Advertisement

ತೆಂಗು ಬೆಳೆಗೆ ಕಾಂಡ ಕೊರೆಯುವ ಹುಳುಕಾಟ

03:49 PM Mar 01, 2020 | Naveen |

ಶ್ರೀರಂಗಪಟ್ಟಣ: ತಾಲೂಕಿನ ವಿವಿಧೆಡೆ ತೆಂಗು ಬೆಳೆಗೆ ಕಾಂಡ ಕೊರೆಯುವ ಹುಳುವಿನ ಬಾಧೆ ರೈನಸರಸ್‌ ಎಂಬ ದುಂಬಿ ಕಾಟ ಎಲ್ಲೆಡೆ ಆವರಿಸಿ ರೈತರಲ್ಲಿ ಆತಂಕ ಮೂಡಿಸಿದೆ.

Advertisement

ಈ ಬಗ್ಗೆ ಹಲವು ಬಾರಿ ಸ್ಥಳೀಯ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ತಲೆ ಕೆಡಿಸಿಕೊಳ್ಳದೆ ಬೇರೆ ಕೆಲಸಗಳ ನೆಪ ಹೇಳಿ ಸ್ಥಳ ಪರಿಶೀಲನೆ ನಡೆಸಿ ತೆಂಗಿನ ಗಿಡಗಳ ಉಳಿಸುವ ಪ್ರಯತ್ನ ಮಾಡುವಲ್ಲಿ ವಿಫ‌ಲರಾಗುತ್ತಿದ್ದಾರೆ ಎಂದುಸ್ಥಳೀಯ ರೈತರು ಆರೋಪಿಸಿದ್ದಾರೆ.

ತಾಲೂಕಿನ ಬೆಳಗೊಳ, ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಈ ದುಂಬಿ ಕೊರೆವ ಕೀಟಬಾಧೆ ಯಿಂದ ರೈತರು ಎರಡು ವರ್ಷಗಳ ಹಿಂದೆ ನೆಟ್ಟ ತೆಂಗಿನ ಸಸಿಗಳು ನಾಶವಾಗುವ ಆತಂಕದಲ್ಲಿದ್ದಾರೆ. ರೈತ ಅಸಮಾಧಾನ: ಶ್ರೀರಂಗಪಟ್ಟಣದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ರೈತರಿಗೆ ಇದ್ದು ಇಲ್ಲದಂತಾಗಿದೆ. ತೋಟಗಾರಿಕೆ ಬೆಳೆಗಳು ಕೀಟಬಾಧೆ ಸಂಭವಿಸಿದ ಸಮಯದಲ್ಲಿ ತಕ್ಷಣ ಅದಕ್ಕೆ ಚಿಕಿತ್ಸೆ ಅಥವಾ ಔಷಧಿ ನೀಡುವ ಕಾರ್ಯ ನಡೆಸಲು ಇಲ್ಲಿವರೆಗೆ ಇಲ್ಲಿನ ಅಧಿಕಾರಿಗಳು ರೈತರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿರುವ ಬಗ್ಗೆ ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಾವುದಕ್ಕೂ ನಮ್ಮಲ್ಲಿ ಯಾವುದೇ ಬೆಳೆ ಕಾಪಾಡಬಹುದಾದ ಔಷಧಿಗಳನ್ನು ತಕ್ಷಣಕ್ಕೆ ನೀಡಲು ಬರುವುದಿಲ್ಲ ಎಂಬ ಹಾರಿಕೆ ಉತ್ತರ ನೀಡುವುದರಿಂದ ರೈತರ ಆಕ್ರೋಶ ಹೆಚ್ಚಾಗಿದೆ.

ಎಲ್ಲೆಡೆ ಹರಡುತ್ತಿರುವ ರೋಗ: ಈ ಹಿಂದೆ ಬಿಳಿ ಹೇನುಕಾಟದಿಂದ ಬಳಲಿದರ ಜೊತೆಗೆ ಕಾಂಡ ಕೊರೆವ ರೋಗ ಹರಡಿ ಈ ಭಾಗದಲ್ಲಿರುವ ತೆಂಗಿನ ಗಿಡಗಳನ್ನು ಬೆಳೆಸಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ತಾಲೂಕಿನಲ್ಲಿ ತೆಂಗು ಬೆಳೆಗೆ ಬಿಳಿ ಹೇನು ರೋಗದ ಜೊತೆಗೆ ಕಾಂಡ ಕೊರೆದು ತೆಂಗಿನ ಗಿಡವೇ ಸಂಪೂರ್ಣ ಗೆಡ್ಡೆಯಲ್ಲಿ ಕಟ್ಟಾಗಿ ಒಣಗಲಾರಂಭಿಸಿದೆ. ಇನ್ನು ಬೇರೆ ತೆಂಗಿನ ಸಸಿಗಳನ್ನು ನೆಡಬೇಕಾಗುತ್ತದೆ. ಪ್ರಸಕ್ತ ವರ್ಷ ಮುಂಗಾರು ಮಳೆ ಆರಂಭವಾದ ದಿನಗಳಲ್ಲಿ ಅಪರೂಪಕ್ಕೆ ಕಂಡು ಬಂದ ಈ ಕಾಂಡಕೊರೆವ ರೋಗ ಈಗ ವ್ಯಾಪಕವಾಗಿ ಎಲ್ಲಡೆ ಹರಡುತ್ತಿದೆ.

Advertisement

ಗಿಡಗಳು ಸಂಪೂರ್ಣ ನಾಶ: ವರ್ಷ ಅಥವಾ ಎರಡು ವರ್ಷದ ತೆಂಗಿನ ಸಸಿಗಳಿಂದ ಹತ್ತಿಪ್ಪತ್ತು ವರ್ಷದ ತೆಂಗಿನ ಮರಗಳಿಗೂ ಈ ಕಾಂಡ ಕೊರೆವ ರೋಗ ಹರಡಿದೆ. ಬಿಳಿಹೇನು ರೋಗ ಪೀಡಿತ ತೆಂಗಿನ ಸಸಿಯ ಗರಿಗಳ ಅಡಿಯಲ್ಲಿ ಬಿಳಿ ಹೇನುಗಳು ಜೊಂಪೆಯಾಗಿ ಗೂಡು ಕಟ್ಟಿ ರಸವನ್ನು ಹೀರುತ್ತಿವೆ. ಇದರಿಂದ ತೆಂಗಿನ ಸಸಿಗಳಲ್ಲಿ ಬೆಳವಣಿಗೆ ಕುಂಠಿತವಾಗುತ್ತಿದೆ. ಆದರೆ ಕಾಂಡ ಕೊರೆವ ಕೀಟಬಾಧೆಯಾದರೆ ತೆಂಗಿನ ಗಿಡಗಳು ಸಂಪೂರ್ಣ ನಾಶವಾಗುತ್ತಿವೆ.

ಹೆಚ್ಚು ಮಾರಕ ಬಿಳಿ ಹೇನು: ಬಿಳಿ ಹೇನು ರೋಗ ಕಾಣಿಸಿಕೊಂಡಿರುವ ತೆಂಗಿನ ಮರದಲ್ಲಿ ಹರಳುಗಳು ಉದುರುತ್ತಿವೆ. ಹೇನುಗಳ ಮರದಿಂದ ಮರಕ್ಕೆ ವಲಸೆ ಹೋಗುತ್ತಿದ್ದು, ರಸ ಹೀರಿದ ಬಳಿಕ ಗರಿಗಳ ತಳ ಭಾಗದಲ್ಲಿ ಕಪ್ಪು ಅಂಟಿನ ಮಸಿ ಮೆತ್ತಿಕೊಂಡಂತೆ ಕಾಣುತ್ತಿದೆ. ಬೇವಿನ ಎಣ್ಣೆ ಸೇರಿದಂತೆ ಯಾವ ಔಷಧಿಗೂ ಬಿಳಿ ಹೇನು ಜಗ್ಗುತ್ತಿಲ್ಲ. ನುಸಿ ಪೀಡೆಗಿಂತಲೂ ಇದು ಹೆಚ್ಚು ಮಾರಕವಾಗಿ ಕಾಡುತ್ತಿದ್ದರೂ ರೈತರ ಬಗ್ಗೆ ಇಲ್ಲಿವರೆಗೆ ಗಮನಹರಿಸದೆ ಇರುವುದು ಅಧಿಕಾರಿಗಳ ಬೇಜವಾಬ್ದಾರಿ ತನ ಎದ್ದು ಕಾಣುತ್ತಿದೆ.

ರೈನಸರಸ್‌ ಎಂಬ ದುಂಬಿ ಕಾಂಡಕೊರೆವ ಕೀಟ. ತೆಂಗು
ಮಾತ್ರವಲ್ಲದೆ ಅಡಕೆ, ಕೋ-ಕೋ ಬಾಳೆ, ತರಕಾರಿ, ಅಲಂಕಾರಿಕ ಗಿಡಗಳಿಗೂ ಈ ರೀತಿಯ ಕಾಂಡ ಕೊರೆಯುವುದು ಹರಡುತ್ತದೆ. ಇವತ್ತು ಚೆನ್ನಾಗಿದ್ದ ತೆಂಗಿನ ಸಸಿ ಬೆಳಗ್ಗೆ ಕಾಂಡ ಕೊರೆದು ವಾಲಿದಂತೆ ಭಾಸವಾಗುತ್ತದೆ. ಅದನ್ನು ಎತ್ತಿ ನೋಡಿದಾಗಿ ಸಂಪೂರ್ಣ ಸಸಿ ತುಂಡಾದ ಪರಿಸ್ಥಿತಿಯಲ್ಲಿರುತ್ತದೆ. ಈಗಾಗಲೇ ಹಲವು ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಇದರ ಬಗ್ಗೆ ಸ್ಥಳೀಯ ತೆಂಗು ತಜ್ಞರೊಂದಿಗೆ ಚರ್ಚೆ ಮಾಡಲಾಗಿದ್ದು ಗುಣಪಡಿಸಲು ಅಲ್ಯುಮಿನಿಯಂ ಪ್ರಾಸ್ಪೈಡ್‌ ಎಂಬ ಮಾತ್ರೆಗಳನ್ನು ತೆಂಗಿನ ಬುಡಗಳಿಗೆ ಹಾಕಲು ತಿಳಿಸಲಾಗುತ್ತಿದೆ.
ಸಿ. ಚಂದ್ರು, ತೋಟಗಾರಿಕೆ ಇಲಾಖೆ
ಹಿರಿಯ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next