Advertisement

ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮರೆಡ್ಡಿ ಕೆಂಡ

09:11 PM Jul 03, 2019 | Team Udayavani |

ಬಾಗೇಪಲ್ಲಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಮಯವಿಲ್ಲದಿರುವಾಗ ರೈತರ, ಕೃಷಿ ಕಾರ್ಮಿಕರ ಸಮಸ್ಯೆ ಶಮನ ಮಾಡಲು ಸಾಧ್ಯವೇ ಎಂದು ಮಾಜಿ ಶಾಸಕ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಜಿ.ವಿ.ಶ್ರೀರಾಮರೆಡ್ಡಿ ಪ್ರಶ್ನಿಸಿದರು.

Advertisement

ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಶಾಖೆ ಆಶ್ರಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ಕಚೇರಿ ಮುಂದೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಖ ಮಾಡಿಲ್ಲ: ಮಾಜಿ ಸಂಸದ ವೀರಪ್ಪಮೊಯ್ಲಿ 2-3ತಿಂಗಳಿಗೊಮ್ಮೆಯಾದರೂ ತಾಲೂಕಿಗೆ ಭೇಟಿ ನೀಡಿ ಸುಳ್ಳು ಹೇಳಿ ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಲೋಕಸಭೆಗೆ ಆಯ್ಕೆಯಾಗಿರುವ ಸಂಸದರು ತಾಲೂಕಿನ ಕಡೆ ಮುಖ ಮಾಡುವುದಿಲ್ಲ. ಇನ್ನು 5ವರ್ಷ ಜನರು ನರಕಯಾತನೆ ಅನುಭವಿಸಬೇಕಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಆಡಳಿತ ಯಂತ್ರಾಂಗ ಸ್ಥಗಿತಗೊಂಡಿದೆ. ಶಾಸಕರು ನಾಮಫಲಕ ಹಾಕಿಕೊಂಡು ಮಾರಾಟಕ್ಕೆ ಸಿದ್ಧವಾಗಿ ನಿಂತಿದ್ದಾರೆ. ಮುಳಬಾಗಿಲು ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಂತ್ರಿ ಸ್ಥಾನ ನೀಡಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಹಳ್ಳಿಗಳಿಗೆ ಹೋಗಿ ಗ್ರಾಮ ವ್ಯಾಸ್ತವ್ಯ ಮಾಡಿ ಪ್ರಚಾರಗಿಟ್ಟಿಸಿಕೊಂಡರೆ ಹಳ್ಳಿಗಳ ಪರಿಸ್ಥಿತಿ ಸುಧಾರಣೆಯಾಗುವುದಿಲ್ಲ. ಮುಖ್ಯ ಮಂತ್ರಿ ಕುಮಾರಸ್ವಾಮಿ ಮಾತಿಗೆ ಮುಂಚೆ ತಾನು ರೈತನ ಮಗ ಎನ್ನುತ್ತಾರೆ. ಆದರೆ ರೈತರ ಜೀವಂತ ಸಮಸ್ಯೆ ಪರಿಹಾರ ಮಾಡಲು ವಿಫಲರಾಗಿದ್ದಾರೆಂದರು.

Advertisement

ಕ್ರಮವಿಲ್ಲ: 2 ವರ್ಷಗಳಿಂದ ರೈತರು ಮಾಡಿಸಿದ್ದ ಬೆಳೆ ವಿಮೆ ಹಣ ಪಾವತಿ ಮಾಡಿಲ್ಲ. ತೀವ್ರ ಬರಗಾಲದಿಂದ ರೈತರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಜನಪ್ರತಿನಿಧಿಗಳು ಖಾಲಿ ಇರುವ ಸಿಬ್ಬಂದಿ ತುಂಬಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಉದ್ಯೋಗ ಖಾತ್ರಿ ಇಲ್ಲ: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಯಾವುದೇ ಡ್ಯಾಂಗಳಲ್ಲಿ ನೀರು ಶೇಖರಣೆಯಾಗಿಲ್ಲ. ಆದರೆ, ಸರ್ಕಾರ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳುತ್ತಿದೆ ಆದರೂ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ.

ಸರ್ಕಾರಿ ಮಾನದಂಡಗಳ ಪ್ರಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಗೆ 1ವಾರದೊಳಗೆ ಹಣ ಪಾವತಿಸಬೇಕು. ಅರ್ಜಿ ಸಲ್ಲಿಸಿದ ಕೂಲಿಗೆ 1ವಾರದೊಳಗೆ ಕೂಲಿ ಕೆಲಸ ನೀಡದಿದ್ದರೆ ಶೇ.50 ಹಣ ಪಾವತಿಸಬೇಕಾಗಿದೆ. ಇಂತಹ ಯಾವುದೇ ಮಾನದಂಡಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದರು.

ಗಡುವು ವಿಸ್ತರಿಸಿ: ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಜೆಸಿಬಿ ಪಿ.ಮಂಜುನಾಥರೆಡ್ಡಿ, ಶೇ.90ರಷ್ಟು ಜನರು ಕೃಷಿ ನಂಬಿ ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ರೈತರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು, ಪಿ.ಎಂ.ಕಿಸಾನ್‌ ಯೋಜನೆ ಗಡುವು ವಿಸ್ತರಿಸಬೇಕೆಂದರು.

ಇದಕ್ಕೂ ಮೊದಲು ಡಾ.ಎಚ್‌.ಎನ್‌.ವೃತ್ತದಿಂದ ಮೆರವಣಿಗೆಯಲ್ಲಿ ಬಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್‌ ನಾಗರಾಜ್‌ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಪ್ರಾಂತ ರೈತ ಸಂಘದ ಅಧ್ಯಕ್ಷ ಎ.ಎನ್‌.ಶ್ರೀರಾಮಪ್ಪ, ಸಿಪಿಎಂ ಕಾರ್ಯದರ್ಶಿ ಚನ್ನರಾಯಪ್ಪ, ನಗರ ಘಟಕದ ಅಧ್ಯಕ್ಷ ಅಶ್ವತ್ಥಪ್ಪ, ಡಿವೈಎಫ್‌ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ, ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಕಾರ್ಯದರ್ಶಿ ಜಿ.ಮುಸ್ತಾಫ್‌, ಮುಖಂಡರಾದ ಎ.ರಮೇಶ್‌, ಫಾತೀಮಾ , ಜೈನಾಬೀ, ಮಂಜುಳಾ, ಗಂಗುಲಮ್ಮ, ಪ್ರಮೀಳಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next