Advertisement

ಶ್ರೀವಿಜಯನ ಗತವೈಭವ ಪ್ರಧಾನ ವೇದಿಕೆ

12:37 PM Feb 05, 2020 | Suhan S |

ಕಲಬುರಗಿ: ನೃಪತುಂಗನ ನಾಡು, ಶರಣರು, ಸೂಫಿ-ಸಂತರ ಕರ್ಮ ಭೂಮಿ, ತೊಗರಿ ಕಣಜ ಕಲಬುರಗಿ ಮೂರು ದಶಕಗಳ ಬಳಿಕ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಕ್ಷಿಯಾಗುತ್ತಿದ್ದು, ಸಾಹಿತ್ಯ, ಕಲೆ, ಸಾಮ್ರಾಜ್ಯಗಳ ನೆಲೆ ಬೀಡನ್ನು ಮರುಕಳಿಸುವಂತಹ ಪಾರಂಪರಿಕ ಬೃಹತ್‌ ವೇದಿಕೆ ಅಕ್ಷರ ಪ್ರಿಯರನ್ನು ಸೆಳೆಯುವಂತೆ ತಲೆ ಎತ್ತಿನಿಂತಿದೆ.

Advertisement

ಕನ್ನಡ ನಾಡಿನ ಹೆಮ್ಮೆಯ ರಾಷ್ಟ್ರಕೂಟರ ರಾಜಧಾನಿ ಮಳಖೇಡ್‌ ಕೋಟೆ, ಈ ನೆಲದ ಸಾಹಿತ್ಯವನ್ನು ಸಾಕ್ಷೀಕರಿಸುವ ಸೇಡಂನ ಶಿಲಾಶಾಸನ ಹಾಗೂ ಕಲೆಯನ್ನು ಮೈದುಂಬಿಕೊಂಡ ಸನ್ನತಿಯ ಉಬ್ಬು ಚಿತ್ರ. ಕನ್ನಡ ಸಾಹಿತ್ಯದ ಮೇರು ಕೃತಿ “ಕವಿರಾಜ ಮಾರ್ಗ’ ಹಾಗೂ ಮನ-ಮನೆಗಳನ್ನು ಆಕರ್ಷಿಸುವ ಗ್ರಾಮೀಣ ಶ್ರೀಮಂತಿಕೆಯ ತಲಬಾಗಿಲು. ಎತ್ತರದಲ್ಲಿ ಪ್ರಕಾಶಿಸುವ ಸೂರ್ಯನ ರಶ್ಮಿ…

ಇದು ನುಡಿ ಜಾತ್ರೆ “ಶ್ರೀ ವಿಜಯ’ ಪ್ರಧಾನ ವೇದಿಕೆಯ ಪ್ರಧಾನ ಆಕರ್ಷಣೆ. ಮೇಲ್ಭಾಗದಲ್ಲಿ “ಶ್ರೀ ವಿಜಯ ಪ್ರಧಾನ ವೇದಿಕೆ’ ಎನ್ನುವ ಬರಹದೊಂದಿಗೆ “ಕಸವರವೆಂಬುದು ನೆರೆಸೈರಿಸಲಾರ್ಪೊಡೆ ಪರವಿಚಾರಮುಂ ಧರ್ಮಮುಮಂ’ ಎಂಬ ಶ್ರೀ ವಿಜಯನ ನುಡಿ ಕಟ್ಟು ಸಹ ಬಳಸಲಾಗಿದೆ. ಕೆಳಗಡೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಮನುಬಳಿಗಾರ ಭಾವಚಿತ್ರ ಎಡಭಾಗಕ್ಕೆ, ಸಮ್ಮೇಳನಾಧ್ಯಕ್ಷ ಡಾ| ಎಚ್‌.ಎಸ್‌.ವೆಂಕಟೇಶಮೂರ್ತಿ ಭಾವಚಿತ್ರ ಬಲಭಾಗಕ್ಕೆ ಜೋಡಿಸಲಾಗಿದೆ.

ಗತವೈಭವದ ನೆನಪು: ಶ್ರೀ ವಿಜಯ ಪ್ರಧಾನ ವೇದಿಕೆ ಕಳೆದ ಸಮ್ಮೇಳನಕ್ಕಿಂತ ತುಂಬಾ ದೊಡ್ಡದು ಎಂದೇ ಹೇಳಲಾಗುತ್ತದೆ. 120 ಅಡಿ ಉದ್ದ ಮತ್ತು 26 ಅಡಿ ಎತ್ತರದ ವೇದಿಕೆ ಇದಾಗಿದೆ. ವೇದಿಕೆಯ ಅಗಲ 40 ಅಡಿ ಇದ್ದು, ಅನಾಯಾಸವಾಗಿ 100ಕ್ಕೂ ಅಧಿಕ ಗಣ್ಯರು ಕುಳಿತುಕೊಳ್ಳಬಹುದಾಗಿದೆ. ವೇದಿಕೆ ಮಧ್ಯದಿಂದ ಎಡ ಮತ್ತು ಬಲಕ್ಕೆ ಸಮನಾಂತರವಾಗಿ ಕೋಟೆಯ ಎರಡು ತಲಾ ಬುರುಜುಗಳು ಹಾಗೂ ಒಂದು ತಲಬಾಗಿಲು ನಿರ್ಮಿಸಲಾಗಿದೆ. ಹಳೆಯ ಕಾಲದ ಮನೆಗಳಿಗೆ ಇರುವ ಹಾಗೆ ತಲಬಾಗಿಲುಗಳಿಗೆ ಆ ಕಡೆ-ಈ ಕಡೆ ಕುದುರೆ ಮುಖಗಳನ್ನು ರೂಪಿಸಲಾಗಿದೆ. ಎರಡೂ ಕಡೆಗಳಲ್ಲಿ ಕನ್ನಡದ ಪ್ರಥಮ ಉಪಲಬ್ಧ ಕೃತಿ, ಶ್ರೀವಿಜಯನ “ಕವಿರಾಜಮಾರ್ಗ’ ಗ್ರಂಥವನ್ನು ಬಿಂಬಿಸುವ ಪ್ರತಿಕೃತಿಗಳು ಇವೆ. ನೆಲ ಮಟ್ಟದಲ್ಲಿ ಕೋಟೆಯ ಅಡಿಪಾಯವಿರುವಂತೆ ಕಲ್ಲಿನ ರೂಪವನ್ನು ಬಣ್ಣದಲ್ಲಿ ಕಟ್ಟಲಾಗಿದೆ. ವೇದಿಕೆ ಮುಂಭಾಗದಲ್ಲಿ ನಿಂತರೆ ಕೋಟೆಯ ಎದುರುಗಡೆಯೇ ನಿಂತಿರುವ ಅನುಭವವಾಗುತ್ತದೆ. ಗತವೈಭವದ ಇತಿಹಾಸಕ್ಕೆ ಶ್ರೀವಿಜಯ ಪ್ರಧಾನ ವೇದಿಕೆ ಕರೆದುಕೊಂಡು ಹೋಗುತ್ತದೆ.

ಹಗಲಿರುಳು ಕಾರ್ಯ: ಶ್ರೀವಿಜಯ ವೇದಿಕೆಯ ನೀಲನಕ್ಷೆಯನ್ನು ಕಲಬುರಗಿ ಆರ್ಟ್‌ ಸೊಸೈಟಿಯ ಕಲಾವಿದರಾದ ಗಿರೀಶ ಕುಲಕರ್ಣಿ, ಸಂಗಮೇಶ ಶೀಲಶೆಟ್ಟಿ, ಶಫಿ ಮಾಶಾಲಕರ್‌ ರೂಪಿಸಿದ್ದಾರೆ. ಇದಕ್ಕೆ ಜೀವತುಂಬುವ ಕೆಲಸವನ್ನು ಮೈಸೂರಿನ ಹರ್ಷ ಕಾವಾ, ಮಂಡ್ಯದ ಅಭಿಲಾಷ ಡಿ., ಬೆಂಗಳೂರಿನ ಪ್ರಕಾಶ ಶೆಟ್ಟಿ, ಕಲಬುರಗಿಯ ಅವಿನಾಶ ತುಮಕ್‌, ವೀರೇಶ ರಟಕಲ್‌, ಸಂದೀಪ ಮೈಸೂರು, ಚಾಮರಾಜನಗರದ ಮಧುಸೂದನ, ವಿಠಲ, ಪ್ರದೀಪ ಸೇರಿದಂತೆ 55ಕ್ಕೂ ಅಧಿಕ ಕಲಾವಿದರು, ಸಹಾಯಕ ಕಲಾವಿದರು, ಕಾರ್ಪೇಂಟರ್‌ಗಳು, ಫೈಂಟರ್‌ ಗಳು ಹಗಲಿರುಳು ಮಾಡುತ್ತಿದ್ದಾರೆ. ವೇದಿಕೆ ನಿರ್ಮಾಣಕ್ಕೆ ಫೈಬರ್‌, ಕಬ್ಬಿಣದ ಸರಳು, ಮೆಟಲ್‌, ಥರ್ಮಾಕೋಲ್‌, ಪಿಒಪಿ ಮೊದಲಾದವನ್ನು ಬಳಸಿಕೊಳ್ಳಲಾಗಿದೆ. ವೇದಿಕೆ ನಿರ್ಮಾಣ ಸಂಪೂರ್ಣ ಮುಗಿದಿದ್ದು, ಕೊನೆ ಹಂತದ ಕೆಲಸ ನಡೆಯುತ್ತಿದೆ ಎಂದು ಕಲಾವಿದರು ತಿಳಿಸಿದ್ದಾರೆ.

Advertisement

ಪ್ರಥಮ ಸಂಸತ್ತಿನ ದರ್ಶನ! : ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಂಪಿನೊಂದಿಗೆ ಜಗತ್ತಿನ ಮೊದಲ ಸಂಸತ್ತಿನ ದರ್ಶನವನ್ನೂ ಮಾಡಿಸಲಿದೆ. ಸಮ್ಮೇಳನದ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಎದುರುಗಡೆ ಬೃಹತ್‌ ಅನುಭವ ಮಂಟಪ ಸಭಾಂಗಣದೊಂದಿಗೆ ಬಲಗಡೆಗೆ ಮತ್ತೂಂದು ಮಂಟಪ ಗಮನ ಸೆಳೆಯುತ್ತದೆ. ಇದರೊಳಗೆ ಕಾಲಿಟ್ಟರೆ ಮಹಾ ಮಂಟಪದ ಭಾವ ಮೂಡುತ್ತದೆ. ನಾಡಿನ ಖ್ಯಾತ ಕಲಾವಿದ ನಾಡೋಜ ಜೆ.ಎಸ್‌. ಖಂಡೇರಾವ ಚಿತ್ರಿಸಿರುವ ಅನುಭವ ಮಂಟಪದ ಪ್ರತಿರೂಪವನ್ನು ಇಲ್ಲಿ ನೋಡಲು ಸಿಗಲಿದೆ. ಇಂದಿನ ಸಂಸತ್ತನ್ನು 12ನೇ ಶತಮಾನದಲ್ಲೇ ಬಸವಣ್ಣನವರು ಕಟ್ಟಿಕೊಟ್ಟ ಪ್ರತಿರೂಪಕ ಇದಾಗಿದೆ. ಹೊರ ಭಾಗದಲ್ಲಿ ರನ್ನ, ಪೊನ್ನರ ಚಿತ್ರಗಳನ್ನು ಚಿತ್ರಿಸಲಾಗಿದೆ.

ಆಕರ್ಷಕ ಸಭಾಂಗಣ : ಅಕ್ಷರ ಜಾತ್ರೆಯ ಶ್ರೀವಿಜಯ ಪ್ರಧಾನ ವೇದಿಕೆ ಐತಿಹಾಸಿಕ ವೈಭವವನ್ನು ಕಟ್ಟಿಕೊಡುತ್ತಿದ್ದರೆ, ಸಮ್ಮೇಳನದ ಪ್ರಮುಖ ಸಭಾಂಗಣಕ್ಕೆ ಅನುಭವ ಮಂಟಪ ಎಂದು ಹೆಸರಿಡಲಾಗಿದ್ದು, ನಾಡಿನ ಅನುಭಾವಿ ಶರಣರನ್ನು ಸ್ಮರಿಸುವಂತೆ ಮಾಡುತ್ತಿದೆ. ಹೊರಗಡೆ ಮತ್ತು ಒಳಭಾಗವನ್ನು ಆಕರ್ಷಕ ಹಾಗೂ ಪಾರಂಪರಿಕ ಸ್ಪರ್ಶದೊಂದಿಗೆ ಕನ್ನಡ ಕಂಪು ಪಸರಿಸಲಾಗಿದೆ. ಸಂಭಾಂಗಣದ ತುಂಬೆಲ್ಲ ಬಟ್ಟೆ ಫ್ಲೆಕ್ಸ್ ನ ಕನ್ನಡ ಧ್ವಜಗಳನ್ನು ತೂಗು ಹಾಕಲಾಗಿದೆ. ಮಧ್ಯದಲ್ಲಿ ಸಂಪೂರ್ಣವಾಗಿ ನಾಡಿನ ಖ್ಯಾತನಾಮ ಸಾಹಿತಿಗಳ ಕನ್ನಡ ನುಡಿಗಟ್ಟುಗಳನ್ನು ಕಟ್ಟಲಾಗಿದೆ. ರಸ್ತೆಯ ಪ್ರಮುಖ ದ್ವಾರಕ್ಕೆ ಡಾ| ಸಿದ್ದಯ್ಯ ಪುರಾಣಿಕ ಹೆಸರು, ಸಭಾಗಂಣದ ಪ್ರಧಾನ ದ್ವಾರಕ್ಕೆ ಕಡಕೋಳ ಮಡಿವಾಳಪ್ಪ, ಇದರ ಎಡ ದ್ವಾರಕ್ಕೆ ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಬಲ ದ್ವಾರಕ್ಕೆ ಡಾ| ಶಾಂತರಸನ ಹೆಸರಿಡಲಾಗಿದೆ. ವೇದಿಕೆಯ ಕಮಾನು ಪಾರಂಪರಿಕ ಕಲೆಯೊಂದಿಗೆ ಕೂಡಿವೆ. ಗ್ರಾಮೀಣ ಸೊಗಡಿನ ಕಲೆಗಳೊಂದಿಗೆ ಕನ್ನಡ ಪರಿಸರದಲ್ಲಿ 25 ಸಾವಿರ ಜನರು ಕುಳಿತುಕೊಳ್ಳಬಹುದಾದ ಇಡೀ ಸಭಾಂಗಣ ಮೈತುಂಬಿ ನಿಂತಿದೆ.

 

-ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next