ಬೆಳ್ತಂಗಡಿ: ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸದಂದೆ, ದಕ್ಷಿಣದ ಅಯೋಧ್ಯೆ ಎಂದೇ ಪ್ರಸಿದ್ಧವಾದ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಸೀತಾ-ರಾಮ ಪರಿವಾರ ದೇವರುಗಳ ಅಮೃತಶಿಲೆಯ ಮೂರ್ತಿಗಳ ಪ್ರತಿಷ್ಠಾಪನೆ ನೆರವೇರಿದೆ.
ಸುಮಾರು 60 ವರ್ಷಗಳಿಂದ ಶ್ರೀ ರಾಮಕ್ಷೇತ್ರದಲ್ಲಿ ರಾಮನ ಆರಾಧನೆ ನಿತ್ಯನಿತಂತರ ನಡೆಯುತ್ತಿದೆ. ಆಗಮ ಶಾಸ್ತ್ರಜ್ಞ ಲಕ್ಷ್ಮೀಪತಿ ಗೋಪಲಾಚಾರ್ಯ, ಮಹೇಶ್ ಶಾಂತಿ ಹೆಜಮಾಡಿ ಅವರಿಂದ ಬ್ರಹ್ಮಕಲಶೋತ್ಸವ, ಸಿತಾ- ರಾಮ ಪರಿವಾರ ದೇವರು, ಬ್ರಹ್ಮಶ್ರೀ ನಾರಾಯಣ ಗುರು ಮೂರ್ತಿಯ ಪ್ರತಿಷ್ಠಾಪನೆ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀ ರಾಮತಾರಕ ಮಂತ್ರಯಜ್ಝ, ಸುದರ್ಶನಯಾಗ, ವಾಸ್ತುಬಲಿ, ರಕ್ಷೋಘ್ನ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯ ಸೀತಾ ರಾಮ ಪರಿವಾರ ದೇವರಿಗೆ ಪೂಜೆ ನೆರವೇರಿಸಿ ಮಾತನಾಡಿದರು.
ಈ ಕ್ಷೇತ್ರ ಪುಣ್ಯ ಭೂಮಿಗೆ ಪ್ರಭು ಶ್ರೀ ರಾಮಚಂದ್ರ ದೇವರು ಸೀತಾನ್ವೇಷಣೆಯ ಸಂದರ್ಭದಲ್ಲಿ ಬಂದು ಒಂದು ದಿವಸ ತಂಗಿ ಋಷಿ ಮುನಿಗಳೊಂದಿಗಿದ್ದು ತನ್ನ ಅನುಷ್ಠಾನವನ್ನು ಮಾಡಿದರು ಎಂಬುದು ಇತಿಹಾಸ. ಆ ಕಾರಣದಿಂದಲೇ ನಮ್ಮ ಶ್ರೀರಾಮಕ್ಷೇತ್ರ ಮಹಾಸಂಸ್ಥಾನಕ್ಕೆ ದಕ್ಷಿಣದ ಅಯೋಧ್ಯೆ ಎಂಬ ಹೆಸರಾಯಿತು. ಇಂದು ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರ ದೇವರ ಭವ್ಯ ಮಂದಿರ ನಿರ್ಮಾಣದ ಶಿಲಾನ್ಯಾಸ ಆಗುವುದು ನಮಗೆಲ್ಲ ತುಂಬಾ ಸಂತೋಷವನ್ನು ತಂದಿದೆ.
ಅದಕ್ಕಾಗಿ ಅದೇ ದಿನ ನಾವು ನಮ್ಮ ಮಠದಲ್ಲಿ ಕೂಡಾ ಭಕ್ತಾದಿಗಳಿಗೆ ನಿತ್ಯನಿರಂತರ ಭಗವಂತನ ದರ್ಶನಕ್ಕಾಗಿ ಸೀತಾ-ರಾಮ ಪರಿವಾರ ದೇವರುಗಳ ಭವ್ಯವಾದ ಅಮೃತಶಿಲೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಂಕಲ್ಪ ಮಾಡಲಾಯಿತು ಎಂದು ಸ್ವಾಮೀಜಿ ಹೇಳಿದರು.