Advertisement

ಬಡ ಮಕ್ಕಳ ಶಿಕ್ಷಣಕ್ಕೆ ಶ್ರೀರಾಮ ಫೌಂಡೇಷನ್‌ ನೆರವು

06:07 AM Jan 05, 2019 | Team Udayavani |

ಹುಣಸೂರು: ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮ್‌ ಫೌಂಡೇಷನ್‌ನಿಂದ ಕಳೆದ 5 ವರ್ಷಗಳಲ್ಲಿ 20 ಸಾವಿರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿದೆ ಎಂದು ಶ್ರೀರಾಮ್‌ ಟ್ರಾನ್ಸ್‌ಪೊರ್ಟ್‌ ಫೈನಾನ್ಸ್‌ ಕಂಪನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್‌ ಬಿ.ಹೊಳ್ಳ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಲ್ಲದೇ ಶೈಕ್ಷಣಿಕ ಅರ್ಹತೆ ಆಧಾರದ ಮೇಲೆ ಉದ್ಯೋಗವನ್ನೂ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಲಕ್ಷ ಕೋಟಿ ರೂ. ವಹಿವಾಟು: 1974ರಲ್ಲಿ ತಮಿಳುನಾಡಿನಲ್ಲಿ ಪ್ರಥಮ ಶಾಖೆ ಆರಂಭಿಸಿದ ಶ್ರೀರಾಮ ಫೈನಾನ್ಸ್‌ ಕಂಪನಿಯು ಪ್ರಸ್ತುತ ದೇಶಾದ್ಯಂತ 500ಕ್ಕೂ ಹೆಚ್ಚು ಹಾಗೂ ಕರ್ನಾಟಕದಲ್ಲಿ 150 ಶಾಖೆ ಇದ್ದು, 20 ಲಕ್ಷ ನೌಕರರನ್ನು ಹೊಂದಿರುವ ಬೃಹತ್‌ ಸಂಸ್ಥೆಯಾಗಿ ಬೆಳೆದಿದೆ.

ವಾರ್ಷಿಕ ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಉದ್ದೇಶದಿಂದ ಫೌಂಡೇಷನ್‌ ಸ್ಥಾಪಿಸಲಾಗಿದ್ದು, ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಸಂಸ್ಥೆಯು ಪದ್ಮಭೂಷಣ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಿದರು.

ಕಂಪನಿಯ ರಾಜ್ಯ ಮುಖ್ಯಸ್ಥ ನಂದಗೋಪಾಲ್‌ ಮಾತನಾಡಿ, ಹುಣಸೂರು ಉಪವಿಭಾಗದ 4 ತಾಲೂಕಿನಲ್ಲಿ 300 ಮಂದಿಗೆ 12 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಗಿದೆ. 8ನೇ ತರಗತಿ ಮೇಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುವುದು.

Advertisement

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬದವರ ಡ್ರೈವಿಂಗ್‌ ಲೈಸನ್ಸ್‌ ಪ್ರಮುಖ ಮಾನದಂಡವಾಗಿದೆ ಎಂದು ಹೇಳಿದರು. ಡಿವೈಎಸ್ಪಿ ಭಾಸ್ಕರ ರೈ ಮಾತನಾಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಫೌಂಡೇಷನ್‌ ಕಾರ್ಯ ಶ್ಲಾಘನೀಯ ಎಂದರು.

ಸರ್ಕಾರಿಗೆ ಶಾಲೆಗೆ ನೆರವಾಗಿ: ವೃತ್ತ ನಿರೀಕ್ಷಕ ಕೆ.ಸಿ.ಪೂವಯ್ಯ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿ ವೇತನ ವಿತರಣೆ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಕೊರತೆ ಇರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಫೌಂಡೇಷನ್‌ ಮುಂದಾಗಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಲಾರಿ ಮಾಲಿಕರ ಸಂಘದ ತಾಲೂಕು ಅಧ್ಯಕ್ಷ ನೀಲಕಂಠರಾವ್‌, ಸಂಸ್ಥೆಯ ಆರ್‌.ಬಿ.ಎಚ್‌. ಪುಟ್ಟರಾಜು, ವೆಂಕಟೇಶ್‌, ನಾರಾಯಣ್‌, ಮುಕ್ಕಣ್ಣೇಶ್ವರ, ಹರೀಶ್‌, ರಂಜಿತ್‌, ಪ್ರಸನ್ನ, ಶೇಖರ್‌, ನಾಗರಾಜ್‌, ಶೇಖರ್‌, ಸಾಯಿನಾಥ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next