅಂತ್ಯ ಸಂಸ್ಕಾರದಲ್ಲಿ ವಿದ್ಯಾರ್ಥಿನಿ ಭಾಗವಹಿಸಿದಳು. ಶೋಕದ ನಡುವೆಯೇ ವಿದ್ಯಾರ್ಥಿನಿ ಶುಕ್ರವಾರ ನಡೆಯುವ ಸಮಾಜ ವಿಜ್ಞಾನ ಪರೀಕ್ಷೆಯ ತಯಾರಿ ನಡೆಸಿದ್ದು, ಪರೀಕ್ಷೆಗೆ ಹಾಜರಾಗಲಿದ್ದಾಳೆ ಎಂದು ಆಕೆಯ ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next