ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಎನ್ನುವುದು ಹಿಂದೂ ಗಳ ನಂಬಿಕೆ. ಈ ಬಗ್ಗೆ ಪುರಾಣಗಳಲ್ಲಿ ಮತ್ತು ಹಲವು ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸಿ ಕಥನಗಳಲ್ಲಿ ಉಲ್ಲೇಖೀಸಿದ್ದಾರೆ ಎಂದು ರಾಮಲಲ್ಲಾ ವಿರಾಜಮಾನ್ ಪರ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಅರಿಕೆ ಮಾಡಿದ್ದಾರೆ. ಪುರಾಣಗಳಲ್ಲಿನ ಅಂಶವನ್ನು ಹೆಚ್ಚು ವಿಮರ್ಶೆಗೆ ಒಳಪಡಿಸಬಾರದು ಎಂದೂ ಅವರು ಕೋರಿದ್ದಾರೆ.
ಬುಧವಾರ ನಡೆದ 6ನೇ ದಿನದ ವಾದ ಮಂಡನೆ ವೇಳೆ ಈ ಅಂಶ ಪ್ರಸ್ತಾವವಾಗಿದೆ. ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ 1608-1611ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇಂಗ್ಲಿಷ್ ವ್ಯಾಪಾರಿ ವಿಲಿಯಂ ಫಿಂಚ್ ಅಯೋಧ್ಯೆಯಲ್ಲಿ ಕೋಟೆ ಇದೆ. ಅಲ್ಲಿ ರಾಮ ಜನಿಸಿದ್ದ ಎಂದು ಹಿಂದೂಗಳು ನಂಬುತ್ತಾರೆ ಎಂದು ದಾಖ ಲಿಸಿದ್ದ ಅಂಶವನ್ನು ಮುಖ್ಯ ನ್ಯಾಯ ಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ.
ಜತೆಗೆ ಮತ್ತೂಬ್ಬ ಬ್ರಿಟಿಷ್ ಪ್ರವಾಸಿಗ ಮೊಂಟೋಗ್ಮೆರಿ ಮಾರ್ಟಿ ಮತ್ತು ಜೆಸ್ವಿಟ್ ಮಿಷನರಿಯ ಜೋಸೆಫ್ ಟೆಫಂಥ್ಲರ್ ಕೂಡ ಅಯೋಧ್ಯೆಯಲ್ಲಿ ರಾಮ ಜನಿಸಿದ್ದ ಬಗ್ಗೆ ಉಲ್ಲೇಖೀಸಿದ್ದರು ಎಂದಿದ್ದಾರೆ. ಈ ವೇಳೆ ನ್ಯಾಯಪೀಠ ‘ಹಾಗಿದ್ದರೆ ಸ್ಥಳವನ್ನು ಯಾವಾಗಿನಿಂದ ಬಾಬರಿ ಮಸೀದಿ ಎಂದು ಮೊದಲು ಕರೆಯಲಾಯಿತು ಎಂದು ವೈದ್ಯನಾಥನ್‌ರನ್ನು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ವೈದ್ಯನಾಥನ್ ’19ನೇ ಶತಮಾನಕ್ಕೆ ಮುನ್ನ ಸ್ಥಳವನ್ನು ಬಾಬರಿ ಮಸೀದಿ ಎಂದು ಕರೆದಿರುವುದಕ್ಕೆ ದಾಖಲೆಗಳು ಇಲ್ಲ’ ಎಂದರು. ಅದಕ್ಕೆ ಮರು ಪ್ರಶ್ನೆ ಹಾಕಿದ ನ್ಯಾಯಪೀಠ ‘ಮೊಘಲರ ದೊರೆ ಬಾಬರ್ ಈ ಬಗ್ಗೆ ಮೌನವಾಗಿದ್ದರೇ’? ಎಂದು ಕೇಳಿತು. ಅಲ್ಲದೆ, ಬಾಬರನೇ ದೇಗುಲ ಧ್ವಂಸ ಮಾಡಲು ಆದೇಶಿಸಿದ್ದ ಎನ್ನುವುದಕ್ಕೆ ಏನು ಆಧಾರವಿದೆ ಎಂದೂ ಪ್ರಶ್ನಿಸಿತು. ಅದಕ್ಕೆ ವೈದ್ಯನಾಥನ್, ಮೊಘಲ್ ದೊರೆಯೇ ತನ್ನ ಸೇನಾಧಿಕಾರಿಗಳಿಗೆ ದೇಗುಲ ಧ್ವಂಸಕ್ಕೆ ಆದೇಶಿಸಿದ್ದ ಎಂದರು.