ಬಳ್ಳಾರಿ: ಕಳೆದ ಉಪಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡುವುದು, ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬುದು ಪಕ್ಷದ ಹೈಕಮಾಂಡ್ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪರಿಗೆ ಬಿಟ್ಟ ವಿಚಾರ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತಾರೆ. ಇತ್ತೀಚೆಗೆ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುವುದನ್ನು ಹೈಕಮಾಂಡ್ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ನಾನು (ಶ್ರೀರಾಮುಲು) ಉಪಮುಖ್ಯಮಂತ್ರಿ ಆಗಬೇಕು ಅನ್ನೋದು ಜನರ ಬೇಡಿಕೆ. ಜನರ ಬೇಡಿಕೆಯನ್ನು ನಾನು ಅಲ್ಲಗೆಳೆಯುವುದಿಲ್ಲ. ಆದರೆ, ನನಗೆ ಡಿಸಿಎಂ ಹುದ್ದೆ ನೀಡುವ ವಿಷಯ ಪಕ್ಷದ ಹೈಕಮಾಂಡ್, ಸಿಎಂ ಬಿಎಸ್ ವೈ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವೀಲ್ ಚೇರ್ ನೀಡದ ಅಮಾನವೀಯ ಘಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಇಂತಹ ಘಟನೆಗಳನ್ನು ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ನೋಡಿದ್ದೇವೆ. ಈಗ ಬಳ್ಳಾರಿಯಲ್ಲಿ ಇಂತಹ ಘಟನೆ ನಡೆದಿದೆ. ತಪ್ಪಿತಸ್ಥರು ಯಾರೇ ಇದ್ದರೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಇದೆ. ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದಾಗ ನಾನು ಇದನ್ನು ಗಮನಿಸಿದ್ದೇನೆ. ಬೆಡ್ ಕೊರತೆ ಇರೋ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಇಲ್ಲ ಎಂದ ಸಚಿವ ರಾಮುಲು, ಇತ್ತೀಚೆಗೆ ರಾಜ್ಯವನ್ನು ಆವರಿಸಿದ್ದ ನೆರೆ ಹಾವಳಿಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಯಾವುದೇ ಆರ್ಥಿಕ ಬಿಕ್ಕಟ್ಟು ಇಲ್ಲ ಎಂದರು.
ಶಾಸಕರ ಮೂರು ತಿಂಗಳ ಸಂಬಳ ಆಗಿಲ್ಲ ಎನ್ನುವುದು ವಿರೋಧ ಪಕ್ಷದವರ ಆರೋಪವಷ್ಟೇ. ಈ ಬಗ್ಗೆ ನನಗೂ ಗೊತ್ತಿಲ್ಲ ಎಂದ ಸಚಿವ ರಾಮುಲು ತಿಳಿದುಕೊಂಡು ಮಾತನಾಡ್ತೇನೆ. ನನ್ನ ವೇತನ ನೋಡಿಲ್ಲ. ನೋಡಿ ಪರಿಶೀಲನೆ ಮಾಡುತ್ತೇನೆ ಎಂದವರು ತಿಳಿಸಿದರು.