ಬಂಟ್ವಾಳ : ಮೈನವಿರೇಳಿಸುವ ಕವಾಯತುಗಳ ಮೂಲಕ ಖ್ಯಾತಿ ಗಳಿಸಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವ ಶನಿವಾರ ಸಂಜೆ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನೆರವೇರಿತು.
ವಿದ್ಯಾಕೇಂದ್ರದ ಶಿಶು ಮಂದಿರದಿಂದ ಹಿಡಿದು ಕಾಲೇಜಿನ ವರೆಗಿನ 3,500ಕ್ಕೂ ಅಧಿಕ ವಿದ್ಯಾರ್ಥಿ ಗಳು ಪ್ರತಿಭಾ ಪ್ರದರ್ಶನ ನೀಡಿದರು.
ಹೋರಾಟ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಕರಾಟೆ ಸಹಿತ ವಿವಿಧ ಪ್ರದರ್ಶನಗಳು, ದೀಪಗಳನ್ನು ಹಿಡಿದು “ಅರಳಿದೆ ನವಭಾರತ ದೇಶ’ ಎಂಬ ಹಾಡಿನೊಂದಿಗೆ ಮೂಡಿದ ನಕ್ಷತ್ರ, ಹಣತೆ, ಉದಯಿಸುವ ಸೂರ್ಯನ ರಚನೆಗಳು, ವಿದ್ಯಾರ್ಥಿಗಳ ಯೋಗಾಸನ ಪ್ರದರ್ಶನ ಆಕರ್ಷಣೀಯವಾಗಿತ್ತು. 600ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಒಳಗೊಂಡ ಓಂಕಾರ, ಸ್ವಾತಂತ್ರ್ಯದ 75ರ ಸಂಭ್ರಮ, ತಾವರೆ ರಚನೆಗಳು ವಿಶೇಷವಾಗಿದ್ದವು.
ನೃತ್ಯ ಭಜನೆ, ಮೈನವಿರೇಳಿಸುವ ಮಲ್ಲಕಂಬ ದಲ್ಲಿ ಯೋಗಾಸನ ಪ್ರದರ್ಶನ, ಯಕ್ಷಗಾನ ಶೈಲಿಯ ನೃತ್ಯ, ಚಕ್ರ ಸಮತೋಲನ, ಮೋಟಾರು ಸೈಕಲ್ ಸವಾರಿ, ಎದೆಯಲ್ಲಿ ಒಡೆಯುವ ಟ್ಯೂಬ್‌ಲೈಟ್, ಬೆಂಕಿ ಸಾಹಸ, ಸ್ಕೇಟಿಂಗ್ ಪ್ರದರ್ಶನ, ವಾದ್ಯ ವಿಶೇಷ ನೃತ್ಯ, 906 ವಿದ್ಯಾರ್ಥಿಗಳು ಮೈದಾನದಲ್ಲಿ ನಿರ್ಮಿಸಿದ ರಂಗೋಲಿಯ ಚಿತ್ತಾರ ವಿಶೇಷವಾಗಿ ಗಮನ ಸೆಳೆಯಿತು.