ಹೊನ್ನಾವರ: ಬೇಸಿಗೆಯಲ್ಲಿ ನೀರಿರದ ತುಂಡು ಜಮೀನು, ಉಳಿಯಲ್ಲೊಂದು ಸಾಮಾನ್ಯ ಸೂರು, ಇಬ್ಬರು ಮಕ್ಕಳ ವಿದ್ಯಾಭ್ಯಾಸ ಇವುಗಳನ್ನು ತೂಗಿಸಿಕೊಂಡು ಹೋಗಲು ಹಲವು ಕೆಲಸ ಮಾಡುತ್ತಿದ್ದ ಹಡಿನಬಾಳ ಶ್ರೀಪಾದ ಹೆಗಡೆ ಅಪಘಾತಕ್ಕೀಡಾಗಿ ವರ್ಷವಾಗುತ್ತ ಬಂತು.
ಜೀವನ ನಿರ್ವಹಣೆಗೆ ತೋಟದ ಆದಾಯ ಸಾಲದೆಂದು ಹೊಲಿಗೆ ಕಲಿತು ಹಡಿನಬಾಳಲ್ಲಿ ಅಂಗಡಿ ಇಟ್ಟರು. ಅದೂ ಸಾಲದಾದಾಗ ಸತ್ಯ ಹೆಗಡೆಯವರ ಕರೆಯಂತೆ ಗುಂಡಬಾಳ ಮೇಳ ಸೇರಿ ಯಕ್ಷಗಾನ ಕಲಿತರು. ಅಲ್ಲಿ ಆರ್ಥಿಕ ಲಾಭ ಏನೂ ಇರಲಿಲ್ಲ. ಮಳೆಗಾಲದಲ್ಲಿ ಕೆಲಸ ಇರಲಿಲ್ಲ. ಗಣಪತಿ ಮೂರ್ತಿ ಮಾಡತೊಡಗಿದರು. ಚೌತಿ ಖರ್ಚಿಗೆ ಸಾಕಾಯಿತು. ಕೆರೆಮನೆ ಮೇಳದ ಕಲಾವಿದರಾಗಿ ಸಂಚಾರಕ್ಕೆ ಹೊರಟರು. ಹನುಮಂತ, ಕೌರವ, ಜಮದಗ್ನಿ ಸಹಿತ ಯಾವುದೇ ಪ್ರತಿನಾಯಕ ಅಥವಾ ಉಪನಾಯಕನ ಪಾತ್ರ ನಿರ್ವಹಿಸುತ್ತ ಬಂದರು.
ಪ್ರಾಮಾಣಿಕ ಬದುಕಿಗೆ ಸಿಗುವುದು ಇಷ್ಟೇ ಎಂದು ನಂಬಿಕೊಂಡು ತೃಪ್ತರಾಗಿ ಮಕ್ಕಳ ವಿದ್ಯಾಭ್ಯಾಸಕ್ಕೂ ನೆರವಾದರು. ವಿಧಿ ಲಿಖೀತ ಬೇರೆಯೇ ಇತ್ತು. ಆಟಕ್ಕೆ ಹೊರಟಾಗ ಅಪಘಾತಕ್ಕೆ ಸಿಕ್ಕು ತಲೆಗೆ ಪೆಟ್ಟಾಯಿತು. ಏನೂ ಇಲ್ಲ ಎಂದುಕೊಂಡು ಮನೆಗೆ ಹೋದರು. ರಾತ್ರಿ ಪರಿಸ್ಥಿತಿ ಗಂಭೀರವಾದಾಗ ಉಡುಪಿಯಲ್ಲಿ ಎರಡು ಬಾರಿ ತಲೆಯ ಶಸ್ತ್ರಚಿಕಿತ್ಸೆ ಮಾಡಿಸಬೇಕಾಯಿತು. ಪೂರ್ತಿ ಸರಿಯಾಗಲಿಲ್ಲ. ತೋಟದ ಉತ್ಪನ್ನ ಸಾಲುವುದಿಲ್ಲ, ಆಟ ಕುಣಿಯಲು, ಗಣಪತಿ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿಯೇ ಮಲಗಿದ್ದಾರೆ. ಅಲ್ಲೆ ಅಡ್ಡಾಡುತ್ತಾರೆ. ತೀರ ಸಜ್ಜನರಾದ ಇವರ ಕಷ್ಟಕ್ಕೆ ಜನ ಮರುಗಿದರು.
ನೀಲಕೋಡ ಶಂಕರ ಹೆಗಡೆ, ಆನಂದ ಹಾಸ್ಯಗಾರ ಮತ್ತು ಇನ್ನೂ ಕೆಲವರು ದೊಡ್ಡ ಸಹಾಯ ಮಾಡಿದರು. ಆಸ್ಪತ್ರೆ ಖರ್ಚು ಏಳೆಂಟು ಲಕ್ಷ ರೂ.ಗಳಷ್ಟಾಯಿತು. ಇನ್ನೂ ಮುಗಿದಿಲ್ಲ. ಮೊದಲಿನ ಸ್ಥಿತಿಗೆ ಬರುವ ಸಾಧ್ಯತೆ ತೀರ ಕಡಿಮೆ. ಇಡೀ ಕುಟುಂಬ ಸಂಕಷ್ಟದಲ್ಲಿದೆ. ಪ್ರತಿವರ್ಷ ಯಕ್ಷಗಾನ ಕಲಾವಿದರು ಮಾತ್ರವಲ್ಲ ತುಂಬ ಜನ ಬಡ, ಮಧ್ಯಮ ವರ್ಗದವರು ಅಪಘಾತಕ್ಕೀಡಾಗುತ್ತಾರೆ. ಕನಿಷ್ಠ ದಿನಕ್ಕೆ 80 ಪೈಸೆ ಉಳಿಸಿ ಅಪಘಾತ ವಿಮೆ ಮಾಡಿಸಿದರೆ 15ಲಕ್ಷ ರೂ. ಪರಿಹಾರ ದೊರಕುತ್ತಿತ್ತು. ಈಗ ಮಕ್ಕಳ ವಿದ್ಯಾಭ್ಯಾಸ ಮುಗಿದು ಉದ್ಯೋಗಿಗಳಾಗುವ ವರೆಗೆ ಶ್ರೀಪಾದ ಹೆಗಡೆ ಸಂಸಾರ ಮತ್ತು ಆಸ್ಪತ್ರೆ ವೆಚ್ಚವನ್ನು ಕಲಾಭಿಮಾನಿಗಳು, ದಾನಿಗಳು ನೋಡಿಕೊಳ್ಳಬೇಕಾಗಿದೆ. ಇಂತಹ ಪರಿಸ್ಥಿತಿ ಬರದಂತೆ ಹಲವಾರು ವಿಮಾ ಕಂಪನಿಗಳಿವೆ, ಜನ ವಿಮೆ ಮಾಡಿಸಬೇಕು ಎಂದು ಉದಾಹರಣೆಗಳೊಂದಿಗೆ ಹೇಳ್ಳೋಣ ಅನ್ನಿಸಲು ಒಂದೆರಡು ಘಟನೆಗಳು ಕಾರಣ.
-ಜೀಯು ಹೊನ್ನಾವರ