ಶ್ರೀನಿವಾಸಪುರ: ನಿತ್ಯ 30ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತುಹಾಕಿ ತಿಂಗಳು ಕಳೆದರೂ ಇನ್ನೂ ಡಾಂಬರೀಕರಣ ಮಾಡಿಲ್ಲ. ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ.
ಜಲ್ಲಿ ಕಲ್ಲು ಮೇಲೆದ್ದು ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಂಟಕ ತರುತ್ತಿವೆ. ಪೆಗಳಪಲ್ಲಿ ಹಾಗೂ ಸೋಮ ಯಾಜಲಹಳ್ಳಿ ಮಧ್ಯದ 2ಕಿ.ಮೀ. ಅಂತರದ ರಸ್ತೆ ಸ್ಥಿತಿ ಹೇಳತೀರದಾಗಿದೆ.
ಗ್ರಾಮಗಳು: ತಾಲೂಕಿನ ಪುಂಗನೂರು ರಸ್ತೆಯ ಪೆಗಳಪಲ್ಲಿಯಿಂದ ಸೋಮಯಾಜಲಹಳ್ಳಿಯ ವರಿಗೆ ಡಾಂಬರ್ ಹಾಕಲು ರಸ್ತೆ ಅಗೆದು ಎರಡು ತಿಂಗಳು ಮೇಲಾಗಿದೆ. ಈವರೆಗೂ ರಸ್ತೆಗೆ ಮುಕ್ತಿ ಸಿಕ್ಕಿಲ್ಲ. ಈ ರಸ್ತೆಯಲ್ಲಿ ಸೋಮ ಯಾಜಲಹಳ್ಳಿ, ಓಜಲಹಳ್ಳಿ, ಪೆಗಳಪಲ್ಲಿ, ಕೂಳಗುರ್ಕಿ, ಅಡವಿ ಚಂಬಕೂರು, ಪುರ್ನಪಲ್ಲಿ, ಬ್ರಾಹ್ಮಣಪಲ್ಲಿ, ದಿಗುವಪಲ್ಲಿ, ನೆರ್ನಹಳ್ಳಿ, ನಾರಾಯಣಪುರ, ಚೆನಯ್ಯ ಗಾರಿಪಲ್ಲಿ, ಗುಟ್ಟಪಲ್ಲಿ ಸೇರಿ 30ಕ್ಕೂ ಹೆಚ್ಚು ಹಳ್ಳಿಗಳ ಜನರು ಓಡಾಡುತ್ತಾರೆ. ಅದೇ ರೀತಿ ದ್ವಿಚಕ್ರ ವಾಹನ, ಬಸ್, ಕಾರು, ಟ್ರ್ಯಾಕ್ಟರ್‌ಗಳು, ಟೆಂಪೋಗಳು ಸಂಚರಿಸುತ್ತವೆ.
ಕಲ್ಲು ಮೇಲೆದ್ದಿವೆ: ಈ ರಸ್ತೆ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಾರಿಗೆ ವಾಹನಗಳು, ಲೋಡು ತುಂಬಿದ ಲಾರಿಗಳು ಓಡಾಡುತ್ತವೆ. ರಸ್ತೆಯಲ್ಲಿ ಜಲ್ಲಿ ಕಲ್ಲುಗಳು ಮೇಲೆದ್ದು ಚೂರಿಯಂತೆ ಕಾಣುತ್ತವೆ. ದ್ವಿಚಕ್ರ ವಾಹನಗಳಂತೂ ಭಯದ ನೆರಳಲ್ಲಿ ಓಡಾಡ ಬೇಕಾಗಿದೆ. ರಾತ್ರಿ ಸಮಯದಲ್ಲಿ ಸಂಚಾರ ಮಾಡು ವುದು ಇನ್ನೂ ಕಷ್ಟವಾಗುತ್ತದೆ.
ರಸ್ತೆಯಲ್ಲಿ ಜಲ್ಲಿಕಲ್ಲುಗಳು ಮೇಲೆದ್ದಿವೆ. ಬಸ್ ಸಂಚರಿ ಸುವಾಗ ರಸ್ತೆಯಲ್ಲಿ ದೂಳು ಏಳುತ್ತದೆ. ಈ ವೇಳೆ ಮುಂದಿನ ವಾಹನ ಕಾಣದೇ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಪಿಡಬ್ಲ್ಯೂಡಿ ಅಧಿಕಾರಿಗಳು ಡಾಂಬರುಹಾಕಿ ಸಮಸ್ಯೆ ಈಡೇರಿಸಬೇಕಿದೆ.
●
ರಾಮು,
ಶ್ರೀನಿವಾಸ್,ದ್ವಿಚಕ್ರ ವಾಹನ ಸವಾರ.
2.50 ಕೋಟಿ ರೂ.ಗೆ ಟೆಂಡರ್ ಆಗಿದೆ. ಗುತ್ತಿಗೆ ದಾರರು ಹಣ ಕೊಟ್ಟು ಅಗ್ರಿ ಮೆಂಟ್ ಮಾಡಬೇಕಾಗಿತ್ತು. ಅವರು ರಜಾದಲ್ಲಿ ಹೊರಗಿನ ಊರಲ್ಲಿದ್ದ ಕಾರಣ ತಡೆ ಆಗಿದೆ. ಯಾವ ಕಾಮಗಾರಿಗೆ ಕಾರ್ಯಾದೇಶ ಆಗಿಲ್ಲವೋ ಅಂತಹವುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ಸರ್ಕಾರ ಸೂಚಿಸಿದೆ. ಆದ್ದರಿಂದ ವಿಳಂಬ ಆಗಿದೆ. ಅದೇ ರೀತಿ 2.75 ಕೋಟಿ ರೂ. ವೆಚ್ಚದ ದಿಂಬಾಲ ಕ್ರಾಸ್‌ನಿಂದ ಎಸ್‌ಪಿ ರಸ್ತೆ ವರೆಗಿನ ಕಾಮಗಾರಿಗೂ ತಡೆಯಾಗಿದೆ.
●
ಎಲ್.ಕೆ.ಶ್ರೀನಿವಾಸಮೂರ್ತಿ,
ಪಿಡಬ್ಲ್ಯೂಡಿ ಎಂಜಿನಿಯರ್
●
ಕೆ.ವಿ.ನಾಗರಾಜ್