ದಾವಣಗೆರೆ: ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸೋಮವಾರ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ಮಾಜಿ ಸಚಿವ ಮಲ್ಲಿಕಾರ್ಜುನ್ ಶಾಮನೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮನೆ ಮನೆಗೆ ತೆರಳಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಆನೆಕೊಂಡ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮತ ಪ್ರಚಾರ ಪ್ರಾರಂಭಿಸಿದರು.
ಈ ಬಾರಿ ಶತಾಯಗತಾಯ ಗೆಲ್ಲುವ ಜಿದ್ದಿನೊಂದಿಗೆ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಇದೇ ಮೊದಲ ಬಾರಿಗೆ ಚುನಾವಣಾ ರಣಕಣದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಅಭ್ಯರ್ಥಿ ಎಂದೇ ಭಾರೀ ವಿಶ್ವಾಸದೊಂದಿಗೆ ಸ್ಫರ್ಧಿಸಿದ್ದ ಮಲ್ಲಿಕಾರ್ಜುನ್ ಅಚ್ಚರಿ ಎನ್ನುವಂತೆ ಸೋಲು ಅನುಭವಿಸಿ ದ್ದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಗೆಲುವು ಸಾಧಿಸಿದ್ದರು. ಕಳೆದ ಬಾರಿಯ ಸೋಲಿನ ಆಘಾತದ ನಂತರ ಕೆಲ ವರ್ಷ ರಾಜಕೀಯ ಮೌನಚಾರಣೆಗೆ ಜಾರಿದ್ದ ಮಲ್ಲಿಕಾರ್ಜುನ್ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲಬೇಕು ಎಂದು ಅಖಾಡಕ್ಕೆ ಇಳಿದಿದ್ದಾರೆ.
2008 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ದಾವಣಗೆರೆ ದಕ್ಷಿಣದಲ್ಲಿ ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿರುವ ಹಿರಿಯ ಕಾಂಗ್ರೆಸ್ಸಿಗ ಶಾಮನೂರು ಶಿವಶಂಕರಪ್ಪ ನಾಲ್ಕನೇ ಬಾರಿಯ ಗೆಲುವಿನ ವಿಶ್ವಾಸದಲ್ಲಿ ಪ್ರಚಾರ ಪ್ರಾರಂಭಿಸಿದರು.
ಇಬ್ಬರೂ ನಾಯಕರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನೆಚ್ಚಿನ ನಾಯಕರಿಗೆ ಜಯ ಘೋಷಣೆ ಕೂಗಿದರು. ಹಾರ, ಶಾಲು ಹಾಕಿ ಸ್ವಾಗತಿಸಿದರು. ಶುಭ ಕೋರಿದರು.