Advertisement

ಅ.3ರಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವ

12:36 PM Sep 23, 2019 | Suhan S |

ಮಂಡ್ಯ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅ.3ರಿಂದ ಅ.6ರವರೆಗೆ ನಾಲ್ಕು ದಿನ ಅರ್ಥಪೂರ್ಣ ಹಾಗೂ ವಿನೂತನವಾಗಿ ನಡೆಸಲಾಗುವುದು. ದಸರಾ ಯಶಸ್ಸಿಗೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

Advertisement

ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಅ.3 ರಂದು ನಡೆಯುವ ಜಂಬೂಸವಾರಿ ಕಾರ್ಯಕ್ರಮಕ್ಕೆ ಆನೆಗಳನ್ನು ಕರೆತರಲು ಅಗತ್ಯ ಕ್ರಮ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮಕ್ಕೆ ಮೆರಗು ನೀಡಲು ವಿವಿಧ ಇಲಾಖೆಗಳಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗ‌ಳ ಕಿರುಪರಿಚಯವುಳ್ಳ ಉತ್ತಮ ಸ್ತಬ್ಧಚಿತ್ರಗಳನ್ನು ನಿರ್ಮಿಸುವಂತೆ ತಿಳಿಸಿದರು.

ಶ್ರೀರಂಗಪಟ್ಟಣ ದಸರಾ ಮಹೋತ್ಸವದ 19 ಉಪ ಸಮಿತಿಗಳನ್ನು ರಚಿಸಲಾಗಿದೆ. ಆ ಸಮಿತಿಗಳು ಕೈಗೊಂಡಿರುವ ಕೆಲಸಗಳು ತ್ವರಿತವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ತಿಳಿಸಿದರು.

ಕೃಷಿ ಪರಂಪರೆ ದರ್ಶನ: ಮಂಡ್ಯದ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಕೃಷಿ ಪರಂಪರಾ ದರ್ಶನ ಕಾರ್ಯಕ್ರಮವನ್ನು ಈ ಬಾರಿ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಶ್ರೀನಿವಾಸ ಅಗ್ರಹಾರ ಗ್ರಾಮವನ್ನು ಆಯ್ಕೆ ಮಾಡಲಾಗಿದೆ. ಅಲ್ಲಿನ ಚಿಕ್ಕ ಮಕ್ಕಳಿಗೆ ಮಂಡ್ಯ ಸಂಸ್ಕೃತಿ, ಕೃಷಿ ಹಾಗೂ ಆಹಾರ ಪದ್ಧತಿ ಪರಿಚಯಿಸುವ ಕಾರ್ಯವನ್ನು ಈ ಬಾರಿ ಶ್ರೀರಂಗಪಟ್ಟಣ ದಸರಾದಲ್ಲಿ ಮಾಡಲಾಗುವುದು ಎಂದರು.

ವಿದ್ಯುತ್‌ ದೀಪಾಲಂಕಾರ: ಶ್ರೀರಂಗಪಟ್ಟಣದ ದಸರಾ ಜಂಬೂಸವಾರಿ ಹಾದುಹೋಗುವ ರಾಜಬೀದಿಗಳು, ವೆಲ್ಲೆಸ್ಲಿ ಸೇತುವೆ ನಿಮಿಷಾಂಬ ದೇವಸ್ಥಾನ, ಮಂಡ್ಯ ಮೈಸೂರು ಜಂಕ್ಷನ್‌ ಹಾಗೂ ಮಂಡ್ಯ ರಸ್ತೆಯ ಪ್ರಮುಖ ಸರ್ಕಲ್ಗಳಲ್ಲಿ ಆಕರ್ಷಿಕ ವಿದ್ಯುತ್‌ ದೀಪಗಳಿಂದ ಅಲಂಕರಿಸಬೇಕು ಹಾಗೂ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲು ಆಯಾ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುವಂತೆತಿಳಿಸಿದರು.

Advertisement

ಬಾಬುರಾಯನಕೊಪ್ಪಲಿನ ದಸರಾ ಬನ್ನಿ ಮಂಟಪವನ್ನು ಸ್ವಚ್ಛಗೊಳಿಸುವಂತೆ ಹಾಗೂ ಅಲ್ಲಿ ವಾಹನ ನಿಲುಗಡೆಯಾಗದಂತೆ ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸಲು ಸೂಚಿಸಿದರು.

ಕಾರ್ಯಕ್ರಮಗಳು: ರೈತ ದಸರಾ, ಸಾಂಸ್ಕೃತಿಕ ದಸರಾ, ಕವಿಗೊಷ್ಠಿ, ಯುವ ದಸರಾ, ಯೋಗ ದಸರಾ, ಆಹಾರ ಮೇಳ, ಕುಸ್ತಿ, ಗಾಳಿಪಟ ಉತ್ಸವ, ಸಾಹಸ ಕ್ರೀಡೆಗಳು, ಬೋಟ್‌ಹೌಸ್‌, ಫಲಪುಷ್ಪ ಪ್ರದರ್ಶನ, ಕ್ರೀಡಾ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ ವನ್ನು ಅಚ್ಚು ಕಟ್ಟಾಗಿ ಆಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಸಮಿ ತಿಯ ಜವಾಬ್ದಾರಿ ಅರಿತು ಕೆಲಸಮಾಡುವಂತೆ ಹಾಗೂ ಕಾರ್ಯಕ್ರಮದ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಎಸ್ಪಿ ಪರಶುರಾಮ, ಅಪರ ಡೀಸಿ ಯೋಗೇಶ್‌, ಪಾಂಡವಪುರ ಎಸಿ ಶೈಲಜಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next