Advertisement

ಶ್ರೀರಾಮ, ದುರ್ಗೆ ಹೆಸರಲ್ಲಿ ಲೋಕ ಗದ್ದಲ

01:11 AM Jun 19, 2019 | mahesh |

ನವದೆಹಲಿ: ‘ಜೈ ಶ್ರೀರಾಮ್‌’, ‘ಜೈ ಮಾ ದುರ್ಗೆ’, ‘ಜೈ ಮಮತಾ’, ‘ಜೈ ಭೀಮ್‌’, ‘ಅಲ್ಲಾ ಹು ಅಕ್ಬರ್‌’… ಈ ಘೋಷಣೆಗಳು ಮೊಳಗಿದ್ದು ಯಾವುದೋ ಸರ್ವಧರ್ಮ ಸಮ್ಮೇಳನದಲ್ಲಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಎನಿಸಿದ ನಮ್ಮ ದೇಶದ ಶಕ್ತಿಕೇಂದ್ರವಾದ ಲೋಕಸಭೆಯಲ್ಲಿ!

Advertisement

ಲೋಕಸಭಾ ಕಲಾಪದ 2ನೇ ದಿನವಾದ ಮಂಗಳವಾರ ವಿವಿಧ ಸಂಸದರು ಪ್ರಮಾಣ ವಚನ ಸ್ವೀಕರಿಸುವಾಗ ಸಂಸದೀಯ ನಡಾವಳಿಗಳನ್ನು ಮೀರಿ ವರ್ತಿಸಿದರು. ಸ್ಪೀಕರ್‌ರವರ ಆಣತಿಯ ಹೊರತಾಗಿಯೂ ಆಡಳಿತ, ವಿಪಕ್ಷಗಳ ಸಂಸದರಿಂದ ಘೋಷಣೆ- ಪ್ರತಿಘೋಷಣೆಗಳು, ಟೀಕೆಗಳು ಮೇಳೈಸಿದವು.

ಟಿಎಂಸಿ ಸಂಸದರ ಪ್ರತ್ಯುತ್ತರ: ಬಿಜೆಪಿಯವರ ಜೈ ಶ್ರೀ ರಾಮ್‌ ಘೋಷಣೆಗಳು, ವಿಪಕ್ಷದವರನ್ನು ಅದರಲ್ಲೂ ವಿಶೇಷವಾಗಿ ಟಿಎಂಸಿ ಸಂಸದರಿಗೆ ಕಸಿವಿಸಿ ಉಂಟು ಮಾಡಲೆಂದೇ ಬಳಸಲಾಯಿತು. ಇದಕ್ಕೆ ಪ್ರತಿಯಾಗಿ, ಟಿಎಂಸಿ ಸಂಸದರು ಪ್ರಮಾಣ ವಚನ ಸ್ವೀಕರಿಸುವ ವೇಳೆ ‘ಜೈ ಮಾ ದುರ್ಗೆ’, ‘ಜೈ ಹಿಂದ್‌’ ಎಂದು ಘೋಷಣೆಗಳನ್ನು ಕೂಗಿದರು.

ಘೋಷಣೆ ಸಮರದಲ್ಲಿ ರಾಹುಲ್: ಬಿಜೆಪಿ ಸಂಸದ ಅಜಯ್‌ ಕುಮಾರ್‌ ‘ಭಾರತ್‌ ಮಾತಾ ಕಿ ಜೈ’ ಎಂದು ಕೂಗಿದಾಗ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ‘ಮತ್ತೂಮ್ಮೆ ಕೂಗಿ’ ಎಂದರು. ಅದಕ್ಕೆ ಅಜಯ್‌ ಮತ್ತೆ ಕೂಗಿದರು. ಆಗ ರಾಹುಲ್, ‘ಮಗದೊಮ್ಮೆ’ ಎಂದರು. ಅದಕ್ಕೆ ಅಜಯ್‌ ಮತ್ತೂ ಒಂದು ಬಾರಿ ಕೂಗಿದರು. ಬಳಿಕ, ‘ನಾನು ಭಾರತ್‌ ಮಾತಾ ಕಿ ಎಂದು ಕೂಗುತ್ತೇನೆ. ನೀವು ಜೈ ಎನ್ನಿ’ ಎಂದು ರಾಹುಲ್ಗೆ ಅಜಯ್‌ ಸವಾಲು ಹಾಕಿದರು. ಅದಕ್ಕೆ ರಾಹುಲ್, ‘ಜೈ ಹಿಂದ್‌’ ಎಂದು ಘೋಷಣೆ ಕೂಗಿದರು. ಆಗ ಸದನದಲ್ಲಿದ್ದ ಎಲ್ಲ ಕಾಂಗ್ರೆಸ್‌ ಸದಸ್ಯರೂ ‘ಜೈ ಹಿಂದ್‌’ ಎಂದಿದ್ದು ಕಂಡುಬಂತು.

ಸೋನಿಯಾಗೆ ಅಭಿನಂದನೆ: ಸೋನಿಯಾ ಗಾಂಧಿಯವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಬಿಜೆಪಿ ಸಂಸದರು, ಅವರಿಗೆ ‘ಶುಭಾಶಯ’ ಹೇಳಿದರು. ಆದರೆ, ಸೋನಿಯಾರ ಪ್ರಮಾಣ ವಚನಕ್ಕೆ ಕಾಂಗ್ರೆಸ್ಸಿಗರು ಮೇಜು ಕುಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಸೋನಿಯಾರ ಪ್ರಮಾಣದ ನಂತರ ಪ್ರಮಾಣ ಸ್ವೀಕರಿಸಿದ ಮನೇಕಾ ಗಾಂಧಿ, ಪ್ರತಿಜ್ಞಾ ವಿಧಿ ಸ್ವೀಕಾರ ಸ್ಥಳದ ಬಳಿ ಬಂದಾಗ, ಪರಸ್ಪರ ಕೈ ಮುಗಿದು ಅಭಿನಂದಿಸಿದ್ದು ವಿಶೇಷವಾಗಿತ್ತು.

Advertisement

ಸನ್ನಿ ಯಡವಟ್ಟು: ಇಂಗ್ಲೀಷ್‌ನಲ್ಲಿ ಪ್ರಮಾಣ ಸ್ವೀಕರಿಸಿದ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್, ನಾನು ಭಾರತದ ಸಾರ್ವಭೌಮತ್ವ, ಸಮಗ್ರತೆಯನ್ನು ಎತ್ತಿ ಹಿಡಿಯುತ್ತೇನೆ (uphold) ಎನ್ನುವುದರ ಬದಲು, ಸಾರ್ವಭೌಮತ್ವ, ಸಮಗ್ರತೆ ತಡೆ ಹಿಡಿಯುತ್ತೇನೆ (withhold) ಎಂದುಬಿಟ್ಟರು. ಆನಂತರ, 2ನೇ ಬಾರಿಗೆ ಪ್ರಮಾಣ ಸ್ವೀಕರಿಸಿ ತಪ್ಪು ಸರಿಪಡಿಸಿಕೊಂಡರು. ಉತ್ತರ ಪ್ರದೇಶದ ಜಗದಂಬಿಕಾ ಪಾಲ್ ಸಹ ಪ್ರಮಾಣ ಸ್ವೀಕರಿಸುವ ಭರದಲ್ಲಿ ಕೆಲವು ಪದಗಳನ್ನು ಓದದೆ ಮುಂದೆ ಹೋಗಿ, ಆನಂತರ ಸರಿಯಾಗಿ ಪ್ರಮಾಣ ಸ್ವೀಕರಿಸಿದರು.

ಗಾಲಿ ಕುರ್ಚಿಯಲ್ಲಿ ಬಂದ ಮುಲಾಯಂ: ಅನಾರೋಗ್ಯದಿಂದ ಬಳಲುತ್ತಿರುವ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌, ಗಾಲಿ ಕುರ್ಚಿಯಲ್ಲೇ ಸದನಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮಧ್ಯೆ ಅಖೀಲೇಶ್‌ ಯಾದವ್‌, ಕಾರ್ತಿ ಚಿದಂಬರಂ, ಕಿರಣ್‌ ಖೇರ್‌, ಸುಖ್ಬೀೕರ್‌ ಸಿಂಗ್‌ ಬಾದಲ್, ಮುಂತಾದವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next