ಮುದ್ದೇಬಿಹಾಳ: 4 ತಿಂಗಳ ಹಸುಗೂಸಿನೊಂದಿಗೆ ಮಹಿಳೆಯೊಬ್ಬರು ಕೊಡಗಾನೂರಿನ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೇಂದ್ರವೊಂದಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ತಾಳಿಕೋಟೆ ತಾಲೂಕು ಕೊಡಗಾನೂರ ಗ್ರಾಮದ ತಸ್ಲೀಮಾ ಮಕಾಂದಾರ್ ಪರೀಕ್ಷೆ ಬರೆದ ಮಹಿಳೆ.
ತಸ್ಲೀಮಾ ಖಾಸಗಿಯಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಹಿಂದೆ ಜಿಲ್ಲಾ ಕೇಂದ್ರದಲ್ಲಿ ಎಸ್‍ಎಸ್‍ಎಲ್‍ಸಿ ಖಾಸಗಿ ಪರೀಕ್ಷೆಯನ್ನು ಆಯೋಜಿಸುತ್ತಿದ್ದರು. ಈ ಬಾರಿ ತಾಲೂಕು ಕೇಂದ್ರದಲ್ಲಿ ಪ್ರಾರಂಭಿಸಿದ್ದರಿಂದ ಮಹಿಳೆ ಅಂದಾಜು 30-35 ಕಿ.ಮೀ ದೂರದಲ್ಲಿರುವ ಕೊಡಗಾನೂರಿನಿಂದ ಇಲ್ಲಿನ ಅಭ್ಯೂದಯ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಪ್ರಾರಂಭಿಸಿರುವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ಪರೀಕ್ಷಾ ನಿಯಮಗಳಂತೆ ಮಗುವನ್ನು ಕೇಂದ್ರದ ಹೊರಗೆ ಕರ್ತವ್ಯಕ್ಕೆ ನಿಯೋಜಿಸಿದ್ದ ಆಶಾ ಕಾರ್ಯಕರ್ತೆ ಉಮಾ ಶಾರದಳ್ಳಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಕ್ಷಕಿ ನದಾಫ ಅವರ ಆರೈಕೆಯಲ್ಲಿ ಬಿಟ್ಟು ಪರೀಕ್ಷೆ ಬರೆದಿದ್ದಾರೆ.
ಇದನ್ನೂ ಓದಿ:ಎಸ್‍ಎಸ್‍ಎಲ್‍ಸಿ ಪರೀಕ್ಷೆ: 3 ಕಿ.ಮೀ ದೂರ ವೀಲ್ ಚೇರ್ ನಲ್ಲಿ ಬಂದು ಪರೀಕ್ಷೆ ಬರೆದ ವಿಶೇಷಚೇತನ
ಆಗಾಗ ಪರೀಕ್ಷೆಯಿಂದ ಹೊರಗೆ ಬಂದು ಮಗುವಿಗೆ ಎದೆ ಹಾಲು, ನೀರು ಕುಡಿಸಿ ಸಮಾಧಾನ ಪಡಿಸಿ ಮತ್ತೆ ಕೊಠಡಿಯೊಳಕ್ಕೆ ಹೋಗಿ ಪರೀಕ್ಷೆ ಬರೆದಿದ್ದಾರೆ. ಆಶಾ ಮತ್ತು ಸ್ಕೌಟ್ಸ್ ಸಿಬ್ಬಂದಿ ಪರೀಕ್ಷೆ ಮುಗಿಯುವವರೆಗೂ ಮಗುವಿನ ಲಾಲನೆ, ಪಾಲನೆ ಮಾಡಿ ಮಾನವೀಯತೆ ಅನಾವರಣಗೊಳಿಸಿದರು.