Advertisement
ಕೊಂಕಣಿಯು ಇಂಡೋ ಆರ್ಯನ್ ಭಾಷಾ ಗುಂಪಿಗೆ ಸೇರಿದ ಭಾಷೆ. ಕೆಲವು ಭಾಷಾತಜ್ಞರ ಅಭಿಮತದಂತೆ ಇದು ಮಹಾರಾಷ್ಟ್ರ ಪ್ರಾಕೃತ ಮತ್ತು ಮಹಾರಾಷ್ಟ್ರ ಅಪಭ್ರಂಶದಿಂದ ಉಗಮಗೊಂಡಿದೆ. ಇದರ ಮೇಲೆ ಸಂಸ್ಕೃತದ ಗಾಢ ಪ್ರಭಾವವಿದೆ.
Related Articles
Advertisement
ಗೋವೆಗೆ ಬಂದ ಕೊಂಕಣಿಗರು ವಿವಿಧ ಕಾರಣಗಳಿಂದಾಗಿ ದಕ್ಷಿಣದತ್ತ ವಲಸೆ ಹೋದರು. ಹದಿನಾರನೆಯ ಶತಮಾನದ ಮತಾಂತರ ಯಜ್ಞಕ್ಕೆ ಅಂಜಿ ಬಹುಸಂಖ್ಯಾ ಹಿಂದೂಗಳು ಉತ್ತರ, ದಕ್ಷಿಣಕ್ಕೆ ವಲಸೆ ಹೋಗಿದ್ದರೂ ಅದಕ್ಕೂ ಮೊದಲು ಕೃಷಿ, ನೌಕರಿ, ಖಾಯಂ ವಸತಿಗಾಗಿ ಜನ ವಲಸೆ ಹೋದದ್ದುಂಟು.
ಹದಿನಾಲ್ಕನೆಯ ಶತಮಾನದವರೆಗೆ ಕೊಂಕಣಿ ಭಾಷೆಯ ಅಸ್ತಿತ್ವದ ಬಗ್ಗೆ ಅಸ್ಪಷ್ಟ ದಾಖಲೆಗಳಿದ್ದರೂ ಹದಿನಾಲ್ಕನೆಯ ಶತಮಾನದಲ್ಲಿ ಜೀವಿಸಿದ್ದ ಮಹಾರಾಷ್ಟ್ರದ ಸಂತ ನಾಮದೇವನ ಗಾಥೆಗಳಲ್ಲಿ ಸ್ಪಷ್ಟ ಉಲ್ಲೇಖ ಸಿಗುತ್ತದೆ. ಅದರಿಂದ ಕನ್ನಡ, ಗುಜರಾತಿ, ಮರಾಠಿ ಭಾಷೆಯಂತೆ ಕೊಂಕಣಿಯೂ ಬೆಳೆದ ಭಾಷೆಯಾಗಿತ್ತು ಎಂದು ತಿಳಿಯುತ್ತದೆ.
ಕ್ರಿ.ಶ. 1510ರಲ್ಲಿ ಗೋವೆಯಲ್ಲಿ ಕಾಲಿಟ್ಟ ಪೋರ್ಚುಗೀಸರು ಹಿಂದೂ ಧರ್ಮ ನಷ್ಟ ಮಾಡದೆ, ಅವರ ದೇವರ ಸಂಕೇತಗಳನ್ನು ನಷ್ಟಗೊಳಿಸದೆ ಕ್ರೈಸ್ತಧರ್ಮ ಈ ನೆಲದಲ್ಲಿ ಬೇರೂರಿಸಲು ಸಾಧ್ಯವಿಲ್ಲವೆಂದು ಮೊದಲು ಧರ್ಮಾಂತರಕ್ಕೆ ಕೈ ಹಾಕಿದರು (1560). ಅದರಲ್ಲಿ ಅವರಿಗೆ ಸೋಲುಂಟಾದಾಗ ಕೊಂಕಣಿ ಭಾಷೆಯನ್ನೇ ನಾಶಗೊಳಿಸಿದರೆ ಪೋರ್ಚುಗೀಸರ ಭಾಷೆ ಉಳಿಯುತ್ತದೆ ಎಂದು ಭಾವಿಸಿ ತಮಗೆ ಬೇಕಾದಂತೆ ಕಾನೂನು ರಚಿಸಿ ಕೊಂಕಣಿ ಭಾಷೆ ಸಮೂಲ ಕಿತ್ತೂಗೆಯಲು ಪ್ರಯತ್ನಿಸಿದರು. ಅಲ್ಲಿಯೂ ಅವರಿಗೆ ಸೋಲುಂಟಾಯಿತು. ಕೊಂಕಣಿ ಭಾಷೆ ಬದುಕಿತು, ಕೊಂಕಣಿಯ ಮಹತ್ವದ ದಾಖಲೆ ಪುಸ್ತಕಗಳನ್ನು ಸುಟ್ಟು ಹಾಕಿದರು ಎಂದು ಹೇಳುತ್ತಾರೆ. ಕೆಲವು ದಾಖಲೆ ಮತ್ತು ಪುಸ್ತಕಗಳನ್ನು ಬ್ರಾಗಾ ಲೈಬ್ರೆರಿಯಲ್ಲಿ ಒಯ್ದಿಟ್ಟಿದ್ದಾರೆಂದು ಹೇಳಲಾಗುತ್ತದೆ. ಅಲ್ಲಿಂದ ಕೆಲವರು ಒಂದೆರಡು ಗ್ರಂಥಗಳನ್ನು ತಂದು ಪ್ರಕಟಿಸಿದ್ದಾರೆ.
ಕೊಂಕಣಿ ಸಾಹಿತ್ಯ ಬೆಳೆಯಿತು !ಡಿ. 19, 1961ರಂದು ಗೋವಾ ಸ್ವತಂತ್ರ ವಾಯಿತು. ಅದುವರೆಗೆ ಕುಂಟುತ್ತ, ತೆವಳುತ್ತ ಸಾಗಿದ ಕೊಂಕಣಿ ಸಾಹಿತ್ಯ ಕೃಷಿಗೆ ಜೀವಬಂದಂತಾಯಿತು. ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿದ್ದ ಸಾಹಿತಿಗಳು ಹುರುಪಿನಿಂದ ಬರೆಯತೊಡಗಿದರು. ಕಾವ್ಯ, ನಾಟಕ, ಕಾದಂಬರಿ, ಕಥೆ, ವಿಮರ್ಶೆ, ಪ್ರಬಂಧ- ಹೀಗೆ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ನಿರ್ಮಿತಿಯಾಯಿತು. ಕರ್ನಾಟಕ ಕ್ರೈಸ್ತಬಾಂಧವರು ಬರೆಯುತ್ತಿದ್ದರೂ ಗೋವೆಯ ಸ್ವತಂತ್ರದ ನಂತರ ಇನ್ನಷ್ಟು ಹೆಚ್ಚು ಜನ ಬರೆಯತೊಡಗಿದರು. ಮಂಗಳೂರು, ಉಡುಪಿ, ಕೇರಳದ ಹಿಂದೂಗಳು ಸಾಹಿತ್ಯ ಕೃಷಿಗೆ ಕೈಹಾಕಿದರು. ಕೊಂಕಣಿ ಭಾಷೆಯನ್ನು ತಿರಸ್ಕಾರದಿಂದ ನೋಡುತ್ತಿದ್ದ ಕಾಲದಲ್ಲಿ ಬೋಳಂತೂರು ಕೃಷ್ಣ ಪ್ರಭುಗಳು ನಾಟಕ ಬರೆದು ಪ್ರಥಮ ನಾಟಕಕಾರರೆಂಬ ಕೀರ್ತಿಗೆ ಪಾತ್ರರಾದರು. ಕನ್ನಡ ಲಿಪಿಯಲ್ಲಿ ಕೊಂಕಣಿ ಬರೆಯುವವರು ಕರ್ನಾಟಕದಲ್ಲಿದ್ದರೆ, ದೇವನಾಗರಿ ಲಿಪಿಯಲ್ಲಿ ಬರೆಯುವವರು ಗೋವೆ ಮತ್ತು ಕೇರಳದಲ್ಲಿದ್ದಾರೆ. ಗೋವೆಯ ಕ್ರಿಸ್ತಬಂಧುಗಳು ರೋಮನ್ ಲಿಪಿಯಲ್ಲಿಯೂ ಬರೆಯುತ್ತಾರೆ. ಕೊಂಕಣಿ ಭಾಷೆಯಲ್ಲಿ ವಿಪುಲ ವೈಚಾರಿಕ ಸಾಹಿತ್ಯ ಕೃಷಿ ಮಾಡಿದ ರವೀಂದ್ರ ಕಳೇಕಾರ್‌ರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕೊಂಕಣಿ ಭಾಷೆಯ ಕಾವ್ಯಕೃಷಿ ಮಾಡಿ ಡಾ. ರ. ಪಿ. ಪಂಡಿತರು ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡರು. ಮರಾಠಿ ಮತ್ತು ಕೊಂಕಣಿ ಕಾವ್ಯ ಕ್ಷಿತಿಜದಲ್ಲಿ ಧ್ರುವತಾರೆಯಂತೆ ಮೆರೆದ ಕವಿವರ್ಯ ಬಾ.ಭ. ಬೋರಕರ್‌ರಿಗೆ ಪದ್ಮಶ್ರೀ ಅಕಾಡೆಮಿಯ ವಾರ್ಷಿಕ ಪುರಸ್ಕಾರಕ್ಕೆ ಪಾತ್ರರಾದವರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಭಾಜನರಾದವರು ಅನೇಕರಿದ್ದಾರೆ. ನಾನು ಮೊದಲೇ ಸೂಚಿಸಿದಂತೆ ಕರ್ನಾಟಕದಲ್ಲಿ ಕೊಂಕಣಿ ಸಾಹಿತ್ಯ ಬೆಳವಣಿಗೆಯ ಕೇಂದ್ರಬಿಂದು ದಕ್ಷಿಣಕನ್ನಡ ಜಿಲ್ಲೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಹೊಸಾಡ ಬಾಬುಟಿ ನಾಯಕ, ದಿನಕರ ದೇಸಾಯಿ, ಗೌರೀಶ ಕಾಯ್ಕಿಣಿ, ಡಾ. ಪಿ.ಆರ್. ಶಿಬಾಡ್, ಪ್ರೊ. ಎಂ.ಎನ್. ಪ್ರಭು, ದೇವರಾಯ ಅಯYಳ, ವಾಸುದೇವ ಶಾನಭಾಗ, ಆನಂದು ಶಾನಭಾಗ, ಮಾರುತಿ ನಾಯಕ ದೇವನಳ್ಳಿ , ಅನಿಲ ಪೈ, ಎನ್.ಬಿ. ಕಾಮತ್, ಕೆ.ಎನ್. ರಾವ್, ಆರ್.ಎಂ. ಶೇಟ, ನಾಗೇಶ ಅಣೆÌàಕರ್, ಪದ್ಮನಾಭ ನಾಯಕ ಮೊದಲಾದವರಿದ್ದಾರೆ. ರಾಮಾಯಣ, ಮಹಾಭಾರತ ನಮ್ಮ ಆದಿಕಾವ್ಯಗಳು. ಭಾರತದ ವಿವಿಧ ಭಾಷೆಗಳಲ್ಲಿ ಆದಿ ಕಾವ್ಯಾಧಾರಿತ ಕಾವ್ಯಗಳು, ಗದ್ಯಾನುವಾದಗಳು ಪ್ರಕಟವಾಗಿವೆ. ಅಷ್ಟೇ ಅಲ್ಲ ಈ ಮಹಾಕಾವ್ಯಗಳು ಜಾನಪದ ಸ್ವರೂಪ ಪಡೆದು ಜನಪದ ಕಾವ್ಯಗಳಾಗಿ ಜನಜೀವನದಲ್ಲಿ ಸೇರಿಕೊಂಡಿವೆ. ಕೇರಳದ ಕೊಂಕಣಿಯಲ್ಲಿದ್ದ ಜನಪದ ಮಹಾಕಾವ್ಯ “ಗೊಡ್ಡೆ ರಾಮಾಯಣ’ ಎಂಬ ಹೆಸರಿನಲ್ಲಿ ಪ್ರೊ. ಆರ್.ಕೆ. ರಾವ್ ಸಂಪಾದಿಸಿದ್ದಾರೆ. ಗೋವೆಯಲ್ಲಿಯೂ ಇಂಥ ಜನಪದ ಮಹಾಕಾವ್ಯಗಳಿವೆಯೆಂದು ಡಾ. ಮನೋಹರ್ ರಾವ್ ಸರ್‌ದೇಸಾಯಿಯವರು ಹೇಳುತ್ತಿದ್ದರು. ಶಿಷ್ಟ ಸಾಹಿತ್ಯದಲ್ಲಿ ಕೊಂಕಣಿ ಭಾಷೆಯಲ್ಲಿ ಮಹಾಕಾವ್ಯ ಕೃಷಿ ಕಡಿಮೆಯೆಂದೇ ಹೇಳಬೇಕು. ಈ ಕೊರತೆಯನ್ನು ನೀಗಲು ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿನ ವಿಶ್ವನಾಥ ಶೇಟ್ ಎಂಬವರು ಮುಂದಾಗಿದ್ದಾರೆ. ಅವರು ಸುಮಾರು ಹತ್ತು ವರ್ಷ ಪ್ರಯತ್ನಿಸಿ ಕೊಂಕಣಿಯಲ್ಲಿ ಷಟ³ದಿ ಛಂದಸ್ಸಿನಲ್ಲಿ ರಾಮಾಯಣ ಮಹಾಕಾವ್ಯವನ್ನು ಪುನರ್ ವ್ಯಾಖ್ಯಾನಿಸಿ ಬರೆದಿದ್ದಾರೆ. ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗ್ರಾಮದಲ್ಲಿರುವ ವಿಶ್ವನಾಥ ಶೇಟ ಅವರು ಮೂಲತಃ ಯಕ್ಷಗಾನ ಕಲಾವಿದರು. ತಾಳಮದ್ದಳೆಯಲ್ಲಿ ಒಳ್ಳೆಯ ಪರಿಣತಿಯುಳ್ಳ ಅವರು ಯಕ್ಷಗಾನ ವೇಷಭೂಷಣಗಳನ್ನು ತಯಾರಿಸುತ್ತಾರೆ. ಮೂರ್ತಿಶಿಲ್ಪಗಳನ್ನು ರಚಿಸುತ್ತಾರೆ. ನಾಟಕ-ಯಕ್ಷಗಾನಗಳಿಗೆ ವರ್ಣಾಲಂಕಾರ ಮಾಡುತ್ತಾರೆ. ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಾರೆ. ಕೊಂಕಣಿಯಲ್ಲಿ ಯಕ್ಷಗಾನ ಬರೆಯುತ್ತಾರೆ, ಕನ್ನಡದಲ್ಲಿ ಕವನ, ಲೇಖನ, ಪುಸ್ತಕಗಳನ್ನು ಬರೆಯುತ್ತಾರೆ. ಬಾಸಿಂಗ ರಚನೆಯಲ್ಲಿ ಹೆಸರು ಮಾಡಿದ್ದಾರೆ. ಯಕ್ಷಗಾನ, ನಾಟಕಗಳನ್ನು ನಿರ್ದೇಶಿಸುತ್ತಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಕಾರ್ಯಕ್ರಮಗಳಿರುತ್ತವೆ. ಇವರು ಬರೆದ ಶ್ರೀರಾಮ ಚರಿತ ಎಂಬ ಕೊಂಕಣಿ ಮಹಾಕಾವ್ಯ ಎರಡು ಸಂಪುಟಗಳಲ್ಲಿ ಪ್ರಕಟವಾಗುತ್ತದೆ. ಮೊದಲ ಸಂಪುಟದಲ್ಲಿ ಕಾವ್ಯದ ಷಟ³ದಿಗಳು, ಎರಡನೆಯ ಸಂಪುಟದಲ್ಲಿ ಕಾವ್ಯದ ಸಂದರ್ಭ ಸೂಚಿ ಮತ್ತು ಸಂಕ್ಷಿಪ್ತ ಅರ್ಥ ನೀಡಲಾಗಿದೆ. ಕೊಂಕಣಿ ಭಾಷೆಯ ಲಾಲಿತ್ಯ, ಕಲ್ಪನಾವಿಲಾಸ, ಪಾತ್ರ ವೈವಿಧ್ಯ, ಮನೋಜ್ಞ ಸನ್ನಿವೇಶ ಸೃಷ್ಟಿಗಳಿಂದ ಈ ಕಾವ್ಯ ಓದುಗರಿಗೆ ಆಪ್ಯಾಯಮಾನವಾಗುತ್ತಿದೆ. ಈ ಎರಡು ಸಂಪುಟಗಳ ಪ್ರಕಟಣೆಯ ಜವಾಬ್ದಾರಿ ಹೊತ್ತು ಲೋಕಾರ್ಪಣೆಗೆ ಅನುವು ಮಾಡಿಕೊಟ್ಟವರು ಶಿರಸಿಯ ಉತ್ತರ ಕನ್ನಡ ಕೊಂಕಣಿ ಪರಿಷತ್ತಿನವರು. – ಶಾ. ಮಂ. ಕೃಷ್ಣರಾವ್