Advertisement

ಒಂದು ಪರಿಪೂರ್ಣ ಪ್ರದರ್ಶನ ಶ್ರೀರಾಮದರ್ಶನ

06:25 PM May 23, 2019 | mahesh |

ಜಾಂಬವತಿ ಕಲ್ಯಾಣ ಪ್ರಸಂಗವನ್ನು ಶ್ರೀರಾಮದರ್ಶನ ಹೆಸರಲ್ಲಿ ಪ್ರಸ್ತುತ ಪಡಿಸಲಾಗಿತ್ತು. ತೆಂಕುತಿಟ್ಟು ಯಕ್ಷಗಾನದ ಸಹಜ ಸೌಂದರ್ಯ ಮತ್ತು ಸಾಂಪ್ರದಾಯಿಕ ಕ್ರಮಗಳ ಪಾಲನೆಯೊಂದಿಗೆ ರಂಗಭೂಮಿಯ ಕಾಳಜಿಯಿಂದಾಗಿ ಅಪಹಾಸ್ಯಗಳು, ಉತ್ಪ್ರೇಕ್ಷೆಗಳು, ಅತಿರಂಜಿತ ವಿಷಯಗಳು, ಚಪ್ಪಾಳೆಗಾಗಿ ವಿಕೃತಿಗಳು, ಗಿಮಿಕ್‌ಗಳು ಇರಲಿಲ್ಲ.

Advertisement

ಪ್ರೇಕ್ಷಕರೆಲ್ಲರು ಮೆಚ್ಚಿ ತಲೆ ದೂಗುವಂತೆ ಮಾಡಿದ ಪ್ರೌಢ ಯಕ್ಷಗಾನ ಪ್ರದರ್ಶನವೊಂದು ಇತ್ತೀಚೆಗೆ ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಮಹೋತ್ಸವದಂಗವಾಗಿ ಬಾಯಾರಿನ ಪಂಚಶ್ರೀ ಮಹಿಳಾ ಮತ್ತು ಮಕ್ಕಳ ಮೇಳದ ವತಿಯಿಂದ ನಡೆದ ಶ್ರೀರಾಮದರ್ಶನ.

ಜಾಂಬವತಿ ಕಲ್ಯಾಣ ಪ್ರಸಂಗವನ್ನು ಶ್ರೀರಾಮದರ್ಶನ ಎಂಬ ಹೆಸರಲ್ಲಿ ಪ್ರಸ್ತುತಿ ಪಡಿಸಲಾಗಿತ್ತು. ಈ ಪ್ರದರ್ಶನದ ವಿಶೇಷತೆ ಎಂದರೆ ತೆಂಕುತಿಟ್ಟು ಯಕ್ಷಗಾನದ ಎಲ್ಲಾ ಸಹಜ ಸೌಂದರ್ಯ ಮತ್ತು ಸಾಂಪ್ರದಾಯಿಕ ಕ್ರಮಗಳ ಪಾಲನೆ ಒಂದೆಡೆಯಾದರೆ ಮತ್ತೂಂದೆಡೆ ರಂಗಭೂಮಿಯ ಬಗ್ಗೆ ಗಂಭೀರವಾದ ಕಾಳಜಿಯಿಂದಾಗಿ ಅಪಹಾಸ್ಯಗಳು, ಉತ್ಪ್ರೇಕ್ಷೆಗಳು, ಅತಿರಂಜಿತ ವಿಷಯಗಳು, ಚಪ್ಪಾಳೆಗಾಗಿ ವಿಕೃತಿಗಳು, ಗಿಮಿಕ್‌ಗಳು ಇರಲಿಲ್ಲ. ಸಾಮಾನ್ಯವಾಗಿ ಮಕ್ಕಳ, ಮಹಿಳೆಯರ ಯಕ್ಷಗಾನ ಎಂದರೆ ಕುಣಿತಕ್ಕಷ್ಟೇ ವಿಶೇಷ ಪ್ರಾಮುಖ್ಯವಿತ್ತು, ವಾಚಿಕಾಭಿನಯ, ನಟನಾ ವಿಭಾಗಗಳು ಸೊರಗುವುದು ರೂಢಿ. ಆದರೆ ಈ ಪ್ರದರ್ಶನದಲ್ಲಿ ಈ ರೀತಿಯ ನ್ಯೂನತೆಗಳನ್ನೆಲ್ಲಾ ಮೀರಿ ಪಕ್ವ ಪ್ರದರ್ಶನ ನೀಡುವಲ್ಲಿ ತಂಡ ಸಫ‌ಲವಾಗಿದೆ. ಯಕ್ಷಗಾನ ಪ್ರದರ್ಶನ ಗದ್ದಲಗಳಾಗುತ್ತಿದೆಯೆಂಬ ಆರೋಪಗಳ ನಡುವೆ ಇದೊಂದು ಸಂಯಮದ ಕಲಾಭಿವ್ಯಕ್ತಿಯಾಗಿದೆ.

ಯಕ್ಷಗಾನದ ಪಾರಂಪರಿಕ ಹಿನ್ನೆಲೆಯುಳ್ಳ ಪೆರುವೋಡಿ ಮನೆತನದ ರಾಮಕೃಷ್ಣ ಭಟ್ಟರ ಸಂಚಾಲಕತ್ವದಲ್ಲಿ, ಭಾಗವತ ಜಿ.ಕೆ. ನಾವಡರ ಮಾರ್ಗದರ್ಶನ ಮತ್ತು ಸವ್ಯಸಾಚಿ ಕಲಾವಿದ ರಮೇಶ ಶೆಟ್ಟಿ ಬಾಯಾರು ಅವರ ನಿರ್ದೇಶನತ್ವದಲ್ಲಿ ಪ್ರಸ್ತುತಿಗೊಂಡ ಪ್ರದರ್ಶನದಲ್ಲಿ ಜಾಂಬವನಾಗಿ ಧೀರಜ್‌ ಕೊಟ್ಟಾರಿ, ಕೃಷ್ಣನಾಗಿ ಕು| ಅನಘರತ್ನ ಪೆರುವೋಡಿ ಮನ ಸೆಳೆದರು. ಜಾಂಬವನ ಪ್ರಸ್ತುತಿಯ ಠೀವಿ, ಗಂಭೀರ ನಡೆಗಳಿಗೆ ಪ್ರೇಕ್ಷಕರು ಖುಷಿಪಟ್ಟರೆ, ಕೃಷ್ಣ ಪಾತ್ರಧಾರಿಯ ಲೀಲಾಜಾಲ ನಡೆ, ಲಾಲಿತ್ಯಪೂರ್ಣ ನಾಟ್ಯಾಭಿನಯ ಮತ್ತು ವಾಕ್ಚತುರತೆಗೆ ಸಂಭ್ರಮಿಸಿದರು. ಉಳಿದಂತೆ ಸತ್ರಾಜಿತ(ಶ್ರೀರಾಮ ಕುರಿಯ), ಸಿಂಹ(ಸಾತ್ವಿಕ್‌ ನೆಲ್ಲಿತೀರ್ಥ), ಪ್ರಸೇನ ( ಅಕ್ಷಯ ಕುರುಡಪದವು), ಬಲ ರಾಮ(ರಾಮಚಂದ್ರ) ಮೊದಲಾದವರು ಪರಿಣಾಮಕಾರಿ ಪ್ರಸ್ತುತಿಗಳನ್ನಿತ್ತರು. ಭಾಗವತರಾಗಿ ಪುರುಷೋತ್ತಮ ಭಟ್‌ ನಿಡುವಜೆ, ಜಿ.ಕೆ.ನಾವಡ ಬಾಯಾರು, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ, ಮದ್ದಳೆಯಲ್ಲಿ ಯೋಗೀಶ್‌ ಆಚಾರ್ಯ ಕೊಂದಲಕಾಡು ಸಹಕರಿಸಿದರು. ಆರಂಭಕ್ಕೆ ಪದ್ಮನಾಭ ಉಪಾಧ್ಯಾಯರು ನುಡಿಸಿದ ಚೆಂಡೆಯ ಪೀಠಿಕೆ ಇತ್ತೀಚಿಗೆ ಯಕ್ಷಗಾನದಲ್ಲಿ ಅಲಭ್ಯವಾಗುತ್ತಿರುವ ತೆಂಕಣದ ಸಾಂಪ್ರದಾಯಿಕ ಪೀಠಿಕೆ ವಾದನವನ್ನು ಮತ್ತೂಮ್ಮೆ ಉಣಬಡಿಸಿತು. ಜಾಂಬವನಿಗೆ ಶ್ರೀಕೃಷ್ಣ ರಾಮಾವತಾರದ ದರ್ಶನ ನೀಡುವ ಸಂದರ್ಭದಲ್ಲಿ ಭಾಗವತ ಜಿ.ಕೆ.ನಾವಡರು ಹಾಡಿದ ದೀನದಯಾಳ್ಳೋ ರಾಮಾ… ಸ್ತುತಿಗೆ ಪ್ರೇಕ್ಷಕರು ಖುಷಿಪಟ್ಟರು.

ಎಮ್ಮೆನ್ಸಿ, ಕುಂಬಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next