ಜೇವರ್ಗಿ: ಸುಮಾರು ಎರಡು ದಶಕಗಳಿಂದ ಸಾಹಿತ್ಯಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ನಾಡು-ನುಡಿ, ಶೈಕ್ಷಣಿಕವಾಗಿ ನಿರಂತರವಾಗಿ ಹಮ್ಮಿಕೊಂಡಿದ್ದ ಸಾವಿರಾರು ಕಾರ್ಯಕ್ರಮಗಳೇ ನ. 21ರಂದು ನಡೆಯಲಿರುವ ಕಸಾಪ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಅಂಗವಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುವುದು ಎನ್ನುವ ನಿರೀಕ್ಷೆಯಿಂದ ಸಾಹಿತಿಗಳು ಹಾಗೂ ಪರಿಷತ್ ಸದಸ್ಯರು ನನ್ನನ್ನು ಚುನಾವಣೆ ಕಣಕ್ಕೆ ಇಳಿಯುವಂತೆ ಪ್ರೇರೇಪಿಸಿ ಬೆಂಬಲವಾಗಿ ನಿಂತಿದ್ದಾರೆ ಎಂದರು.
ಜಿಲ್ಲೆಯ ಸಾಹಿತ್ಯ ಪರಿಷತ್ ಸದಸ್ಯರು ನನ್ನ ಈವರೆಗಿನ ಕಾರ್ಯ ಚಟುವಟಿಕೆಗಳನ್ನು ಗಮನಿಸಿ ನನ್ನ ಬೆಂಬಲಕ್ಕೆ ನಿಂತಿರುವುದು ನನ್ನಲ್ಲಿನ ಉತ್ಸಾಹ ಇಮ್ಮಡಿ ಮಾಡಿದಂತೆ ಆಗುತ್ತದೆ. ಸಾಂಸ್ಕೃತಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನಾನು ಈಗಾಗಲೇ ಸಾಹಿತ್ಯ ಕ್ಷೇತ್ರಕ್ಕೆ 12 ಕೃತಿಗಳನ್ನು ಸಮರ್ಪಿಸಿದ್ದು, ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನುಡಿ ಸೇವೆ ಸಲ್ಲಿಸಲು ಒಂದು ಬಾರಿ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡರು.
ಜಿಪಂ ಮಾಜಿ ಸದಸ್ಯರಾದ ಬಸವರಾಜ ಪಾಟೀಲ ನರಿಬೋಳ, ಅಶೋಕ ಸಾಹು ಗೋಗಿ, ರಾಜಶೇಖರ ಸೀರಿ, ಸಂಗನಗೌಡ ಪಾಟೀಲ ಗುಳ್ಯಾಳ, ಬಾಪುಗೌಡ ಪಾಟೀಲ ಬಿರಾಳ, ಸುರೇಶ ಬಡಿಗೇರ, ಶಿವಕುಮಾರ ಬಿದರಿ, ಸಿದ್ಧು ಸಾಹು ಅಂಗಡಿ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಭಗವಂತ್ರಾಯ ಶಿವಣ್ಣೋರ್, ರವಿ ಕೋಳಕೂರ, ವಿಜಯಕುಮಾರ ಪಾಟೀಲ ಸೇಡಂ, ಬಸವರಾಜ ಸಾಸಾಬಾಳ, ಪ್ರಕಾಶ್ಚಂದ್ರ ಕೂಡಿ, ತಿಪ್ಪಣ್ಣ ಹಡಪದ ನರಿಬೋಳ, ಈರಣ್ಣಗೌಡ ಅವರಾದ, ಸಂಗಣ್ಣ ಹಳ್ಳಿ, ಶ್ರೀಶೈಲಗೌಡ ಕರಕಿಹಳ್ಳಿ, ಕರಣಪ್ಪಗೌಡ ಹಳ್ಳಿ, ಅಕ್ಬರ್‌ಸಾಬ ಮುಲ್ಲಾ ಅಂಕಲಗಿ ಇದ್ದರು.