Advertisement

ನಾಳೆಯಿಂದ ಎಸೆಸೆಲ್ಸಿ ಪರೀಕ್ಷೆ: ಉಭಯ ಜಿಲ್ಲೆಗಳು ಸನ್ನದ್ಧ

01:58 AM Mar 27, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15,615 ಹುಡುಗರು ಮತ್ತು 14,097 ಹುಡುಗಿಯರ ಸಹಿತ ಒಟ್ಟು 29,712 ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿಕೊಂಡಿದ್ದಾರೆ.

Advertisement

ಜಿಲ್ಲೆಯ 7 ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ವ್ಯಾಪ್ತಿಯಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 523 ಶಾಲೆಗಳ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಬರೆಯಲು 1,489 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ವಿಶ್ರಾಂತಿಗಾಗಿ 198 ಕೊಠಡಿಗಳನ್ನು ಕಾದಿರಿಸಲಾಗಿದೆ.

99 ಪರೀಕ್ಷಾ ಕೇಂದ್ರಗಳಿಗೆ 99 ಮುಖ್ಯ ಅಧೀಕ್ಷಕರು, 24 ಉಪ ಮುಖ್ಯ ಅಧೀಕ್ಷಕರು, 99 ಕಸ್ಟೋಡಿಯನ್‌, 99 ಸ್ಥಾನಿಕ ಜಾಗೃತ ದಳ ಅಧಿಕಾರಿಗಳು, 99 ಮಂದಿ ಮೊಬೈಲ್‌ ಫೋನ್‌ ಸ್ವಾಧೀನಾಧಿಕಾರಿಗಳು, 35 ಮಾರ್ಗಾಧಿಕಾರಿಗಳು, 1588 ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸುಧಾಕರ್‌ ಕೆ. ಮಾಹಿತಿ ನೀಡಿದ್ದಾರೆ.

ಬಂಟ್ವಾಳದಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದು, 96 ಶಾಲೆಗಳ ವಿದ್ಯಾರ್ಥಿಗಳು 292 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಬೆಳ್ತಂಗಡಿಯಲ್ಲಿ 14 ಕೇಂದ್ರಗಳ 205 ಕೊಠಡಿಗಳಲ್ಲಿ 72 ಶಾಲೆಗಳ ವಿದ್ಯಾರ್ಥಿಗಳು, ಮಂಗಳೂರು ಉತ್ತರದ 20 ಕೇಂದ್ರಗಳ 281 ಕೊಠಡಿಗಳಲ್ಲಿ 98 ಶಾಲೆಗಳ ವಿದ್ಯಾರ್ಥಿಗಳು, ಮಂಗಳೂರು ದಕ್ಷಿಣದಲ್ಲಿ 23 ಕೇಂದ್ರಗಳ 273 ಕೊಠಡಿಗಳಲ್ಲಿ 110 ಶಾಲಾ ವಿದ್ಯಾರ್ಥಿಗಳು, ಮೂಡಬಿದಿರೆಯ 5 ಕೇಂದ್ರಗಳ 92 ಕೊಠಡಿಗಳಲ್ಲಿ 31 ಶಾಲೆಗಳ ವಿದ್ಯಾರ್ಥಿಗಳು, ಪುತ್ತೂರಿನ 14 ಕೇಂದ್ರಗಳ 248 ಕೊಠಡಿಗಳಲ್ಲಿ 28 ಶಾಲೆಗಳ ವಿದ್ಯಾರ್ಥಿಗಳು, ಸುಳ್ಯದ 6 ಕೇಂದ್ರಗಳ 98 ಕೊಠಡಿಗಳಲ್ಲಿ 36 ಶಾಲೆಗಳ ವಿದ್ಯಾರ್ಥಿಗಳ ಸಹಿತ ಒಟ್ಟು 523 ಶಾಲೆಗಳ ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಒಟ್ಟು 29,712 ವಿದ್ಯಾರ್ಥಿಗಳ ಪೈಕಿ 28,639 ರೆಗ್ಯುಲರ್‌, 932 ಖಾಸಗಿ ಹಾಗೂ 141 ಪುನರಾವರ್ತಿತ ವಿದ್ಯಾರ್ಥಿಗಳು.
ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಸಾಮಾನ್ಯವಾಗಿ ಜಿಲ್ಲಾ ಕೇಂದ್ರದಲ್ಲಿ ಇರುತ್ತದೆ. ಆದರೆ ಈ ಬಾರಿ ಪುತ್ತೂರು, ಸುಳ್ಯ ಕಡಬ, ಬೆಳ್ತಂಗಡಿ ತಾಲೂಕುಗಳ ಖಾಸಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ಇದೆ ಎಂದು ಡಿಡಿಪಿಐ ಸುಧಾಕರ್‌ ತಿಳಿಸಿದ್ದಾರೆ. ಎಲ್ಲ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆದಿದೆ ಎಂದು ಡಿಡಿಪಿಐ ಸುಧಾಕರ್‌ ತಿಳಿಸಿದ್ದಾರೆ.

Advertisement

200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ
ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆಯನ್ನು ಹೊರಡಿಸಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮತ್ತು ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಆದೇಶಿಸಿದ್ದಾರೆ.

8 ಮಂದಿ ಎಂಡೋ
ಪೀಡಿತ ವಿದ್ಯಾರ್ಥಿಗಳು
8 ಮಂದಿ ಎಂಡೋಪೀಡಿತ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯುತ್ತಿರುವುದು ಈ ಬಾರಿಯ ವಿಶೇಷ. ಈ 8 ಮಂದಿ ವಿದ್ಯಾರ್ಥಿಗಳಿಗಾಗಿ ಪುತ್ತೂರು ತಾಲೂಕಿನ ರಾಮಕುಂಜ ಪದವಿಪೂರ್ವ ಕಾಲೇಜಿನಲ್ಲಿ ಉಪ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. 5 ಮಂದಿ ಖಾಸಗಿ ಮತ್ತು 3 ಮಂದಿ ರೆಗ್ಯುಲರ್‌ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ಉಡುಪಿ: 957 ಅಧಿಕಾರಿ, ಸಿಬಂದಿ
ಉಡುಪಿ: ಸೋಮವಾರ ಆರಂಭವಾಗಲಿರುವ ಎಸೆಸೆಲ್ಸಿ ಪರೀಕ್ಷೆಗೆ ಜಿಲ್ಲೆಯ 58 ಕೇಂದ್ರಗಳಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, 266 ಪ್ರೌಢಶಾಲೆಗಳ 14,022 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷೆ ಭದ್ರತೆ ಸಹಿತ ವಿವಿಧ ಕಾರ್ಯಗಳಿಗೆ 957 ಮಂದಿ ಯನ್ನು ನಿಯೋಜಿಸಲಾಗಿದೆ. ಮುಖ್ಯ ಅಧೀಕ್ಷಕರು, ಉಪ ಮುಖ್ಯಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಮತ್ತು ಕೊಠಡಿ ಮೇಲ್ವಿಚಾರಕರಿಗೆ ತರಬೇತಿ ನೀಡ ಲಾಗಿದೆ. ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸಾಗಿಸಲು ಮತ್ತು ಉತ್ತರ ಪತ್ರಿಕೆ ಪಡೆಯಲು 46 ಮಾರ್ಗಾಧಿ ಕಾರಿಗಳ ತಂಡಗಳನ್ನು ರಚಿಸಲಾಗಿದೆ.

ಪರೀಕ್ಷೆ ಅವ್ಯವಹಾರ ತಡೆಯಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಸಂಚಾರಿ ವಿಚಕ್ಷಣ ದಳ ನೇಮಿಸಲಾಗಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲೂ ಸ್ಥಾನಿಕ ಜಾಗೃತ ದಳ, ಪೊಲೀಸ್‌ ಪಹರೆ, ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಲಾಗಿದೆ. ಕೇಂದ್ರದ ಸುತ್ತಮುತ್ತ 200 ಮೀ. ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಮತ್ತು ಎಸ್‌ಒಪಿ ಅನುಸಾರ ಕ್ರಮ ತೆಗೆದುಕೊಳ್ಳಲಾಗಿದೆ.

ಸಮವಸ್ತ್ರ ನಿಯಮ ಪಾಲನೆ
ಸರಕಾರಿ ಶಾಲೆಯಲ್ಲಿ ಸರಕಾರ ನಿಗದಿಪಡಿಸಿರುವ ಸಮವಸ್ತ್ರ ಹಾಗೂ ಖಾಸಗಿ, ಅನುದಾನಿತ ಶಾಲೆಗಳಲ್ಲಿ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಮುಖ್ಯ ಪರೀಕ್ಷೆಗೆ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಹಿಜಾಬ್‌ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ.

ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿದ್ಯಾರ್ಥಿ ಗಳು ಶಾಲೆಯ ಸಮವಸ್ತ್ರ ದಲ್ಲಿ ಬಂದು ಪರೀಕ್ಷೆ ಬರೆಯಬೇಕು.
– ಕೂರ್ಮಾ ರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next