ಉಳ್ಳಾಲ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭಗೊಂಡಿದ್ದು, ದ.ಕ. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವ್ಯಾಸಂಗ ನಡೆಸುತ್ತಿರುವ ಕೇರಳದ ಕಾಸರಗೋಡು ಜಿಲ್ಲೆಯ 142 ವಿದ್ಯಾರ್ಥಿಗಳು ಕೇರಳ ಕರ್ನಾಟಕ ಗಡಿಭಾಗವಾದ ತಲಪಾಡಿಯ ಕರ್ನಾಟಕ ಚೆಕ್‌ಪೋಸ್ಟ್‌ಗೆ ಆಗಮಿಸಿದ್ದು ಪಾಸ್ ಪ್ರಕ್ರಿಯೆ ಮುಗಿದ ಬಳಿಕ ಸ್ಥಳೀಯ ಮರಿಯಾಶ್ರಮ ಚರ್ಚ್ ವಠಾರದಿಂದ ಜಿಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿಯೋಜಿಸಿದ್ದ 10 ಬಸ್‌ಗಳ ಮೂಲಕ ತಲುಪಿಸಲಾಯಿತು.
ಮಂಗಳೂರು ದಕ್ಷಿಣ ವಲಯದ-116, ಮಂಗಳೂರು ಉತ್ತರ ವಲಯ-23, ಖಾಸಗಿ-2 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಅವರನ್ನು ಇಬ್ಬರು ಸಿಆರ್ ಪಿಗಳು ಹಾಗೂ 20 ಶಿಕ್ಷಕರು ಗಡಿಭಾಗದಿಂದ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ತಲುಪಿಸಲು ಕರ್ತವ್ಯ ನಿಭಾಯಿಸಿದರು. ಹೆತ್ತವರು ತಲಪಾಡಿ ಗಡಿವರೆಗೆ ಮಕ್ಕಳನ್ನು ತಲುಪಿಸಿದರು. ಅಲ್ಲಿಂದ ಮರಿಯಾಶ್ರಮ ಚರ್ಚ್ ವಠಾರದಲ್ಲಿ ನಿಲ್ಲಿಸಿ ಕೇಂದ್ರಗಳಿಗೆ ಅನುಗುಣವಾಗಿ ವಿಂಗಡಿಸಲಾಯಿತು. ಎಲ್ಲ ವಿದ್ಯಾರ್ಥಿಗಳ ಥರ್ಮಲ್ ಸ್ಕ್ಯಾನ್ ಅನ್ನು ಆರೋಗ್ಯ ಅಧಿಕಾರಿಗಳು ನಡೆಸಿದರು.
ಮಾನವೀಯತೆ ಮೆರೆದ ಆಧಿಕಾರಿಗಳು
ಬಂಟ್ವಾಳ ತಾಲೂಕಿನ ಮೊಂಟೆಪದವು ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಾದ ವಿದ್ಯಾರ್ಥಿಯೊಬ್ಬ ಮಾಹಿತಿ ಕೊರೆತೆಯಿಂದ ತಡವಾಗಿ ಗಡಿ ಭಾಗಕ್ಕೆ ಆಗಮಿಸಿದ್ದು, ವಿದ್ಯಾರ್ಥಿಗೆ ಪರೀಕ್ಷೆಗೆ ತೊಂದರೆಯಾಗದಂತೆ ಸಿಆರ್‌ಪಿ ಹರೀಶ್ ತನ್ನ ಬೈಕ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದರೆ, ಖಾಸಗಿಯಾಗಿ ಪರೀಕ್ಷೆಗೆ ಹಾಜರಾಗಬೇಕಾಗಿದ್ದ ವಿದ್ಯಾರ್ಥಿಯನ್ನು ಜಿಲ್ಲಾ ಉಪ ನಿರ್ದೇಶಕ ಮಲ್ಲೇಸ್ವಾಮಿ ತಮ್ಮ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿ ಮಾನವೀಯತೆ ಮೆರೆದರು.
ಆತಂಕದಲ್ಲಿದ್ದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಹೆತ್ತವರಿಗೆ ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ದ.ಕ. ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಮಲ್ಲೇಸ್ವಾಮಿ, ತಲಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಆಳ್ವ, ಕಾಸರಗೋಡು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ವಲಯ ಬಿಜೆಪಿ ಅಧ್ಯಕ್ಷ ನವೀನ್ ಹೊಸಂಗಡಿ, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ರಘುನಾಥ, ಜಿಲ್ಲಾ ಸಮಗ್ರ ಶಿಕ್ಷಣ ತಾಂತ್ರಿಕ ಸಹಾಯಕ ಪ್ರಸನ್ನ, ಮಂಗಳೂರು ತಾಲೂಕು ದಕ್ಷಿಣ ಪರಿವೀಕ್ಷಣಾ ಅ ಧಿಕಾರಿ ವಿಷ್ಣು ಹೆಬ್ಟಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ದಕ್ಷಿಣ ವಲಯ ಅಧ್ಯಕ್ಷ ಜಗದೀಶ ಶೆಟ್ಟಿ, ಸಿಆರ್‌ಪಿಗಳಾದ ಹರೀಶ್ ಕುಮಾರ್, ಮೋಹನ್ ಸೇರಿದಂತೆ ನೋಡೆಲ್ ಅಧಿಕಾರಿಗಳು, ಪೊಲೀಸರು ಧೈರ್ಯ ತುಂಬಿ ಅವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಗದರ್ಶನ ನೀಡಿದರು.