ಡಾ.ರಾಜ್‌ಕುಮಾರ್ ಕುಟುಂಬದ ಲಕ್ಕಿ ಗೋಪಾಲ್ ಎನ್ನುವವರು ಚಿತ್ರರಂಗಕ್ಕೆ ಬಂದಿರುವ, ಶಿವರಾಜ್‌ಕುಮಾರ್ ಅಭಿನಯದ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ವಿಚಾರ ನಿಮಗೆ ಗೊತ್ತಿದೆ. ಇತ್ತೀಚೆಗೆ ಚಿತ್ರದ ಟೈಟಲ್ ಹಾಗೂ ಮೋಶನ್ ಪೋಸ್ಟರ್ ಅದ್ಧೂರಿಯಾಗಿ ಬಿಡುಗಡೆಯಾಯಿತು. ನಗರದ ಮಂತ್ರಿಮಾಲ್‌ನಲ್ಲಿ ಬೃಹತ್ ಜನಸ್ತೋಮದ ನಡುವೆ ಶಿವರಾಜಕುಮಾರ್ “ಎಸ್‌ಆರ್‌ಕೆ’ ಚಿತ್ರದ ಟೈಟಲ್ ಲಾಂಚ್ ಆಯಿತು. ರಾಜ್‌ಕುಟುಂಬದ ಬಹುತೇಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಡಾ.ರಾಜ್‌ಕುಮಾರ್ ಅವರ ಸಹೋದರಿ ನಾಗಮ್ಮ, ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ವಿನಯ್ ರಾಜಕುಮಾರ್ ಸೇರಿದಂತೆ ರಾಜ್‌ಕುಟುಂಬದ ಬಹುತೇಕ ಮಂದಿ “ಎಸ್‌ಆರ್‌ಕೆ’ ಟೈಟಲ್ ಲಾಂಚ್‌ಗೆ ಸಾಕ್ಷಿಯಾದರು. ಇನ್ನು, ನಿರ್ದೇಶಕರಾದ ಚೇತನ್ ಕುಮಾರ್, ಸಂತೋಷ್ ಆನಂದರಾಮ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕೂಡಾ, ನಿರ್ದೇಶಕ ಲಕ್ಕಿ ಅವರ ಹೊಸ ಜರ್ನಿಗೆ ಶುಭ ಕೋರುವ ಮೂಲಕ “ಎಸ್‌ಆರ್‌ಕೆ’ ಟೈಟಲ್‌ಗೆ ಮೆಚ್ಚುಗೆ ಸೂಚಿಸಿದರು.
“ಎಸ್‌ಆರ್‌ಕೆ’ ಎಂದರೆ ಶಿವರಾಜಕುಮಾರ್ ಎಂದು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದಲ್ಲೂ ಲಕ್ಕಿ ಶಿವಣ್ಣ ಅವರನ್ನು ಹೊಸ ರೀತಿಯಲ್ಲಿ ತೋರಿಸಲಿದ್ದಾರಂತೆ. ಈ ಹಿಂದೆ ಶಿವಣ್ಣ ಮಾಡಿರದ ಪಾತ್ರವನ್ನು ಇಲ್ಲಿ ಬರೆದಿದ್ದಾರಂತೆ. ಅಂದಹಾಗೆ, ಈ ಲಕ್ಕಿ ಗೋಪಾಲ್ ಡಾ.ರಾಜ್‌ಕುಮಾರ್ ಸಹೋದರಿ ನಾಗಮ್ಮ ಅವರ ಮೊಮ್ಮಗ. ನಾಗಮ್ಮ ಅವರ ಪುತ್ರ ಗೋಪಾಲ್ ಈಗ ಗಾಜನೂರಿನಲ್ಲಿ ವಾಸವಿದ್ದಾರೆ. ಅವರ ಪುತ್ರರಾಗಿರುವ ಲಕ್ಕಿ ಗೋಪಾಲ್, ಈಗ ಶಿವರಾಜಕುಮಾರ್ ಸಿನಿಮಾ ಮಾಡುತ್ತಿದ್ದಾರೆ.
“ಸಿದ್ಧಾರ್ಥ’ ಚಿತ್ರೀಕರಣ ಸಂದರ್ಭದಲ್ಲಿ ಒನ್‌ಲೈನ್ ಶುರುಮಾಡಿದ್ದೆ. ಅದನ್ನು ಒಂದೊಳ್ಳೆಯ ಕಥೆಯನ್ನಾಗಿ ರೂಪಿಸಿದೆ. “ದೊಡ್ಮನೆ ಹುಡುಗ’ ಚಿತ್ರದ ವೇಳೆ ಶಿವಣ್ಣ ಅವರಿಗೆ ಕಥೆಯ ಒನ್‌ಲೈನ್ ಹೇಳಿದ್ದೆ. ಅದು ಅವರಿಗೆ ಇಷ್ಟ ಆಗಿತ್ತು. ಸ್ಕ್ರೀನ್‌ಪ್ಲೇ ಸ್ಟ್ರಾಂಗ್ ಮಾಡಿಕೋ, ಮಾಡೋಣ ಅಂದಿದ್ದರು. ನನ್ನ ಟೀಮ್ ಜೊತೆ ಕುಳಿತು ಕಥೆಯನ್ನು ಗಟ್ಟಿ ಮಾಡಿಕೊಂಡೆ. ಎಲ್ಲವೂ ಮುಗಿದ ಬಳಿಕ ಒಂದು ದಿನ ಪುನಃ ಶಿವಣ್ಣ ಅವರಿಗೆ ಸ್ಕ್ರೀನ್‌ಪ್ಲೇ ಸಮೇತ ಕಥೆ ಹೇಳಿದೆ. ಅವರಿಗೆ ಖುಷಿಯಾಯ್ತು.
ಕಳೆದ ಏಳು ತಿಂಗಳ ಹಿಂದೆಯೇ ಈ ಕಥೆಗೆ ಶಿವಣ್ಣ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಿರಣ್ ಕುಮಾರ್ ಎನ್ನುವವರು ನಿರ್ಮಾಪಕರು. ಅವರಿಗೆ ಇದು ಮೊದಲ ಚಿತ್ರ. ಉಳಿದಂತೆ ಚಿತ್ರಕ್ಕೆ ಭುವನ್ ಗೌಡ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ನಾಲ್ಕು ಗೀತೆಗಳಿಗೆ ಸಂಗೀತ ನೀಡುತ್ತಿದ್ದಾರೆ. ದೀಪು ಎಸ್.ಕುಮಾರ್ ಸಂಕಲನ ಮಾಡಲಿದ್ದಾರೆ. “ಭರ್ಜರಿ’ ಚೇತನ್ ಕುಮಾರ್ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಹೀರೋ ಹಾಗು ತಂತ್ರಜ್ಞರ ಆಯ್ಕೆಯಾಗಿದೆ. ಉಳಿದಂತೆ ನಾಯಕಿ ಮತ್ತು ಕಲಾವಿದರ ಆಯ್ಕೆ ಆಗಬೇಕಿದೆ’ ಎಂದು ವಿವರ ಕೊಡುತ್ತಾರೆ ಲಕ್ಕಿ ಗೋಪಾಲ್. “ಎಸ್‌ಆರ್‌ಕೆ’ ಚಿತ್ರೀಕರಣ ಬೆಳಗಾವಿ, ಮೈಸೂರು ಇತರೆ ಕಡೆ ಚಿತ್ರೀಕರಿಸುವ ಯೋಚನೆ ಇದೆ.