ಉಡುಪಿ: ಹೇಗಾದರೂ ಎಸೆಸೆಲ್ಸಿ ಪರೀಕ್ಷೆ ಪಾಸು ಮಾಡಬೇಕೆಂಬ ಅದಮ್ಯ ಉತ್ಸಾಹ, ಅದಕ್ಕಾಗಿ ನಡೆಸಿದ ಶ್ರಮಕ್ಕೆ ಈ ಬಾರಿ ಫಲ ದೊರೆತೀತೆಂಬ ನಿರೀಕ್ಷೆ.
ಮಾ.23ರಂದು ಆರಂಭಗೊಂಡ ಎಸೆಸೆಲ್ಸಿ ಪರೀಕ್ಷೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದವರಲ್ಲಿ ಅನೇಕ ಮಂದಿ ನಾನಾ ವಿಧದ ಉದ್ಯೋಗ ಮಾಡಿಕೊಂಡಿರುವವರಿದ್ದರು. ಖಾಸಗಿ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರಗಳಲ್ಲಿ ಒಂದಾಗಿದ್ದ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ 191 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ತರುಣ ತರುಣಿಯರಿಂದ ಮೊದಲ್ಗೊಂಡು 38 ವರ್ಷ, 54 ವರ್ಷ ದಾಟಿದವರು ಕೂಡ ಪರೀಕ್ಷೆ ಬರೆದರು. ಪರೀಕ್ಷೆ ಮುಗಿಸಿ ಹೊರ ಬಂದವರ ಪೈಕಿ ಕೆಲವರನ್ನು “ಉದಯವಾಣಿ’ ಮಾತನಾಡಿಸಿದಾಗ ಖುಷಿಯಿಂದಲೇ ಪ್ರತಿಕ್ರಿಯಿಸಿದರು.”ಇಂದಿನ ಪರೀಕ್ಷೆ ಸುಲಭವಾಗಿತ್ತು. ತೇರ್ಗಡೆಯಾಗುವ ನಿರೀಕ್ಷೆ ಇದೆ. ನಾನು ಮೇಸ್ತ್ರಿಯಾಗಿ ಕಳೆದ 8-9 ವರ್ಷಗಳಿಂದ ದುಡಿಯುತ್ತಿದ್ದೇನೆ. ಹೇಗಾದರೂ ಎಸೆಸೆಲ್ಸಿ ಪಾಸ್ ಮಾಡಬೇಕು. ಕನಿಷ್ಠ ವಾಹನ ಚಾಲಕನಾಗಿ ದುಡಿಯಬೇಕು, ಇಲ್ಲವೆ ಬೇರೆ ಯಾವುದಾದರೂ ಕೆಲಸಕ್ಕೆ ಪ್ರಯತ್ನಿಸುವ ಯೋಚನೆ ಇದೆ’ ಎಂದು ಶಂಕರ ನಾರಾಯಣದ ರವಿ ಅವರು ಹೇಳಿದರು.
ಕಾರ್ಕಳ ಮನೋಜ್ ಅವರು ಸಣ್ಣ ವ್ಯಾಪಾರವನ್ನು ನಡೆಸಿಕೊಂಡು ಬರುತ್ತಿದ್ದು ಅವರು ಕೂಡ ಪರೀಕ್ಷೆ ಬರೆದರು. “ಇದೊಂದು ನಮಗೆ ದೊರೆತಿರುವ ಅವಕಾಶ. ಖಾಸಗಿಯಾಗಿ ಪರೀಕ್ಷೆ ಬರೆಯುವವರನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವಂತಾಗಬೇಕು. ಯಾಕೆಂದರೆ ಅವರಲ್ಲಿ ಅನೇಕರ ಉದ್ಯೋಗದ ಜತೆಗೆ ವಿದ್ಯಾಭ್ಯಾಸ ಮಾಡುವವರು’ ಎಂದರು ಮನೋಜ್.
ಇತರ ವಿದ್ಯಾರ್ಥಿಗಳು ಶಾಲಾ ಕಟ್ಟಡದ ಮೊದಲ ಮಹಡಿಯಲ್ಲಿ ಪರೀಕ್ಷೆ ಬರೆದರು. ವಿಕಲಚೇತನ ವಿದ್ಯಾರ್ಥಿಗೆ ಶಾಲೆಯ ತಳಮಹಡಿಯಲ್ಲಿಯೇ ಪ್ರತ್ಯೇಕವಾಗಿ ಅವಕಾಶ ಮಾಡಿಕೊಡಲಾಯಿತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಿಸಿಟಿವಿ ಕಣ್ಗಾವಲಿತ್ತು.
ಉತ್ತಮ ಅವಕಾಶ
ನೂರಾರು ಮಂದಿ ಉದ್ಯೋಗ ಮಾಡಿಕೊಳ್ಳುತ್ತಲೇ ಪರೀಕ್ಷೆ ಬರೆಯಲು ಬಯಸುತ್ತಾರೆ. ಇಂತವರಿಗೆ ಖಾಸಗಿಯಾಗಿ ಬರೆಯುವ ಅವಕಾಶದಿಂದ ಅನುಕೂಲವಾಗಿದೆ. ಎಸೆಸೆಲ್ಸಿ ವಿದ್ಯಾಭ್ಯಾಸ ಈಗ ಅತ್ಯಗತ್ಯ. ಹಾಗಾಗಿ ಖಾಸಗಿಯಾಗಿ ಪರೀಕ್ಷೆ ಬರೆಯುವವರು ಕೂಡ ಅನೇಕ ಮಂದಿ ಇದ್ದಾರೆ. ಖಾಸಗಿಯಾಗಿ ಪರೀಕ್ಷೆ ಬರೆದು ಸಾಧನೆ ಮಾಡಿದವರು ಹಲವರಿದ್ದಾರೆ.
-ಉಮೇಶ್ ನಾೖಕ್,
ಸ್ನೇಹ ಟ್ಯೂಟೋರಿಯಲ್ಸ್ ಪ್ರಾಂಶುಪಾಲ