ಬೆಂಗಳೂರು : ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಾಳೆ , ಮಾ. ೨೮ ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ಆದೇಶಿಸಿರುವುದು ಸರಿಯಲ್ಲ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ .ವಿ.ಪಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪಾತ್ರದಲ್ಲಿ ತಮ್ಮ ನೇತೃತ್ವದ ಸರಕಾರವು ದಿನಾಂಕ 25.03.2022 ರಂದು ಸುತ್ತೋಲೆಯೊಂದನ್ನು ಹೊರಡಿಸಿ , ನಾಳೆಯಿಂದ ಪ್ರಾರಂಭವಾಗುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಬೇಕೆಂದು ಆದೇಶಿಸಿದೆ . ಆದರೆ , ವಾಸ್ತವದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಸರಕಾರ ಉಚಿತವಾಗಿ ನೀಡುವ ಸಮವಸ್ತ್ರ ಸಿಗದೇ ಇರುವ ಸಾಧ್ಯತೆ ಇರುತ್ತದೆ . ಜೊತೆಗೆ, ಅನೇಕ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗುತ್ತಾರೆ . ಇವರ ಜೊತೆಯಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯುತ್ತಾರೆ . ಈ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಪ್ರಶ್ನೆ ಉದ್ಭವಿಸುವುದಿಲ್ಲ.ಸಾಮಾನ್ಯವಾಗಿ , ವಿದ್ಯಾರ್ಥಿಗಳಿಗೆ ಪರೀಕ್ಷೆಯೆಂದರೆ ಹೆಚ್ಚಿನ ಆತಂಕ , ಭಯ ಮತ್ತು ಒತ್ತಡವಿರುತ್ತದೆ.
ಇಂತಹ ಸಂದರ್ಭದಲ್ಲಿ, ಸಮವಸ್ತ್ರ ಸಿಗದ / ಲಭ್ಯವಿಲ್ಲದ , ಖಾಸಗಿ / ಪುನರಾವರ್ತಿತ ವಿದ್ಯಾರ್ಥಿಗಳು ಹಾಗು ಶೈಕ್ಷಣಿಕ ವರ್ಷದ ಕೊನೆಯವರೆಗೆ ಸಮವಸ್ತ್ರ ಕಡ್ಡಾಯಗೊಳಿಸದೆ, ಪರೀಕ್ಷೆ ಪ್ರಾರಂಭವಾಗುವ ಎರಡು ದಿನಗಳ ಮುನ್ನ ಕಡ್ಡಾಯಗೊಳಿಸುವ ಈ ರೀತಿಯ ಆದೇಶ ಮಕ್ಕಳಲ್ಲಿ ಆತಂಕ ಮೂಡಿಸುತ್ತದೆ . ನಿಜಕ್ಕೂ ಇದು ನ್ಯಾಯಸಮ್ಮತವಲ್ಲ ಎಂಬುದು ನನ್ನ ಅಭಿಪ್ರಾಯ.
ಈ ಎಲ್ಲ ಕಾರಣಗಳಿಂದ , ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕೇಂದ್ರವನ್ನಾಗಿಟ್ಟುಕೊಂಡು , ನಾಳಿನ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾರಣಾಂತರದಿಂದ ಸಮವಸ್ತ್ರ ಧರಿಸದಿದ್ದಲ್ಲಿ ಅಂತಹ ಮಕ್ಕಳ ಮೇಲೆ ಅವರ ಆತ್ಮಸ್ಥೈರ್ಯ ಕುಂದಿಸುವ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.
ಡಾ. ನಿರಂಜನಾರಾಧ್ಯ .ವಿ.ಪಿ ಅವರು ಕರ್ನಾಟಕದ ಅಭಿವೃದ್ಧಿ ಶಿಕ್ಷಣ ತಜ್ಞ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಮಾರ್ಗದರ್ಶಕರಾಗಿದ್ದಾರೆ.