ಶ್ರೀರಂಗಪಟ್ಟಣ: ಪಟ್ಟಣದಲ್ಲಿ ರಥಸಪ್ತಮಿಅಂಗವಾಗಿ ಪ್ರಸಿದ್ಧ ಶ್ರೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಬೆಳಗಿನ ಜಾವ 5ಕ್ಕೆ ವಿಶೇಷ ಪೂಜೆಗಳೊಂದಿಗೆ ರಂಗನಾಥನಿಗೆ ಎಣ್ಣೆ ಮಜ್ಜನ ಕ್ಷೀರಾಭಿಷೇಕ ಮಾಡಿ ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಬೆಳಗ್ಗೆ 6.30ಕ್ಕೆ ಸೂರ್ಯನಿಗೆ ಮಂಡಲ ಪೂಜೆ ನೆರವೇರಿಸಿ ನಂತರ ಪಟ್ಟಣದ ರಾಜ ಬೀದಿಗಳಲ್ಲಿ ಸೂರ್ಯಮಂಡಲ ಉತ್ಸವ ನಡೆಸಲಾಯಿತು.
ಮಧ್ಯಾಹ್ನ 2.20 ಕ್ಕೆ ಅಶ್ವಿನಿ ನಕ್ಷತ್ರದಲ್ಲಿ ಬ್ರಹ್ಮ ರಥೋತ್ಸವಕ್ಕೆ ವೇದ ಬ್ರಹ್ಮ ಡಾ.ಭಾನುಪ್ರಕಾಶ್‌ಶರ್ಮಾ ಅವರ ಸಾನ್ನಿಧ್ಯದಲ್ಲಿ ಶ್ರೀರಂಗನಾಥ ಸ್ಮಾಮಿಯ ಉತ್ಸವ ಮೂರ್ತಿಯನ್ನು ರಥದ ಸುತ್ತಲೂ ಮೆರವಣಿಗೆ ಮಾಡಿ ರಥದ ಮೇಲೆ ಕೂರಿಸಿ ದೇವಾಲಯದ ಮುಖ್ಯ ಅರ್ಚಕ ಜಯಸಾರಥಿ ಅವರಿಂದ ಗೋವಿಂದ ಗೋವಿಂದ ವೇದ ಘೋಷ ಮೊಳಗಿಸಿ ರಥೋತ್ಸವಕ್ಕೆ ಪೂಜೆ ನೆರವೇರಿಸಿದರು.
ನಂತರ ನೂತನ ಜಿಲ್ಲಾಧಿಕಾರಿ ಅಶ್ವಥಿ ರಥೋತ್ಸವಕ್ಕೆ ಚಾಲನೆ ನೀಡಿದರು. ಎಸಿ ಶಿವಾನಂದಮೂರ್ತಿ, ತಹಶೀಲ್ದಾರ್ ಎಂ.ವಿ.ರೂಪಾ, ವ್ಯವಸ್ಥಾಪನ ಸಮಿತಿ ಅಧ್ಯಕ ಆನಂದ್, ದೇವಾಲಯದ ಇಒ ನಂಜೇಗೌಡ ರಥ ಎಳೆಯಲು ಜಿಲ್ಲಾಧಿಕಾರಿಗಳೊಂದಿಗೆ ಸಾಥ್ ನೀಡಿದರು.
ಸಾವಿರಾರು ಭಕ್ತರು ರಥವನ್ನು ಎಳೆಯುವಾಗ ಉಘೇ, ಉಘೇ ಗೋವಿಂದ ಎಂಬ ಘೋಷಣೆ ಮೊಳಗಿದವು. ನೆರೆದಿದ್ದ ಭಕ್ತರು ರಥಕ್ಕೆ ಹಣ್ಣು, ದವನ ಎಸೆದರು. ಹರಕೆ ಹೊತ್ತವರು ಧೂಪ, ದೀಪದ ಸೇವೆ ಸಲ್ಲಿಸಿದರು. ಶ್ರೀ ರಂಗನಾಥಸ್ವಾಮಿ ದೇವಾಲಯದ ಒಂದು ಸುತ್ತು ರಥವನ್ನು ಪ್ರದಕ್ಷಿಣೆ ಮಾಡಲಾಯಿತು. ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ ಪಾನಕ, ಕೋಸಂಬರಿ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು.
ನೂತನವಾಗಿ ಮದುವೆಯಾದ ನವ ದಂಪತಿ ಜಾತ್ರೆಯಲ್ಲಿ ರಥೋತ್ಸವಕ ಹೆಣ್ಣು ದವನ ಎಸೆದು ಭಕ್ತಿ ಪ್ರದರ್ಶಿಸಿದರು. ದೇವಾಲಯದ ಮುಂಭಾಗದಲ್ಲಿ ಅಂಗಡಿ ಮುಂಗಟ್ಟು ತೆರೆಯಲಾಗಿತ್ತು. ಅಂಗಡಿಗಳಲ್ಲಿ ತಿಂಡಿ, ತಿನಸು ಖರೀದಿಸಲು ಜನ ಮುಗಿ ಬಿದ್ದಿದ್ದರು. ಹೂವು ಹಣ್ಣು ದುಬಾರಿಯಾಗಿದ್ದರೂ ಭಕ್ತರು ಬೆಲೆ ಲೆಕ್ಕಿಸದೇ ವ್ಯಾಪಾರದಲ್ಲಿ ತೊಡಗಿದ ರು . ಭಕ್ತಾದಿಗಳ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು