ಈ ಹಿಂದೆ “ಮಂಡ್ಯದ ಹುಡುಗರು’, “ಗರ್ನಲ್’ ಸಿನಿಮಾಗಳನ್ನು ನಿರ್ದೇಶಿಸಿದ್ದ ಜೆ. ಜೆ. ಶ್ರೀನಿವಾಸ್ ನಿರ್ದೇಶಿಸಿ ಹಾಗೂ ನಿರ್ಮಾಣವನ್ನು ಮಾಡುತ್ತಿರುವ “ಡಿಟೆಕ್ಟಿವ್ ಗಜವದನ’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚಿಗೆ ಸರಳವಾಗಿ ನೆರವೇರಿತು. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹ ಕಲಾವಿದನಾಗಿ ಸಕ್ರಿಯರಾಗಿರುವ ಬಸು ಕುಮಾರ್ “ಡಿಟೆಕ್ಟಿವ್ ಗಜವದನ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿಮಾದ ಮುಹೂರ್ತದ ಬಳಿಕ ಮಾತನಾಡಿದ ನಿರ್ದೇಶಕ ಕಂ ನಿರ್ಮಾಪಕ ಜೆ. ಜೆ. ಶ್ರೀನಿವಾಸ್, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ತನ್ನ ಕುಟುಂಬವೊಂದು ತೊಂದರೆಗೆ ಸಿಲುಕಿದಾಗ ವ್ಯಕ್ತಿಯೊಬ್ಬ ಹೇಗೆ ಡೆಟೆಕ್ವಿವ್ ಆಗಿ ತನ್ನ ಕುಟುಂಬವನ್ನು ರಕ್ಷಿಸುತ್ತಾನೆ ಎಂಬುದು ಸಿನಿಮಾದ ಕಥೆಯ ಒಂದು ಎಳೆ. ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಇದಾಗಲಿದೆ. ಇಡೀ ಸಿನಿಮಾದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬರುವ ಭರವಸೆಯಿದೆ’ ಎಂದರು.
ಸಿನಿಮಾದ ಬಗ್ಗೆ ಮಾತನಾಡಿದ ನಟ ಬಸು ಕುಮಾರ್, “ನಾನು ಈ ಸಿನಿಮಾದಲ್ಲಿ “ಡಿಟೆಕ್ಟಿವ್ ಗಜವದನ’ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಹಾಗಂತ ನಾನು ಸಿನಿಮಾದಲ್ಲಿ ಡಿಟೆಕ್ಟಿವ್ ಆಗಿರುವುದಿಲ್ಲ. ಪರಿಸ್ಥಿತಿಯೊಂದು ನನ್ನನ್ನು ಡಿಟೆಕ್ಟಿವ್ ಆಗುವಂತೆ ಮಾಡುತ್ತದೆ. ಈ ಸಿನಿಮಾದಲ್ಲಿ ಕಥೆಯೇ ನಿಜವಾದ ಹೀರೋ. ಸಿನಿಮಾ ತುಂಬ ಚೆನ್ನಾಗಿ ಮೂಡಿಬರುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಡಿಟೆಕ್ಟಿವ್ ಗಜವದನ’ ಸಿನಿಮಾದಲ್ಲಿ ಬಸು ಕುಮಾರ್ ಅವರೊಂದಿಗೆ ಚಂದನ ರಾಘವೇಂದ್ರ, ಎಂ. ಎಸ್ ಉಮೇಶ್, ವಿಜಯ್ ಚೆಂಡೂರ್, ದಿನೇಶ್ ಮಂಗಳೂರು, ವಿಕ್ರಮ್, ಬಲ ರಾಜವಾಡಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿ ಸುತ್ತಿದ್ದಾರೆ.
ಸಿನಿಮಾದ ಹಾಡುಗಳಿಗೆ ಎ. ಟಿ. ರವೀಶ್ ಸಂಗೀತ ಸಂಯೋಜಿಸುತ್ತಿದ್ದು, ಶ್ಯಾಮ್ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಸಂಕಲನವಿದೆ. ಜಗದೀಶ್ ನಿಡವಳ್ಳಿ ಕಥೆ ಬರೆದಿದ್ದಾರೆ. ಸದ್ಯ ಮುಹೂರ್ತವನ್ನು ಮಾಡಿಕೊಂಡು ಚಿತ್ರೀಕರಣದತ್ತ ಹೊರಟಿರುವ “ಡಿಟೆಕ್ಟಿವ್ ಗಜವದನ’ ಮುಂದಿನ ವರ್ಷದ ಮಧ್ಯಭಾಗದಲ್ಲಿ ಥಿಯೇಟರಿಗೆ ಬರುವ ನಿರೀಕ್ಷೆಯಲ್ಲಿದ್ದಾನೆ.