ಮಂಗಳೂರು: ರಾಜ್ಯದಲ್ಲಿ ಮಾ. 28ರಿಂದ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಅಂತಿಮ ಹಂತದ ಪೂರ್ವಭಾವಿ ಸಿದ್ಧತೆ ಪರಿಶೀಲನ ಸಭೆ ನಡೆಯಿತು.
ಖಾಸಗಿ ಶಾಲೆಗಳಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿ ಯರಿಗೆ ಹಿಜಾಬ್ ಧರಿಸಿಕೊಂಡೇ ಪರೀಕ್ಷೆ ಬರೆಯಲು ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಮಾ. 25ರಂದು ಹೊರಡಿಸಿದ ಆದೇಶದ ಪ್ರಕಾರ ಇದು ಖಾಸಗಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಮಾತ್ರ ಅನ್ವಯ. ಸರಕಾರಿ ಶಾಲೆಗಳ ವಿದ್ಯಾರ್ಥಿನಿಯರು ಸರಕಾರ ರೂಪಿಸಿದ ಸಮವಸ್ತ್ರ ವನ್ನಷ್ಟೇ ಧರಿಸಿಕೊಂಡು ಪರೀಕ್ಷೆ ಬರೆಯ ಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಜಾಬ್ ಸಮವಸ್ತ್ರವನ್ನಾಗಿ ಹೊಂದಿರುವ ಶಾಲೆಗಳ ವಿದ್ಯಾರ್ಥಿಗಳು ಯಾವ ಯಾವ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲಿದ್ದಾರೆ ಎಂಬ ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪಡೆದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದರೆ ಮತ್ತೆ ಬರೆಯಲು ಅವಕಾಶವಿಲ್ಲ : ಬಿ.ಸಿ.ನಾಗೇಶ್ ಸೂಚನೆ
ಅಂತಹ ವಿದ್ಯಾರ್ಥಿನಿಯರು ಶಾಲಾ ಮುಖ್ಯಸ್ಥರ ಸಹಿಯುಳ್ಳ ಪತ್ರವನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ತೋರಿಸಿ ಪರೀಕ್ಷೆ ಬರೆಯ ಬಹುದಾಗಿದೆ ಎಂದು ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೂಸಬ್ಬ ಬ್ಯಾರಿ ತಿಳಿಸಿದ್ದಾರೆ.
ಕೇರಳ ವಿದ್ಯಾರ್ಥಿಗಳಿಗೆ ವಾಹನ ವ್ಯವಸ್ಥೆ
ಮಾ. 28, 29ರಂದು ಕೇರಳದಲ್ಲಿ ಹರತಾಳವಿದ್ದು, ದ.ಕ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ಕಾಸರಗೋಡಿನ ಮಕ್ಕಳ ಅನುಕೂಲಕ್ಕೆ ಆ ದಿನಗಳಂದು ಗಡಿಯಿಂದ ವಿಶೇಷ ವಾಹನ ವ್ಯವಸ್ಥೆ ಇದೆ ಎಂದು ಡಿಸಿ ತಿಳಿಸಿದರು.