ಬೆಂಗಳೂರು : ಆರೋಗ್ಯ ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರ ನಿಶ್ಚಿತಾರ್ಥ ಹೈದರಾಬಾದ್‌ನ ಉದ್ಯಮಿ ರವಿ ಕುಮಾರ್ ಅವರ ಪುತ್ರ ಲಲಿತ್ ಕುಮಾರ್ ಅವರೊಂದಿಗೆ ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತು.
ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನವ ಜೋಡಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಪಕ್ಷದ ಮುಖಂಡರು, ಉದ್ಯಮಿಗಳು, ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಸಹಿತವಾಗಿ ಗಣ್ಯಾತೀಗಣ್ಯರು ಶುಭ ಹಾರೈಸಿದರು.
ನವ ಜೋಡಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೂ ಗುತ್ಛ ನೀಡುವ ಮೂಲಕ ಶುಭ ಹಾರೈಸಿದರು. ಇದೇ ವೇಳೆ ನವಜೋಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಆಶೀರ್ವಾದ ಪಡೆದರು.
ಬಿಳಿ ಪಂಚೆ ಮತ್ತು ಬಿಳಿ ಶರ್ಟ್ ಮತ್ತು ಶಾಲು ಧರಿಸಿರುವ ರಕ್ಷಿತಾ ತಂದೆ, ಸಚಿವ ಶ್ರೀರಾಮುಲು ಅವರು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದಿರುವ ಎಲ್ಲ ಗಣ್ಯರನ್ನು ತಾವೇ ಸ್ವಾಗತಿಸಿಕೊಂಡು ವೇದಿಕೆ ಮೇಲೆ ನವಜೋಡಿಗೆ ಪರಿಚಯ ಮಾಡಿಕೊಟ್ಟರು. ಪಕ್ಷಬೇಧ ವಿಲ್ಲದೆ ಎಲ್ಲ ಪಕ್ಷದ ಮುಖಂಡರು ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.
ರಾಜಕೀಯ ಪಕ್ಷಗಳ ಮುಖಂಡರು ಮಾತ್ರವಲ್ಲದೆ ಸಂಘಪರಿವಾರದ ಪ್ರಮುಖರು ಕೂಡ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರ್‌ಎಸ್‌ಎಸ್ ಮುಖಂಡರಾದ ಡಾ.ಪ್ರಭಾಕರ್ ಭಟ್ ಕಲಡ್ಕ ಅವÃ ನವ ಜೋಡಿಗೆ ಶುಭಹಾರೈಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಜನಾರ್ದನ ರೆಡ್ಡಿ ಶಾಸಕರಾದ ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ, ರಾಜುಗೌಡ ಸಹಿತವಾಗಿ ವಿವಿಧ ಪಕ್ಷದ ಶಾಸಕರು ಭಾಗಿಯಾಗಿದ್ದರು. ರಾಜಕಾರಣಿಗಳು ಮಾತ್ರವಲ್ಲದೆ, ಸರ್ಕಾರದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರದ ಗಣ್ಯರ ದಂಡು ಕಾರ್ಯಕ್ರಮದಲ್ಲಿತ್ತು. ಕಾರ್ಯಕ್ರಮದಲ್ಲಿ ಬಂದಿರುವರಿಗೆ ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತದ ಕಾರ್ಯಕ್ರಮ ಸವಿಯುವ ಅವಕಾಶವೂ ಸಿಕ್ಕಿದೆ.
ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿಯ ನೂತನ ಶಾಸಕರು, ಹಿರಿಯ ಶಾಸಕರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು, ಮುಖಂಡರ ಅನೌಪಚಾರಿಕ ಸಮಾಗಮಕ್ಕೆ ಈ ನಿಶ್ಚಿತಾರ್ಥ ಕಾರ್ಯಕ್ರಮ ಸಾಕ್ಷಿಯಾಗಿದೆ.