Advertisement

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

10:54 AM Nov 25, 2020 | mahesh |

ಶೈಕ್ಷಣಿಕ ವರ್ಷದ ಲೆಕ್ಕದಲ್ಲಿ ಮುಂದಿನ ಆರು ತಿಂಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯಬೇಕು. ಆದರೆ ಇನ್ನೂ ಪಠ್ಯಕ್ರಮವೇ ಅಂತಿಮಗೊಂಡಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಇನ್ನೂ ಏಕೆ ವಿಳಂಬ ಮಾಡುತ್ತಿದೆ ಎಂಬುದು ವಿದ್ಯಾರ್ಥಿಗಳು, ಪೋಷಕರ ಪ್ರಶ್ನೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಆತಂಕವನ್ನು ಇಲಾಖೆಗೆ ಮನದಟ್ಟು ಮಾಡಿಕೊಡಲು ಈ ಅಭಿಯಾನ.

Advertisement

ಮಣಿಪಾಲ: ಈ ಶೈಕ್ಷಣಿಕ ವರ್ಷ ಮುಗಿಯಲು ಇರುವುದು ಕೇವಲ ಆರು ತಿಂಗಳು. ಆದರೂ ಎಸೆಸೆಲ್ಸಿ ಪಠ್ಯಕ್ರಮವೂ ಪ್ರಕಟವಾಗಿಲ್ಲ. ಅಷ್ಟೇ ಅಲ್ಲ; ಯಾವುದು, ಎಷ್ಟು ಎಂಬ ಯಾವ ಸ್ಪಷ್ಟತೆಯೂ ಇಲ್ಲ. ಹೀಗಿದ್ದರೆ ವಿದ್ಯಾರ್ಥಿಗಳು ಸಿದ್ಧವಾಗುವುದು ಹೇಗೆ? ಶಿಕ್ಷಕರು ಪಾಠ ಮಾಡುವುದು ಹೇಗೆ?

ಈ ಪ್ರಶ್ನೆಗಳೇ ಈಗ ರಾಜ್ಯಾದ್ಯಂತ ಸಾರ್ವತ್ರಿಕಗೊಂಡಿವೆ. ಗುರುವಾರ ಪಿಯುಸಿ ಪಠ್ಯಕ್ರಮ ಬಿಡುಗಡೆಯಾದ ಮೇಲಂತೂ ಎಸೆಸೆಲ್ಸಿ ಪಠ್ಯಕ್ರಮ ನೀಡಲು ಇನ್ನೆಷ್ಟು ದಿನ ಬೇಕು, ಯಾವಾಗ ಪ್ರಕಟಗೊಳ್ಳುತ್ತದೆ ಎಂಬ ಪ್ರಶ್ನೆಗಳು ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕ ವಲಯದಲ್ಲಿ ಹೆಚ್ಚಾಗಿವೆ.

ಮುಂದಿನ ಎಪ್ರಿಲ್‌ಗೆ ಶೈಕ್ಷಣಿಕ ವರ್ಷ ಪೂರ್ಣಗೊಳ್ಳಬೇಕು. ಅದಕ್ಕೆ ಇರುವುದು ಕೇವಲ ಆರು ತಿಂಗಳು. ಇದರಲ್ಲಿ ಪಠ್ಯಕ್ರಮಕ್ಕೆ ಸಿಗುವುದು ಅಲ್ಪಾವಧಿ ಮಾತ್ರ. ಆದರೂ ಸಾರ್ವಜನಿಕ ಶಿಕ್ಷಣ ಇಲಾಖೆ ಪಠ್ಯಕ್ರಮ ಬಿಡುಗಡೆಗೆ ವಿಳಂಬ ಮಾಡು ತ್ತಿರುವುದೇಕೆ ಎಂಬ ಪ್ರಶ್ನೆ ಎದುರಾಗಿದೆ.

ಬರೀ ಗೊಂದಲ
ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಆರಂಭಿಸಬೇಕೋ ಬೇಡವೋ ಎಂಬ ಗೊಂದಲದಿಂದ ಆರಂಭವಾಗಿ, ಬಳಿಕ ಪಠ್ಯಕ್ರಮ ಕಡಿತ ಬೇಕೋ-ಬೇಡವೋ ಎಂಬ ಗೊಂದಲ. ಅನಂತರ ವಿದ್ಯಾಗಮದ್ದು. ಇದರ ಮಧ್ಯೆ ಶೇ. 30ರಷ್ಟು ಪಠ್ಯಕ್ರಮ ಕಡಿತವೆಂದು ನಿರ್ಧರಿಸಿ, ಜಾರಿ ಗೊಳ್ಳುವಷ್ಟರಲ್ಲಿ ಇಲಾಖೆ ಆರೇ ದಿನಗಳಲ್ಲಿ ತಡೆ ನೀಡಿತು. ಜುಲೈ ಮಾಸಾಂತ್ಯದಲ್ಲಿ ಆದೇಶವನ್ನು ವಾಪಸ್‌ ಪಡೆದಿದ್ದು, 3 ತಿಂಗಳಾದರೂ ಪಠ್ಯಕ್ರಮದ ಕುರಿತು ಹೊಸ ಆದೇಶ ಅಥವಾ ಸೂಚನೆ ಬಂದಿಲ್ಲ.

Advertisement

ಶಿಕ್ಷಕರ ವಲಯದಲ್ಲಿ ಪಠ್ಯಕ್ರಮ ಕಡಿತದ ಬಗ್ಗೆ ಇರುವ ಅಭಿಪ್ರಾಯವೆಂದರೆ, ಹೇಗೋ ಹೊಂದಿಸಿಕೊಂಡು ಶೇ. 40ರಷ್ಟು ಪಠ್ಯ ಕಡಿತ ಮಾಡಬಹುದೇ ವಿನಾ ಅದಕ್ಕಿಂತ ಹೆಚ್ಚು ಕಡಿತ ಮಾಡಿ ದರೆ ಅರ್ಥವೇ ಇರದು. ಪಾಠಗಳು ಪರಸ್ಪರ ಒಂದಕ್ಕೊಂದು ಅಂತರ್‌ ಸಂಬಂಧಿಯಾಗಿರುವುದರಿಂದ ಮನಸೋ ಇಚ್ಛೆ ಕಡಿತ ಮಾಡಲೂ ಆಗದು. ಅದರಿಂದ ವಿದ್ಯಾರ್ಥಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು .

ಮುದ್ರಿತ ವೀಡಿಯೋ ತರಗತಿಗಳು (ಆನ್‌ಲೈನ್‌) ಏಕಮುಖ ವಾಗಿದ್ದು ಮಕ್ಕಳ ಎಲ್ಲ ಗೊಂದಲವನ್ನು ಬಗೆಹರಿಸುತ್ತಿಲ್ಲ. ಇದರಿಂದ ಗೊಂದಲ ಇನ್ನಷ್ಟು ಹೆಚ್ಚಾಗುತ್ತಿವೆಯಲ್ಲದೇ ಕೆಲವು ಮಕ್ಕಳು ಅರ್ಥವಾಗದ ಪಾಠ, ಪ್ರಶ್ನೆಯನ್ನು ಬಿಟ್ಟು ಬಿಡುವ ಸ್ಥಿತಿಗೆ ಬಂದಿದ್ದಾರೆ. ಇದಲ್ಲದೇ ಬಹಳಷ್ಟು ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ನೆಟ್‌ವರ್ಕ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಶಾಲೆ ಆರಂಭವಾದ ಮೇಲೆ ಇವರೆಲ್ಲರನ್ನೂ ಒಂದೇ ಹಂತಕ್ಕೆ ತಂದು ಉಳಿದ ಪಠ್ಯ ಬೋಧಿಸ ಬೇಕಾಗುವ ಅನಿವಾರ್ಯ ಸ್ಥಿತಿ ಶಿಕ್ಷಕರದ್ದು.

ಯಾರಿಗೆ ನಷ್ಟ?
ಶೈಕ್ಷಣಿಕ ವರ್ಷದ ಪ್ರಕಾರ ಅಕ್ಟೋಬರ್‌ಗೆ ಮಧ್ಯಾಂತರ ರಜೆಯಲ್ಲಿ ತೆರಳುವ ಮೊದಲು ಶೇ. 60ರಷ್ಟು ಪಠ್ಯಕ್ರಮ ಆಧರಿಸಿದ ಮಧ್ಯಾಂತರ ಪರೀಕ್ಷೆ ಮುಗಿದಿರುತ್ತಿತ್ತು. ರಜೆಯ ಬಳಿಕ ಡಿಸೆಂಬರ್‌ನೊಳಗೆ (ಎರಡು ತಿಂಗಳು) ಪಠ್ಯಕ್ರಮ ಪೂರೈಸಿ, ಜನವರಿಯಿಂದ ಪುನರಾವಲೋಕನ ತರಗತಿಗಳನ್ನು ಆರಂಭಿಸಬೇಕು. ಫೆಬ್ರವರಿ-ಮಾರ್ಚ್‌ ಸಾಮಾನ್ಯವಾಗಿ ಪೂರ್ವಸಿದ್ಧತೆ ಪರೀಕ್ಷೆಗೆ ಮೀಸಲಾದ ತಿಂಗಳುಗಳು. ಇಷ್ಟೆಲ್ಲವನ್ನು ವ್ಯವಸ್ಥಿತವಾಗಿ ಪೂರೈಸಿದರೆ ಮಾತ್ರ ಫ‌ಲಿತಾಂಶ ತೃಪ್ತಿಕರವಾಗಿರ ಬಲ್ಲ ದು. ಆದರೆ ಈ ವರ್ಷ ಇವೆಲ್ಲವನ್ನೂ ಕೈಬಿಡಬೇಕಾದ ಸ್ಥಿತಿ ಇದೆ.

ಪಠ್ಯಕ್ರಮ ಬೋಧನ ಅವಧಿ ಕಡಿಮೆ ಮಾಡಿದಷ್ಟು ಸರಾಸರಿ ಮಟ್ಟದಲ್ಲಿ ಉತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ನಷ್ಟ ಹೆಚ್ಚಾಗಲಿದೆ. ಯಾಕೆಂದರೆ ಕೇವಲ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹಲವು ಜಿಲ್ಲೆಗಳಲ್ಲಿ ಹೆಚ್ಚಿದೆ. ಪುನರಾವಲೋಕನ ತರಗತಿಗಳು ಮತ್ತು ಪೂರ್ವಸಿದ್ಧತಾ ಪರೀಕ್ಷೆ ಈ ವಿದ್ಯಾರ್ಥಿಗಳ ಫ‌ಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಒಂದುವೇಳೆ ಪುನರಾವಲೋಕನ ಮತ್ತು ಪೂರ್ವ ಸಿದ್ಧತಾ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲಾಗದು. ಆಗ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗುವ ಆತಂಕವಿದೆ. ವಿಚಿತ್ರವೆಂದರೆ ಕಳೆದ ವರ್ಷವೂ (2019-20) ಇದೇ ರೀತಿ ಗೊಂದಲವಾಗಿ ಸರಿಯಾಗಿ ನಡೆಸಲಾಗಿರಲಿಲ್ಲ.

ವಿದ್ಯಾರ್ಥಿಗಳಿಗೇ ಹೆಚ್ಚು ನಷ್ಟ
ಅತಿಯಾದ ಪಠ್ಯಕ್ರಮ ಕಡಿತದಿಂದ ವಿದ್ಯಾರ್ಥಿಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಭಾಷಾ ವಿಷಯ, ಸಮಾಜ ವಿಜ್ಞಾನದಲ್ಲಿ ಸ್ವಲ್ಪ ಕಡಿತವಾದರೂ ಹೊಂದಿಸಿಕೊಳ್ಳಬಹುದು. ಆದರೆ ಗಣಿತ ಮತ್ತು ವಿಜ್ಞಾನ ಪರಿಕಲ್ಪನೆ ಆಧರಿತವಾದುದು. ಒಂದುವೇಳೆ ಹಾಗೆ ಪೂರ್ಣ ತೆಗೆದರೆ ಪ್ರಥಮ ಪಿಯುಸಿಯಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಹಿಂದೆ ಸ್ಪೈರಲ್‌ ಅಪ್ರೋಚ್‌ (ಒಂದು ವಿಷಯವನ್ನು ಎಂಟು, ಒಂಬತ್ತು ಮತ್ತು ಎಸೆಸ್ಸಲ್ಸಿಯಲ್ಲಿ ವಿವಿಧ ಹಂತಗಳಲ್ಲಿ ಕಲಿಯುವುದು) ಬೋಧನ ಕ್ರಮವಿತ್ತು. ಆಗ ಮೂಲ ಪರಿಕಲ್ಪನೆಗಳನ್ನು ಅರಿಯಲು ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈಗಿನ ಪದ್ಧತಿ ಅದಕ್ಕೆ ವಿರುದ್ಧವಾಗಿದೆ. ಹಾಗಾಗಿ ವಿದ್ಯಾರ್ಥಿಗೆ ಹೆಚ್ಚು ನಷ್ಟವಾಗುವ ಸಂಭವವೇ ಹೆಚ್ಚು.

ಎಸೆಸೆಲ್ಸಿ ಕಡಿತ: ಅಭಿಪ್ರಾಯ ಸಂಗ್ರಹ
ಎಸೆಸೆಲ್ಸಿ ವರೆಗಿನ ಪಠ್ಯ ಪರಿಷ್ಕರಣೆ ಸಂಬಂಧ ರಾಜ್ಯ ಸರಕಾರವು ಈಗಾಗಲೇ 15ಕ್ಕೂ ಅಧಿಕ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದೆ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಈಗಾಗಲೇ ಶೇ.30ರಷ್ಟು ಪಠ್ಯ ಕಡಿತಕ್ಕೆ ನಿರ್ಧಾರ ಮಾಡಿದ್ದು, ಅನಂತರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿತ್ತು. ಈಗ ಹೊಸ ಪರಿಷ್ಕರಣೆಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಓದಿಗೆ ಸಮಸ್ಯೆ
ಪರಿಷ್ಕೃತ ಪಠ್ಯಕ್ರಮ ಇನ್ನೂ ಬಾರದಿರುವುದರಿಂದ ಓದಿಗೆ ಸಮಸ್ಯೆಯಾಗುತ್ತಿದೆ. ಎಸೆಸೆಲ್ಸಿ ನಮ್ಮ ಜೀವನದ ಬಹುಮುಖ್ಯ ಘಟ್ಟವಾಗಿದ್ದು, ಆನ್‌ಲೈನ್‌ ಶಿಕ್ಷಣದಡಿ ಕಲಿಯುವುದು ಕಷ್ಟ. ಶಾಲೆ ಯಾವಾಗ ಆರಂಭವಾಗುತ್ತದೆ ಎಂಬುದೂ ಸ್ಪಷ್ಟವಾಗಿಲ್ಲ.
-ಶೃಂಗಾರ್‌ ಎನ್‌. ನಂದನಪುರ, ವಿದ್ಯಾರ್ಥಿ

ಅಸಮರ್ಪಕ ಮಾಹಿತಿಯಿಂದ ಗೊಂದಲ
ಟಿವಿ ಮೂಲಕ ಶಿಕ್ಷಣ ನೀಡಲಾಗುತ್ತಿದ್ದು,ಆಂಗ್ಲ ಮಾಧ್ಯಮದವರು ಅದನ್ನು ಭಾಷಾಂತರಿಸಿ ಕೊಳ್ಳಬೇಕು. ತರಗತಿಯಲ್ಲಿ ಅರ್ಥವಾದಂತೆ ಇದು ಆಗದು. ಸಮಯದ ಅಭಾವ ಮತ್ತು ಅಸಮರ್ಪಕ ಮಾಹಿತಿ ಯಿಂದಾಗಿ ಗೊಂದಲ ಹೆಚ್ಚು, ಸರಿಪಡಿಸಬೇಕು.
-ಭಾವನಾ, ವಿದ್ಯಾರ್ಥಿನಿ, ಉಡುಪಿ

ಬೇಗ ತಿಳಿಸಿದರೆ ಅಧ್ಯಯನಕ್ಕೆ ಸುಲಭ
ಆನ್‌ಲೈನ್‌ ಶಿಕ್ಷಣದಿಂದಾಗಿ ಹೆಚ್ಚುವರಿ ಹೊರೆಯಾಗುತ್ತಿದೆ. ತಲೆನೋವು, ಕಣ್ಣಿನ ಸಮಸ್ಯೆ. ಶೇ.70 ಭಾಗವನ್ನು ಅಧ್ಯಯನ ಮಾಡಬೇಕು. ಪರಿಷ್ಕೃತ ಪಠ್ಯವನ್ನು ಬೇಗನೆ ತಿಳಿಸಬೇಕು. ದಿನಂಪ್ರತಿ ತರಗತಿ ಇದ್ದರಷ್ಟೇ ಓದಿನ ಮೇಲೆ ಹೆಚ್ಚು ಆಸಕ್ತಿ ಸಾಧ್ಯ.
– ಅನನ್ಯಾ, ವಿದ್ಯಾರ್ಥಿನಿ, ಉಡುಪಿ

ಪರಿಷ್ಕೃತ ಪಠ್ಯದ ನಿರೀಕ್ಷೆ
ಎಸೆಸೆಲ್ಸಿಗೆ ಕಡಿತಗೊಳಿಸಿದ ಪಠ್ಯ ಒಮ್ಮೆ ಕಳುಹಿಸಲಾಗಿತ್ತು. ಬಳಿಕ ಗೊಂದಲಗಳಿದ್ದ ಕಾರಣ ಹಿಂಪಡೆದಿದ್ದಾರೆ. ಶಾಲಾರಂಭ ಅನಿಶ್ಚಿತವಾಗಿದೆ. ತರಗತಿ ಶಿಕ್ಷಣವಿಲ್ಲದೆ ಆನ್‌ಲೈನ್‌ ಶಿಕ್ಷಣವೇ ಮುಂದುವರಿದರೆ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಬಹುದು. ವಿದ್ಯಾಗಮ ಅಥವಾ ಆನ್‌ಲೈನ್‌ನ ಲ್ಲಿ ವಿಜ್ಞಾನ, ಗಣಿತ ಪಾಠ ಮಾಡುವುದು ತೀರಾ ಕಷ್ಟ. ಪಾಳಿ ಪದ್ಧತಿಯಲ್ಲಾದರೂ ತರಗತಿ ಆರಂಭಿಸಿದರೆ ಕಲಿಕೆಗೆ ಪೂರಕ.
-ರಾಜೇಂದ್ರ ಕೃಷ್ಣ,  ಶಿಕ್ಷಣ ತಜ್ಞರು, ಮಂಗಳೂರು

ಪರೀಕ್ಷೆ : ಶೀಘ್ರ ನಿರ್ಧಾರವಾಗಲಿ
ಈ ವರ್ಷ ಪಬ್ಲಿಕ್‌ ಪರೀಕ್ಷೆ ಬೇಕೋ ಬೇಡವೋ ಎಂಬ ಬಗ್ಗೆ ಶಿಕ್ಷಣ ಮಂಡಳಿ ನಿರ್ಧಾರ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಮಂಡಳಿಯ ಆಂತರಿಕ ವಿಚಾರಗಳ ಬಗ್ಗೆ ಗಮನ ನೀಡದೆ ಕಲಿಕೆಗೆ ಆದ್ಯತೆ ಕೊಡಬೇಕು. ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡು ಹೊಸ ಕಲಿಕಾ ಕ್ರಮವನ್ನು ಸವಾಲಾಗಿ ಸ್ವೀಕರಿಸಿ ಅಧ್ಯಯನ ನಡೆಸಬೇಕು. ಪರೀಕ್ಷೆ ಇಲ್ಲದಿದ್ದರೂ ಮುಂದಿನ ದಿನಗಳಿಗೆ ಅಧ್ಯಯನ ಅಗತ್ಯ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಪರೀಕ್ಷೆ ಇದ್ದರೆ ಮಂಡಳಿ, ಶಿಕ್ಷಕರು ಸೂಕ್ತ ಸಲಹೆ ಸೂಚನೆ, ಮಾರ್ಗದರ್ಶನ ನೀಡುವರು.
-ಅಶೋಕ್‌ ಕಾಮತ್‌, ಶಿಕ್ಷಣ ತಜ್ಞರು, ಉಡುಪಿ.

ಕನಿಷ್ಠ ಸಿದ್ಧತೆಯನ್ನೂ ಮಾಡಿಲ್ಲ ಮಂಡಳಿ
ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗೆ ಪೂರ್ವಸಿದ್ಧತೆಯನ್ನು ಮಾಡಿ ಕೊಂಡು ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕಿದ್ದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಇನ್ನೂ ಮೌನ ವಹಿಸಿದೆ. ಸ್ಥಳೀಯ ಘಟಕಗಳ ಜತೆಗೆ ಚರ್ಚಿಸಿ ನೀಲನಕ್ಷೆಯನ್ನು ಸಿದ್ಧಪಡಿಸಬೇಕಿದ್ದ ಮಂಡಳಿಯು ಕನಿಷ್ಠ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ ಎಂಬುದು ಆತಂಕ ಹೆಚ್ಚಿಸಿದೆ.

ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆ
ಎಸೆಸೆಲ್ಸಿ ಪಠ್ಯ ಕಡಿತ ನಿರ್ಧಾರ ಯಾವಾಗ? ಪುನರವಲೋಕನ ತರಗತಿಗಳು ಯಾವಾಗ? ಪ್ರಸಕ್ತ ಸಾಲಿನ ಅಂತಿಮ ಪರೀಕ್ಷೆ ಯಾವಾಗ ನಡೆಯಲಿದೆ? ಈ ಶೈಕ್ಷಣಿಕ ವರ್ಷ ಯಾವಾಗ ಮುಗಿಯುತ್ತದೆ?

Advertisement

Udayavani is now on Telegram. Click here to join our channel and stay updated with the latest news.

Next