ಕಾರಟಗಿ: ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆಗೊಳಪಡಿಸಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಶಾಸಕ ಬಸವರಾಜ ದಡೆಸೂಗುರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳು, ಪಾಲಕರು ಆತಂಕಗೊಂಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಅಲ್ಲದೆ ಪರೀಕ್ಷಾ ಕೊಠಡಿಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಸಾನಿಟೈಸರ್, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೊಠಡಿ ಮೇಲ್ವಿಚಾರಕರು ಕಟ್ಟುನಿಟ್ಟಾಗಿ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದರು.
ತಹಶೀಲ್ದಾರ್ ಕವಿತಾ ಆರ್. ಮಾತನಾಡಿ, ಜೂ.25ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ತಾಲೂಕಾಡಳಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಲ್ಲಿ ಯಾವುದೇ ತೊಂದರೆಯಾಗದಂತೆ ಅಗತ್ಯ ಎಲ್ಲಾ ಸಿದ್ಧತಾ ಕ್ರಮಗಳನ್ನು ನಡೆಸುತ್ತಲಿದೆ. ಪರೀಕ್ಷೆ ನಡೆಯುವ ಎರಡು ದಿನ ಮುಂಚಿತವಾಗಿ ಪರೀಕ್ಷಾ ಕೊಠಡಿಗಳನ್ನು ಸಾನಿಟೈಸ್ ಮಾಡಲಾಗುವುದು. ಉಳಿದಂತೆ ನಿಗದಿಪಡಿಸಿದ ಎಲ್ಲಾ ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದರು.
ಬಿಇಒ ಸೋಮಶೇಖರಗೌಡ ಮಾತನಾಡಿ, ಪಟ್ಟಣದಲ್ಲಿ 2 ಪರೀಕ್ಷಾ ಕೇಂದ್ರಗಳಿದ್ದು, ಒಟ್ಟು 710 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರಿ ಬಸ್‌ಗಳ ವ್ಯವಸ್ಥೆ ಸಾರಿಗೆ ಇಲಾಖೆ ಮಾಡಲಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಯಾವುದೇ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ಪರೀಕ್ಷೆಗಳು ನಡೆಸಲೂ ಎಲ್ಲ ಪೂರ್ವ ಸಿದ್ಧತಾ ಕಾರ್ಯ ನಡೆಸಲಾಗಿದೆ ಎಂದರು.
ಕನಕಗಿರಿ ತಹಶೀಲ್ದಾರ್ ರವಿ ಅಂಗಡಿ, ಪಿಎಸ್‌ಐ ಅವಿನಾಶ ಕಾಂಬ್ಳೆ, ತಾಪಂ ಇಒ ಚಂದ್ರಶೇಖರ, ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ಪ್ರಾಚಾರ್ಯ ಅನಿಲಕುಮಾರ, ವಿರೂಪಾಕ್ಷಪ್ಪ ಕೋರಿ, ತಿರುಮಲಮ್ಮ, ವಿ.ವಿ. ಗೊಂಡಬಾಳ, ಸುರೇಶ ಕುಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಇದ್ದರು