ದೇವನಹಳ್ಳಿ: ಕಳೆದ ಜೂನ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ “ಎ’ ಗ್ರೇಡ್ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದೆ.
ಜಿಲ್ಲೆಯ 239 ಪ್ರೌಢಶಾಲೆಗಳ ಪೈಕಿ 170 “ಎ’ ಗ್ರೇಡ್, 58 “ಬಿ’ ಗ್ರೇಡ್, 11 “ಸಿ’ ಗ್ರೇಡ್ ಪಡೆದಿವೆ. ಕಳೆದ ಎಸ್ಸೆಸ್ಸೆಲ್ಸಿ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ ರಾಜ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆ 3ನೇ ಸ್ಥಾನ ಗಳಿಸಿ ಶೇ.88.24 ಫಲಿತಾಂಶ ಪಡೆದಿತ್ತು. ಕೋವಿಡ್ ಸಂದರ್ಭದಲ್ಲಿಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಉತ್ತಮ ಫಲಿತಾಂಶಕ್ಕೆ ನಾಂದಿಯಾಗಿದೆ.
ಸರ್ಕಾರಿ ಪ್ರೌಢಶಾಲೆಗಳ ಪೈಕಿ ಜಿಲ್ಲೆಯ ಮೂವರು ಟಾಪರ್‌ಗಳಾಗಿದ್ದಾರೆ. ನೆಲಮಂಗಲ ತಾಲೂಕಿನ ಯನ ಗುಂಟೆ ಸರ್ಕಾರಿ ಪ್ರೌಢಶಾಲೆಯ ಮೋನಿಕಾ 625ಕ್ಕೆ 621, ಮೇಘಾ 625ಕ್ಕೆ 617, ಹೊಸಕೋಟೆ ತಾಲೂಕಿನ ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಾಜಶ್ರೀ 625ಕ್ಕೆ 611 ಅಂಕ ಪಡೆದು ಜಿಲ್ಲೆಗೆ ಟಾಪರ್‌ಗಳಾಗಿದ್ದಾರೆ.
ಯಶಸ್ಸಿಗೆ ಕೈಗೊಂಡ ಕಾರ್ಯಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್‌ನಲ್ಲಿ ನಡೆದಿದ್ದು 3150 ಮಕ್ಕಳು ಪರೀಕ್ಷೆ ಬರೆದಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳಿಗಾಗಿ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವತಿಯಿಂದ ಅಭ್ಯಾಸ ಪುಸ್ತಕ ನೀಡಲಾಗಿತ್ತು. ಅಕ್ಟೋಬರ್‌ನಲ್ಲಿ ಜಿಪಂ ವತಿಯಿಂದ ನಡೆಸಲಾದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 3000 ಮಕ್ಕಳು ಶೇ.40ಕ್ಕಿಂತಲೂ ಕಡಿಮೆ ಅಂಕ ಪಡೆದ ಮಕ್ಕಳನ್ನು ಗುರುತಿಸಲಾಗಿತ್ತು. ಶಿಕ್ಷಣ ತಜ್ಞರ ಮಾರ್ಗ ದರ್ಶನ ಪಡೆದು ಶಿಕ್ಷಣದಲ್ಲಿ ಹಿಂದುಳಿದ 3 ಸಾವಿರ ಮಕ್ಕಳಿಗೆ ಅವರ ಕಲಿಕೆಗೆ ಸುಲಭವಾಗಲು ಪ್ರತಿ ವಿಷಯ ವಾರು ಪಠ್ಯ ಪುಸ್ತಕ ತಯಾರಿಸಿ ಬೆಳಗ್ಗೆ 9 ರಿಂದ 10 ಗಂಟೆ ವರೆಗೆ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು.
ಜಿಲ್ಲಾಧಿಕಾರಿ, ಸಿಇಒ, ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕರು, ಶಿಕ್ಷಕರು ಮಕ್ಕಳಪರಿ ಶ್ರಮದಿಂದ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಜಿಲ್ಲೆ 2ನೇ ಸ್ಥಾನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಮೊದಲ ಸ್ಥಾನಕ್ಕೆ ತರಲು ಶ್ರಮ ವಹಿಸಲಾಗುವುದು.
-ಜಿ.ಲಕ್ಷ್ಮೀನಾರಾಯಣ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ
ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 3ನೇ ಸ್ಥಾನದಲ್ಲಿದ್ದ ಜಿಲ್ಲೆ, ಇದೀಗ ದ್ವಿತೀಯ ಸ್ಥಾನಕ್ಕೇರಿರುವುದು ಉತ್ತಮ ಬೆಳವಣಿಗೆ. ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ.
–ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ