Advertisement

2 ವರ್ಷವಾದರೂ ನಿರಾಶ್ರಿತರಿಗೆ ದೊರೆಯದ ಮನೆ-ಹಣ

08:38 PM Feb 06, 2021 | Team Udayavani |

ಶಿರಸಿ: ಎರಡು ವರ್ಷಗಳ ಹಿಂದೆ ಅತಿ ಮಳೆ ಬಿದ್ದು ಹಾನಿಗೊಳಗಾದ ಮನೆಗಳಿಗೆ ಸರಕಾರದ ಘೋಷಿತ ನೆರವಿನ ಹಣ ಇನ್ನೂ  ಬಾರದೇ ಇರುವ ಕುರಿತು ತಾಪಂ ಸದಸ್ಯ ನಾಗರಾಜ ಶೆಟ್ಟಿ ಗರಂ ಆದ ಘಟನೆ ನಡೆಯಿತು.

Advertisement

ತಾಪಂನಲ್ಲಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷಯ   ಪ್ರಸ್ತಾಪಿಸಿ ಕಂದಾಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಪಂಗಳು ಜಿಪಿಎಸ್‌ ಮಾಡಿ ಕಂದಾಯ ಇಲಾಖೆಗೆ ವರದಿ ಕಳಿಸಿದರೂ ವಿಳಂಬ ಆಗುತ್ತಿದೆ. ಮಳೆಗಾಲದಲ್ಲಿ ಅತಿ ಮಳೆಗೆ ಬಿದ್ದ ಮನೆಗಳಿಗೆ ಇನ್ನೂ ಪರಿಹಾರ ಬಂದಿಲ್ಲ.  ಬಹುತೇಕ ನೊಂದವರಿಗೆ ಸರಕಾರದ ಘೋಷಿತ 5 ಲಕ್ಷದಲ್ಲಿ ಕೇವಲ 1 ಲ.ರೂ. ಮಾತ್ರ ನೀಡಲಾಗಿದೆ. ಮನೆಯ ಫೌಂಡೇಶನ್‌ ಮಾತ್ರ ಮಾಡಿಕೊಂಡಿದ್ದಾರೆ.

ಅವರೆಲ್ಲ ಎಲ್ಲಿ ವಾಸ್ತವ್ಯ ಮಾಡಬೇಕು? ಯಾಕೆ ಇನ್ನೂ ಉಳಿದ ನಾಲ್ಕು ಲಕ್ಷ ರೂ. ಬಿಡುಗಡೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಸ್ಪಂದಿಸಿದ ಕಂದಾಯ ಅಧಿಕಾರಿಗಳು, ತಾಲೂಕಿನಲ್ಲಿ ಬಿದ್ದ 110ರಲ್ಲಿ 100 ಮನೆಗಳಿಗೆ ಒಂದು ಲಕ್ಷ ರೂ. ಬಿಡುಗಡೆ ಆಗಿದೆ. ಉಳಿದ ಹಣಕ್ಕೆ ಜಿಪಿಎಸ್‌ ಆಗಬೇಕು ಎಂದಾಗ, ಆಕ್ಷೇಪಿಸಿದ ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಸದಸ್ಯ ನರಸಿಂಹ ಹೆಗಡೆ ಬಕ್ಕಳ, ಯಾಕೆ ವಿಳಂಬ ಮಾಡಲಾಗುತ್ತಿದೆ. ಪಂಚಾಯತ್‌ದಿಂದ ಯಾವುದೇ ವಿಳಂಬ ಇಲ್ಲ. ಕಂದಾಯ ಇಲಾಖೆಯಿಂದಲೇ ವಿಳಂಬ ಆಗುತ್ತಿದೆ. ಎರಡು ವರ್ಷಕ್ಕೆ 1 ಲ.ರೂ. ಬಿಡುಗಡೆ ಮಾಡಿದರೆ, ಮನೆಯ ಪೂರ್ಣ ಹಣ ಕೊಡಲು 10 ವರ್ಷ ಬೇಕಾಗಬಹುದು. ಇದು ವೈಜ್ಞಾನಿಕ ಕ್ರಮವೂ ಅಲ್ಲ ಎಂದೂ ಹೇಳಿದರು. ತಕ್ಷಣ ಜನರ ಕಷ್ಟಕೆ ಸ್ಪಂದಿಸುವಂತೆ ಹಕ್ಕೊತ್ತಾಯ ಮಾಡಿದರು.

ಮಾಹಿತಿ ನೀಡಿದ ಕಂದಾಯ ಇಲಾಖೆಯ ಅಧಿಕಾರಿ, ಮಳೆ ಆಶ್ರಿತ ಮಿಶ್ರ ಬೆಳೆ ದಾಖಲಿಸಲು ಕರೆಕ್ಷನ್‌ ಟು ಹೇಳುವ ಸಾಫ್ಟ್‌ವೇರ್‌  ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ಬಹುವಾರ್ಷಿಕ ಬೆಳೆ ಪುನಃ ಪುನಃ ದಾಖಲಿಸುವ ಅಗತ್ಯವಿಲ್ಲ ಎಂದೂ ತಿಳಿಸಿದರು.

ಅರಣ್ಯ ಇಲಾಖೆಗೆ ರಸ್ತೆ ಮೇಲೆ ಬಿದ್ದ ಮರ ತೆಗೆಯಲು ಹೇಳಿದರೂ ತೆಗೆದಿಲ್ಲ ಎಂದು ರವಿ ಹಳದೋಟ ಅಸಮಾಧಾನ  ವ್ಯಕ್ತಪಡಿಸಿದರು. ಹೊಸ ಅತಿಕ್ರಮಣ ಕ್ರಮ ತೆಗೆದುಕೊಳ್ಳಿ, ಜಿಪಿಎಸ್‌ ಆಗಿದ್ದು, ಹಳೆಯ ಅತಿಕ್ರಮಣ ಇದ್ದರೆ ತೊಂದರೆ ಕೊಡಬೇಡಿ ಎಂದೂ ಹೇಳಿದರು.

Advertisement

ಇದನ್ನೂ ಓದಿ :ಬೆಳಗಾವಿ: ಟ್ರಕ್ ಚಾಲಕನ ಮೇಲೆ ಹಲ್ಲೆ ಪ್ರಕರಣ; ನಾಲ್ವರ ಬಂಧನ

ಬನವಾಸಿ ವಲಯದಲ್ಲಿ ಇನ್ನೂ 100 ಕುಟುಂಬಗಳಿಗೆ ಗ್ಯಾಸ್‌ ಕೊಡಬೇಕು. ಆದರೆ, ಕೇವಲ ಒಂದೇ ಸಿಲೆಂಡರ್‌ ಎಂಬ ಕಾರಣಕ್ಕೆ ಫಲಾನುಭವಿಗಳು ಬರುತ್ತಿಲ್ಲ ಎಂದು ಅಧಿಕಾರಿ ಉಷಾ ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ವಿನಾಯಕ ಕಣ್ಣಿ,  ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ. ಕೋವಿಡ್‌ ಎರಡನೇ ಹಂತದ ವ್ಯಾಕ್ಸಿನ್‌ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದರು. ಪಶು ಸಂಗೋಪನಾ ಇಲಾಖೆ ಡಾ| ಸವಣೂರ, ತೋಟಗಾರಿಕಾ ಅಧಿಕಾರಿ ಸತೀಶ ಹೆಗಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಡಿ.ಎಂ. ಭಟ್ಟ ಇತರರು ಮಾಹಿತಿ ನೀಡಿದರು.

ಬನ್ನಿಕಟ್ಟದಲ್ಲಿ ಬೆಳ್ಳಕ್ಕಿ ಕಾಟ!: ನೆಗ್ಗು ಪಂಚಾಯ್ತಿ ಬನ್ನಿಕಟ್ಟ ಶಾಲೆಯ ಬಳಿ ಬೆಳ್ಳಕ್ಕಿ ಕಾಟ! ಹೀಗೆಂದು ತಾಪಂ ಸದಸ್ಯರೇ ಅಧಿಕಾರಿಗಳ ಬಳಿ ಅಲವತ್ತುಕೊಂಡ ಘಟನೆ ನಡೆಯಿತು. ಬನ್ನಿಕಟ್ಟದಲ್ಲಿ ಶಾಲೆ ಇದೆ. ಅದರ ಪಕ್ಕ ವನವೂ ಇದೆ. ಎಲ್ಲ ಅಕೇಶಿಯಾ ಮರಗಳು. ಇವುಗಳ ಮೇಲೆ ಸಾವಿರಾರು ಬೆಳ್ಳಕ್ಕಿ ಬಂದು ಪಿಸ್ಟಿ ಹಾಕುತ್ತವೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತದೆ ಎಂಬುದು ಅವರ ದೂರು. ಜಾನ್ಮನೆ ವಲಯಾರಣ್ಯಾಧಿಕಾರಿ ಪ್ರತಿಕ್ರಿಯೆ ನೀಡಿ, ಮರ ಕಟಾವ್‌ ಮಾಡುವ ಪ್ರಸ್ತಾಪ ಬಂದಿತ್ತು.ಆದರೆ, ಈ ಸಮಸ್ಯೆ ಗೊತ್ತಿರಲಿಲ್ಲ, ಪರಿಶೀಲನೆ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next