ಸಿಂದಗಿ: ಮರ್ಯಾದಾ ಪುರುಷ ಶ್ರೀರಾಮಚಂದ್ರ ಭಾರತದ ಆತ್ಮ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರದ ಮಹಾಮಂತ್ರಿ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಉಸ್ತುವಾರಿ ಗೋಪಾಲಜಿ ಹೇಳಿದರು.
ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹನುಮಾನ ದೇವರ ಮೂರ್ತಿ ಅನಾವರಣ ಹಾಗೂ ರಾಮನವಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಸಂವಿಧಾನದ ಮೊದಲ ಪುಟದಲ್ಲಿ ರಾಮನ ಹೆಸರಿದೆ. ಭಾರತಕ್ಕೆ ಬಂದ ಮೊಘಲರು ಸಂಪತ್ತಿನ ಜತೆಗೆ ನಮ್ಮ ಸಂಸ್ಕೃತಿಯನ್ನೂ ದೋಚಿಕೊಂಡು ಹೋದರು. ಹೆಣ್ಣಿಗೆ ಅವಮಾನವಾದರೆ ಶ್ರೀರಾಮ ಸುಮ್ಮನೆ ಕೂಡುವುದಿಲ್ಲ ಎಂಬುದು ಪುರಾಣಗಳಿಂದ ತಿಳಿಯುತ್ತದೆ. ಇಂತಹ ರಾಮನ ಆದರ್ಶ ಕಂಡಿರುವ ಭಾರತ ಅಯೋಧ್ಯೆಯಲ್ಲಿ 2024ರಲ್ಲಿ ಶ್ರೀರಾಮನ ಭವ್ಯ ಮಂದಿರ ತಲೆ ಎತ್ತಲಿದೆ. ಕೋಟಿ ಕೋಟಿ ರಾಷ್ಟ್ರಭಕ್ತರ ಕನಸು ನನಸಾಗಲಿದೆ ಎಂದರು.
ನಾವು ಚೀನಾ ವಸ್ತುಗಳನ್ನು ಬಳಸಬಾರದು. ಸ್ವಾವಲಂಬಿ ಭಾರತದ ಹಿರಿಮೆ ಉಳಿಸಿಕೊಂಡು ಹೋಗಬೇಕು. ಲವ್ ಜಿಹಾದ್‌ಗೆ ಉತ್ತರ ಕೊಡುವ ಶಕ್ತಿ ನಮಗಿದೆ. ಗೋಹತ್ಯೆ ತಡೆಯಬೇಕು. ನಮ್ಮ ದೇಶದ ಮಹಿಳೆಯರನ್ನು ಗೌರವದಿಂದ ಕಾಣುವಂತಾಗಬೇಕು. ನಾವು ಜಗತ್ತಿಗೆ ವೇದ, ಯೋಗದ ಜತೆಗೆ ಜ್ಞಾನ ಕೊಟ್ಟಿದ್ದೇವೆ. ವಿಶ್ವ ಭಾರತದತ್ತ ಗೌರವದ ದೃಷ್ಟಿ ಬೀರುವ ಕಾಲ ಬೇಗ ಬರಲಿ ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಚಂದ್ರಶೇಖರ ಶಿವಾಚಾರ್ಯರು, ಬೋರಗಿ-ಪುರದಾಳದ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಯಂಕಂಚಿಯ ಅಭಿನವರುದ್ರಮುನಿ ಶಿವಾಚಾರ್ಯರು, ಶಾಸಕ ರಮೇಶ ಭೂಸನೂರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಹೂಗಾರ, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ, ಜಿಲ್ಲಾ ಭಜರಂಗದಳ ಸಂಯೋಜಕ ಈರಣ್ಣ ಹಳ್ಳಿ, ತಾಲೂಕಾಧ್ಯಕ್ಷ ಡಾ| ಶರಣಗೌಡ ಬಿರಾದಾರ, ತಾಲೂಕು ಕಾರ್ಯದರ್ಶಿ ಶೇಖರಗೌಡ ಹರನಾಳ, ತಾಲೂಕು ಭಜರಂಗದಳ ಸಂಯೋಜಕ ಯಮನಪ್ಪ ಚೌಧರಿ, ಗ್ರಾಮ ಘಟಕ ಅಧ್ಯಕ್ಷ ಅರ್ಜುನ ಕಂಟಿಗೊಂಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಸಿಂದಗಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಸವರಾಜ ಹೂಗಾರ, ಸುದರ್ಶನ ಜಂಗಣ್ಣಿ, ಸಿದ್ದು ಪೂಜಾರಿ, ಸೋಮನಗೌಡ ಪಾಟೀಲ, ಶಿವಕುಮಾರ ಕಕ್ಕಳಮೇಲಿ, ಗುರಣ್ಣ ಕಂಟಿಗೊಂಡ, ಶಿವಾನಂದ ಬಿರಾದಾರ, ಅಶೋಕ ಚೌಧರಿ, ಪ್ರಶಾಂತ ಹಾಳಿಕೇರಿ, ಪರಮಾನಂದ ಬಿರಾದಾರ, ಸಂತೋಷ ಕಂಟಿಗೊಂಡ, ಶ್ರೀಶೈಲ ಬಿರಾದಾರ ವೇದಿಕೆಯಲ್ಲಿದ್ದರು. ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಇದ್ದರು.