ಧಾರವಾಡ: ಜಿಲ್ಲೆಯಲ್ಲಿ ಒಟ್ಟು 107 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದು, ಅದಕ್ಕಾಗಿ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ (ಎಸ್‌ಓಪಿ) ಪ್ರಕಾರ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 27841 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 90 ಪರೀಕ್ಷಾ ಕೇಂದ್ರಗಳು ಮತ್ತು 17 ಹೆಚ್ಚುವರಿ ಬ್ಲಾಕ್ ಪರೀಕ್ಷಾ ಕೇಂದ್ರಗಳು ಸೇರಿ 107 ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಸಾಮಾಜಿಕ ಅಂತರದ ನಿಯಮದೊಂದಿಗೆ ಆಸನ ವ್ಯವಸ್ಥೆ, ವಿದ್ಯಾರ್ಥಿಗಳು, ಪರೀಕ್ಷಾಸಿಬ್ಬಂದಿ, ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಆಗಮಿಸಲು ವಾಕರಸಾಸಂ 200 ಮಾರ್ಗಗಳಲ್ಲಿ ವಿಶೇಷ ಬಸ್‌ಗಳ ಸಂಚಾರ ನಿರ್ವಹಿಸಲಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರಿಗೆ ಕುರಿತ ವಿಚಾರಣೆಗಾಗಿ ಸಹಾಯವಾಣಿ 1077 ಆರಂಭಿಸಲಾಗಿದೆ. ತಾಲೂಕಾ ಮಟ್ಟದಲ್ಲೂ ಸಹಾಯವಾಣಿ ಆರಂಭಿಸಲಾಗಿದೆ ಎಂದರು.
ಅನಾರೋಗ್ಯದ ಲಕ್ಷಣ ಕಂಡುಬರುವ ಮಕ್ಕಳಿಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2ಹೆಚ್ಚುವರಿ ಕೊಠಡಿಗಳನ್ನು ಮೀಸಲಿರಿಸಿದೆ. ಇಂತಹ ಕೊಠಡಿಗಳಲ್ಲಿ ಅಭ್ಯರ್ಥಿಗಳ ನಡುವಿನ ಅಂತರ 6 ಅಡಿಯಿರುತ್ತದೆ. ಪ್ರತಿ ತಾಲೂಕಿನಲ್ಲಿ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಿ ಅಲ್ಲಿಯೂ ಎಲ್ಲ ಮೂಲಸೌಲಭ್ಯ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೌಂಟರ್ ತೆರೆಯಲಾಗಿದೆ. ಬೆಳಿಗ್ಗೆ 8:30ರಿಂದ ಪರೀಕ್ಷೆ ಮುಗಿಯುವವರೆಗೂ ಆರೋಗ್ಯ ತಪಾಸಣಾ ಕೌಂಟರ್ ಕಾರ್ಯ ನಿರ್ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸ್ನ್ಯಾಕ್ಸ್, ಬಿವರೇಜಗಳ ವ್ಯವಸ್ಥೆಯನ್ನು ಇಸ್ಕಾನ್ ಹಾಗೂ ಇನ್ನಿತರೆ ಸಂಸ್ಥೆಗಳ ವತಿಯಿಂದ ವಿತರಿಸಲಾಗುತ್ತಿದೆ ಎಂದರು.
ಎಲ್ಲಾ 107 ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಮೊಬೈಲ್ ಸ್ವಾಧೀನಾಧಿಕಾರಿಗಳು, 90 ಜನ ಕಸ್ಟೋಡಿಯನ್‌ಗಳು, 34 ಮಾರ್ಗಾಧಿಕಾರಿಗಳು, 90 ಸ್ಥಾನಿಕ ಜಾಗೃತದಳದ ಅಧಿಕಾರಿಗಳು, ಪ್ರತಿ ಕೇಂದ್ರಕ್ಕೆ ಇಬ್ಬರಂತೆ 180 ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂ ಸೇವಕರು, ಪ್ರತಿ ಕೇಂದ್ರಕ್ಕೆ ಇಬ್ಬರಂತೆ 180 ಪ್ಯಾರಾ ಮೆಡಿಕಲ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ 200 ಮಕ್ಕಳಿಗೆ ಒಂದರಂತೆ ಥರ್ಮಲ್ ಸ್ಕ್ಯಾನರ್ ಅನುಸಾರ ಒಟ್ಟು 184 ಥರ್ಮಲ್ ಸ್ಕ್ಯಾನರ್‌ಗಳು ಶಿಕ್ಷಣ ಇಲಾಖೆಯಿಂದ ಪೂರೈಕೆಯಾಗಿವೆ. ಈಗಾಗಲೇ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಅವರ ಕ್ಷಮತಾ ಸೇವಾ ಸಂಸ್ಥೆ, ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್, ಟಾಟಾ ಮೋಟರ್ಸ್, ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕಾÂನರ್ ಪೂರೈಸಲಾಗಿದೆ ಎಂದರು.
ಜಿಲ್ಲೆಯ ಒಟ್ಟು ಪರೀಕ್ಷಾ ಕೇಂದ್ರಗಳ ಪೈಕಿ 46 ಶಹರ ಹಾಗೂ 44 ಗ್ರಾಮೀಣ ವಲಯಗಳಲ್ಲಿ ಇರುತ್ತವೆ. ಎಲ್ಲ ಪರೀಕ್ಷಾಕೇಂದ್ರಗಳಿಗೆ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಖಜಾನೆಗಳಿಂದ ಒಯ್ಯುವಾಗ ಮಾರ್ಗಾಧಿ ಕಾರಿಗಳ ಜತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರವನ್ನು ಪರೀಕ್ಷೆಗೆ 3 ದಿನಗಳ ಮೊದಲು ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸ್ವಚ್ಛಗೊಳಿಸಲು ಸಂಬಂಧಿಸಿದ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಆದೇಶ ನೀಡಲಾಗಿದೆ. ಈಗಾಗಲೇ ಎಲ್ಲ ಕೇಂದ್ರಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಪ್ರತಿ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿ, ಪೀಠೊಪಕರಣಗಳನ್ನು ಸ್ಯಾನಿಟೈಸ್ ಮಾಡಲು ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂಲಕ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಚೌಕ ಹಾಕಿ, ಒಬ್ಬೊಬ್ಬರಾಗಿ ತಪಾಸಣೆಗೊಳಪಟ್ಟು ಕೊಠಡಿಯೊಳಗೆ ಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಕೊಠಡಿಯಲ್ಲಿ 18-20 ವಿದ್ಯಾರ್ಥಿಗಳಂತೆ ಆಸನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪ್ರತಿ ಡೆಸ್ಕ್ ಮಧ್ಯ 3 ಅಡಿ ಅಂತರವಿರುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ. ಡೆಸ್ಕ್ ಅಳತೆ 6 ಅಡಿ ಇದ್ದಲ್ಲಿ ಇಬ್ಬರು, 3 ಅಡಿ ಇದ್ದಲ್ಲಿ ಒಬ್ಬರಂತೆ ವಿದ್ಯಾರ್ಥಿಗಳನ್ನು ಕೂಡ್ರಿಸಲಾಗುತ್ತದೆ. ವಿದ್ಯಾರ್ಥಿಗಳೇ ತಮ್ಮ ಮನೆಯಿಂದ ನೀರಿನ ಬಾಟಲಿ ತರಲು ತಿಳಿಸಲಾಗಿದೆ. ಜಿಪಂ ಸಿಇಒ ಡಾ|ಬಿ.ಸಿ. ಸತೀಶ, ಡಿಡಿಪಿಐ ಮೋಹನ್ ಎಲ್.ಹಂಚಾಟೆ, ಜಿಲ್ಲಾ ನೋಡಲ್ ಅಧಿಕಾರಿ ಪೂರ್ಣಿಮಾ ಮುಕ್ಕುಂದಿಮಠ, ವಿಷಯ ಪರಿವೀಕ್ಷಕ ಸಂಜಯ್ ಮಾಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.