ಬೆಂಗಳೂರು: “ಅಲಂಕಾರ ಶಾಸ್ತ್ರದಲ್ಲಿ ಸಾಧನೆ ಮಾಡಿರುವ ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಶ್ರೀವಲ್ಲಿ ಮಂಜುನಾಥ ಹೆಗಡೆ ಹಾಗೂ “ಜೋತಿಷ್ಯ ಶಾಸ್ತ್ರ’ದಲ್ಲಿ ಅತ್ಯಧಿಕ ಅಂಕ ಪಡೆದಿರುವ ಉಮೇಶ್ ಹೊಳ್ಳ ಸೇರಿ ಒಂಭತ್ತು ವಿದ್ಯಾರ್ಥಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ನೀಡುವ ವಿವಿಧ ದತ್ತಿ ನಿಧಿಯ ಸ್ವರ್ಣ ಪದಕಗಳಿಗೆ ಭಾಜನರಾಗಿದ್ದಾರೆ.
ಕರ್ನಾಟಕ ಸಾಂಸ್ಕೃತಿಕ ವಿವಿ ಗುರುವಾರ ಹಮ್ಮಿಕೊಂಡಿದ್ದ ಏಳನೇ ಘಟಿಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ ಪದವಿ ಗಳಿಸಿರುವ ವಿದ್ಯಾರ್ಥಿಗಳಿಗೆ 2017-18ನೇ ಸಾಲಿನ ಪದವಿ ಪ್ರದಾನ ಮಾಡಲಾಯಿತು. ಅಲಂಕಾರ ಶಾಸ್ತ್ರದಲ್ಲಿ ಸಾಧನೆ ತೋರಿದ ಉಡುಪಿಯ ಶ್ರೀವಲ್ಲಿ ಮಂಜುನಾಥ ಹೆಗಡೆ “ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ’ ಸ್ವರ್ಣ ಪದಕ ಪಡೆದರು. ಜೋತಿಷ್ಯ ಶಾಸ್ತ್ರದಲ್ಲಿನ ಸಾಧನೆಗಾಗಿ ಉಮೇಶ್ ಹೊಳ್ಳ “ಶ್ರೀಧರ್ಮಸ್ಥಳ ಮಂಜುನಾಥ ಸ್ವಾಮಿ’ ದತ್ತಿನಿಧಿ ಸ್ವರ್ಣ ಪದಕ ಪಡೆದರು.
ಬೆಂಗಳೂರಿನ ಶ್ರೀವೇದ ವಿಜ್ಞಾನ ಶೋಧ ಸಂಸ್ಥಾನದ ಸುಬ್ರಹ್ಮಣ್ಯ ಕೇಶವ ಭಟ್ (ವ್ಯಾಕರಣ ಶಾಸ್ತ್ರ), ಪೂರ್ಣಪ್ರಜ್ಞಾ ವಿದ್ಯಾಪೀಠದ ಜೆ.ಪಾಂಡುರಂಗ ಜೋಷಿ (ನವೀನಶಾಸ್ತ್ರ), ಶ್ರೀಶ ಬಿ.ಎನ್ ( ದ್ವೆ„ತ ವೇದಾಂತ), ಶಿರಸಿಯ ರಾಜರಾಜೇಶ್ವರಿ ಸಂಸ್ಕೃತ ಕಾಲೇಜಿನ ವಿನೋದ್ ಭಟ್ (ಅದ್ವೆ„ತ ವೇದಾಂತ), ಮೈಸೂರಿನ ಶ್ರೀಶಂಕರ ವಿಲಾಸ ಸಂಸ್ಕೃತ ಕಾಲೇಜಿನ ಶಿವಶರಣ್ ಸಿದ್ರಾಮಯ್ಯ ಶೇಖಾ ( ಶಕ್ತಿ ವಿಶಿಷ್ಟಾದ್ವೆ„ತ ವೇದಾಂತ), ಬೆಂಗಳೂರಿನ ಶ್ರೀಚಾಮರಾಜೇಂದ್ರ ಸಂಸ್ಕೃತ ಕಾಲೇಜಿನ ಸುರೇಶ್ ಎಸ್.ಜೋಗಿ (ಜೈನ ಸಿದ್ಧಾಂತ) ಮತ್ತು ಸುನೀಲ್.ಆರ್ (ವಿಶಿಷ್ಟಾದ್ವೆ„ತ ವೇದಾಂತ) ಸ್ವರ್ಣ ಪದಕ್ಕೆ ಭಾಜನರಾದರು.
ಜತೆಗೆ ಉಡುಪಿಯ ಎಸ್‌ಎಂಎಸ್‌ಪಿ ಸಂಸ್ಕೃತ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಕೇಂದ್ರದ ಗಿರೀಶ್ ಭಟ್ (ಜ್ಯೋತಿಷ್ಯ) ಸೇರಿದಂತೆ ಆರು ಮಂದಿ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಫೌಂಡೇಷನ್‌ನ ಸುಧಾಮೂರ್ತಿ ಅವರು ಸ್ಥಾಪಿಸಿರುವ ದತ್ತಿನಿಧಿಯ ನಗದು ಬಹುಮಾನವನ್ನು ಪ್ರದಾನ ಮಾಡಲಾಯಿತು.
ಇದೇ ವೇಳೆ ಜಗಳೂರಿನ ಕಣ್ಣಕುಪ್ಪೆಯ ಗವಿಮಠಧ್ಯಕ್ಷ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಮತ್ತು ನಾಲ್ವರು ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ತುಮಕೂರಿನ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಸರಸ್ವತೀ ಸ್ವಾಮೀಜಿ ಭಾಷಣ ಮಾಡಿದರು. ಸಂಸ್ಕೃತ ವಿವಿ ಕುಲಪತಿ ಪದ್ಮಾಶೇಖರ್ ಮಾತನಾಡಿದರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉಪಸ್ಥಿತರಿದ್ದರು.