Advertisement

ಶ್ರೀರಂಗ ಸುಂದರಾಂಗ

08:55 PM Jan 17, 2020 | Lakshmi GovindaRaj |

ಕರ್ನಾಟಕವು ಹಲವು ಶೈಲಿಯ ದೇಗುಲಗಳ ಬೀಡು. ಆದರೆ, ತಮ್ಮದೇ ಮಿತಿಯಲ್ಲಿ ಸ್ಥಳೀಯ ಮಾಂಡಲೀಕರು ಮತ್ತು ಪಾಳೇಗಾರರು ನಿರ್ಮಿಸಿದ ದೇವಾಲಯಗಳ ಶೈಲಿಯೂ ಅಷ್ಟೇ ಗಮನ ಸೆಳೆಯುತ್ತದೆ. ಅವುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಮಾಳೇನಹಳ್ಳಿಯ ಶ್ರೀ ರಂಗನಾಥ ದೇಗುಲವೂ ಒಂದು.

Advertisement

ಕ್ರಿ.ಶ. 1580ರಲ್ಲಿ ಪಾಳೇಗಾರ ತಿಮ್ಮಣ್ಣ ನಾಯಕರ ಮಾರ್ಗದರ್ಶಕರಾಗಿದ್ದ ಶ್ರೀ ವೆಂಕಪ್ಪಯ್ಯನವರಿಂದ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಸುಕನಾಸಿ, ತೆರೆದ ಮಂಟಪ (ನವರಂಗ) ಮತ್ತು ಪ್ರತ್ಯೇಕ ಪ್ರವೇಶ ಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಸುಂದರ ನಾಲ್ಕು ಅಡಿ ಎತ್ತರದ ಶ್ರೀ ರಂಗನಾಥನ ಮೂರ್ತಿಯು ಸುಂದರ ಪ್ರಭಾವಳಿಯಿಂದ ಕೂಡಿದೆ. ರಂಗನಾಥನ ಕೈಯಲ್ಲಿನ ಶಂಖ, ಚಕ್ರ ಮತ್ತು ಗಧೆಯ ಕೆತ್ತನೆ ಸೊಗಸಾಗಿದೆ.

ತೆರೆದ ಮಂಟಪದಲ್ಲಿ 6 ಕಂಬಗಳಿದ್ದು, ಉಬ್ಬು ಶಿಲ್ಪಗಳ ಕೆತ್ತನೆ ವಿಸ್ಮಯ ಹುಟ್ಟಿಸುತ್ತದೆ. ಆಂಜನೇಯ, ನವನೀತ ಕೃಷ್ಣ, ನರಸಿಂಹ, ವೇಣುಗೋಪಾಲನ ಉಬ್ಬು ಶಿಲ್ಪಗಳಿವೆ. ಈ ದೇಗುಲದ ವೈಶಿಷ್ಟ ಇರುವುದು ಪ್ರವೇಶ ಮಂಟಪದಲ್ಲಿ. ಇಲ್ಲಿಯೂ ಸುಂದರ ಉಬ್ಬು ಶಿಲ್ಪಗಳ ಕೆತ್ತನೆಯ 4 ಕಂಬಗಳಿದ್ದು, ಇದನ್ನೇ ರಾಜಗೋಪುರವಾಗಿ ಪರಿವರ್ತಿಸಲಾಗಿದೆ.

ಕಂಬಗಳಲ್ಲಿ ಮೊಸರಿನಿಂದ ಬೆಣ್ಣೆ ಕಡೆಯುವ, ಶಿವಲಿಂಗಕ್ಕೆ ನಂದಿ ಹಾಲು ಎರೆಯುವ ಶಿಲ್ಪಗಳ ಉಬ್ಬು ಕೆತ್ತನೆ ನೋಡಲೇಬೇಕಾದದ್ದು. ಎರಡನೇ ಹಂತದಲ್ಲಿ 12 ಕಂಬಗಳ ಮಂಟಪ ಇದ್ದರೆ ಮೂರನೇ ಮತ್ತು ನಾಲ್ಕನೇ ಮಹಡಿಯಲ್ಲಿ ಚಿಕ್ಕ ಮಂಟಪವಿದೆ. ಇದರ ಮೇಲೆ ಕಳಸವನ್ನು ಸ್ಥಾಪಿಸಲಾಗಿದೆ. ಈ ದೇವಾಲಯಕ್ಕೆ ಗರ್ಭಗುಡಿಯ ಮೇಲೆ ನಾಗರ ಶೈಲಿಯ ಚಿಕ್ಕ ಶಿಖರವಿದೆ.

ದೇವಾಲಯದ ಆವರಣದಲ್ಲಿ ಲಕ್ಷ್ಮೀ, ಆಂಜನೇಯ ಮತ್ತು ಶಿವ ಚಿದಂಬರರ ಚಿಕ್ಕ ಗುಡಿಗಳಿವೆ. ಶ್ರೀ ಶಂಕರಲಿಂಗರು ಇಲ್ಲಿಗೆ ಬಂದು ನೆಲೆಸಿದಾಗ ಈ ದೇಗುಲಗಳನ್ನು 1942ರಲ್ಲಿ ಊರಿನ ಸಹಕಾರದಿಂದ ಜೀರ್ಣೋದ್ಧಾರ ಮಾಡಿದರು. ಲಕ್ಷ್ಮೀದೇವಿಯ ವಿಗ್ರಹವನ್ನು ಈ ಸಮಯದಲ್ಲಿಯೇ ಭಿನ್ನವಾದ ವಿಗ್ರಹದ ಬದಲಾಗಿ ಸ್ಥಾಪಿಸಲಾಯಿತು. ಇಲ್ಲಿನ ಆವರಣದಲ್ಲಿ ಗುರುಗಳ ಯೋಗಮಂದಿರವಿದ್ದು, ಭಕ್ತರು ಇಲ್ಲಿಗೆ ಬರುತ್ತಾರೆ.

Advertisement

ಈಗ ದೇವಾಲಯವನ್ನು ಹಳೆಯ ಸ್ವರೂಪವನ್ನು ಹಾಗೆಯೇ ಉಳಿಸಿ ಸಾಕಷ್ಟು ನವೀಕರಿಸಲಾಗಿದ್ದು, ಆಧುನಿಕ ಸ್ಪರ್ಶ ಪಡೆದಿದೆ. ನಿತ್ಯ ಪೂಜೆಗಳು ನಡೆಯುತ್ತವೆ. ರಥ ಸಪ್ತಮಿಯಂದು ಬ್ರಹ್ಮ ರಥೋತ್ಸವ ನೆರವೇರುತ್ತದೆ. ಈ ಸಮಯದಲ್ಲಿ ಷಷ್ಠಿ ಯಂದು ಕಲ್ಯಾಣೋತ್ಸವ, ಸಪ್ತಮಿಯಲ್ಲಿ ಹೋಮ ನಡೆಯುತ್ತದೆ. ಇಲ್ಲಿ ಭೂತಪ್ಪ ನಿಗೆ ಎಡೆ ಇಡುವುದು ವಿಶೇಷ.

ದರುಶನಕೆ ದಾರಿ…: ಮಾಳೇನಹಳ್ಳಿಯು ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ 3 ಕಿ.ಮೀ. ದೂರದಲ್ಲಿದೆ. ಚಿತ್ರದುರ್ಗ- ಹೊಳಲ್ಕೆರೆ ಮಾರ್ಗವಾಗಿ ಅಥವಾ ಶಿವಮೊಗ್ಗ- ಚನ್ನಗಿರಿ ಮಾರ್ಗವಾಗಿಯೂ ತಲುಪಬಹುದು.

* ಶ್ರೀನಿವಾಸಮೂರ್ತಿ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next