ಮೂಡಲಗಿ: ಭಾವೈಕತೆಗೆ ಹೆಸರಾಗಿರುವ ಪಟ್ಟಣದ ಆರಾಧ್ಯ ದೈವ ಶ್ರೀ ಶಿವಬೋಧಸ್ವಾಮಿಗಳ ಪುಣ್ಯರಾಧನೆ ಹಾಗೂ ಜಾತ್ರಾಮಹೋತ್ಸವ ನಿಮಿತ್ಯ ಶ್ರೀಗಳ ಪಲ್ಲಕ್ಕಿ ಉತ್ಸವ ಬುಧವಾರದಂದು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಮತ್ತು ಶ್ರೀ ಶ್ರೀಧರಬೋಧ ಸ್ವಾಮಿಜಿ ಸಾನಿಧ್ಯದಲ್ಲಿ ಅಪಾರ ಜನಸ್ತೋಮ ಮಧ್ಯೆ ಜರುಗಿತು.
ಮಂಗಳವಾರ ಮಧ್ಯರಾತ್ರಿಯಿಂದ ಬುಧವರ ಮುಂಜಾನೆವರಿಗೆ ಶ್ರೀಗಳ ಮಠದವರಿಗೆ ಸಹಸ್ರರಾರು ಭಕ್ತರು ತಮ್ಮ ತಮ್ಮ ಮನೆಯಿಂದ ಮತ್ತು ಶ್ರೀ ಯಲ್ಲಮ್ಮ ದೇವಸ್ಥಾನದಿಂದ ದೀರ್ಘದಂಡ ನಮಸ್ಕಾರ ಮತ್ತು ಉರುಳು ಸೇವೆ ಸಲ್ಲಿಸಿ ತಮ್ಮ ಹರಕೆ ತೀರಿಸಿದರು.
ಬುಧವಾರ ಮಧ್ಯಾಹ್ನ ಶ್ರೀಗಳ ಮೇಲಿನ ಮಠದಲ್ಲಿ ಶ್ರೀಗಳ ಉತ್ಸವ ಮೂರ್ತಿಗೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿಸಿ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀಗಳ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವ ಕೆಳಗಿನ ಮಠದವರಿಗೆ ಅಪಾರ ಜನಸ್ತೋಮದ ಜಯಕಾರದೊಂದಿಗೆ ಮತ್ತು ಕರಡಿ ಮಜಲು, ಶ್ರೀ ರಂಗ ಝಾಂಜ ಪಥಕ ಹಾಗೂ ವಿವಿಧ ವಾದ್ಯ ವೃಂದಗಳೊಂದಿಗೆ ವಿಜೃಂಭಣೆಯಿಂದ ಕೆಳಗಿನ ಮಠಕ್ಕೆ ಸಾಗಿ ಶ್ರೀಮಠದಲ್ಲಿ ಶ್ರೀಗಳ ಉತ್ಸವ ಮೂರ್ತಿಯನ್ನು ಸ್ಥಾಪಿಸಿ ನಂತರ ಅಭಿಷೇಕ ಹಾಗು ಪೂಜೆಸಲ್ಲಿಸಿದರು.
ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಬೆಂಡು-ಬೇತ್ತಾಸು ಸಮರ್ಪಿಸಿದರು, ಉತ್ಸವದ ದಾರಿಯಲ್ಲಿ ಭಕ್ತರು ನೀರು ಹಾಕಿ ಫಲ ಪುಷ್ಪ ನೀಡಿ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಮತ್ತು ಶ್ರೀ ಶ್ರೀಧರಬೋಧ ಸ್ವಾಮಿಜಿ ಆಶೀರ್ವಾದ ಪಡೆದುಕೊಂಡು ಪುನಿತರಾದರು.