Advertisement

ಕಾಡಿನ ಮಕ್ಕಳ ಶಿಕ್ಷಣ ಡೋಲಾಯಮಾನ

03:07 PM Feb 06, 2020 | Naveen |

ಶ್ರೀನಿವಾಸಪುರ: ತಾಲೂಕಿನ ಕೊಳ್ಳೂರು ಸಮೀಪದ ಕಾಡಿನಲ್ಲಿ ನೀಲಗಿರಿ ಮರ ಕಡಿಯಲು ವಲಸೆ ಬಂದಿದ್ದ ಕೂಲಿ ಕಾರ್ಮಿಕರ ಮಕ್ಕಳಲ್ಲಿ ಕೆಲವರು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಶಿರಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿರುವ ಮಾಹಿತಿ ಲಭ್ಯವಾಗಿದೆ. ಆದರೆ, ಉಳಿದವರು ಶಾಲೆಗೆ ಹೋಗದೆ ಪೋಷಕರ ಜೊತೆ ಕಾಲ ಕಳೆಯುತ್ತಿದ್ದು, ಅವರ ಮುಂದಿನ ಶಿಕ್ಷಣದ ಭವಿಷ್ಯ ಡೋಲಾ ಯಮಾನವಾಗಿದೆ.

Advertisement

ಬುಧವಾರ 19 ಮಕ್ಕಳು ಶಾಲೆಗೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ಕಾಲ ಕಳೆದಿದ್ದಾರೆ. ಪ್ರತಿದಿನ ಕಾಡಿನಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಏರಿಕೆಯಾಗುವುದನ್ನು ಆಶ್ಚರ್ಯದಿಂದ ಗಮನಿಸಿದ ಸಿಆರ್‌ಪಿ ಹರೀಶ್‌, ಬುಧವಾರ ಕಾಡಿನಿಂದ ಬರುವ ಮಕ್ಕಳ ಹಾದಿಯಲ್ಲಿ ಕಾದು ನಿಂತು ಶಾಲೆಗೆ ಎಷ್ಟು ಮಂದಿ ಬರಲಿದ್ದಾರೆ ಎಂದು ವೀಕ್ಷಣೆ ಮಾಡಿದ್ದಾರೆ.

ಈ ವೇಳೆ ಮಕ್ಕಳ ಪೋಷಕರು ಇನ್ನೊಂದು ವಾರದಲ್ಲಿ ಬೇರೆ ಕಡೆ ಹೋಗುವ ವಿಷಯ ಗೊತ್ತಾಗಿದೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯಿಂದ ಬಂದಿರುವ ಈ ಕೂಲಿ ಕಾರ್ಮಿಕರ ವಿಳಾಸ, ಕೆಲವು ಮಕ್ಕಳು ಸಾಗರ ತಾಲೂಕು ಶಿರಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿರುವ ಮಾಹಿತಿ ತಿಳಿದು ಬಂದಿದೆ.

25ಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ದೂರ: ಶಿರಿಗೆರೆಯಲ್ಲಿ 4ನೇತರಗತಿ ಓದುತ್ತಿದ್ದ ಮಂಜುಳಾ, ಗಂಗಾಧರ, ಚೈತ್ರಾ, ಮೀನಾಕ್ಷಿ ಎಂಬ ಮಕ್ಕಳು ಸಂಕ್ರಾಂತಿ ಹಬ್ಬಕ್ಕೆಂದು ಇಲ್ಲಿಗೆ ಬಂದವರು ಮರಳಿ ಶಾಲೆಗೆ ಹೋಗದೇ ಕಾಡಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇವರೊಂದಿಗೆ ಇದೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳವಿ, ಪಡಗೂರು ಗ್ರಾಮಗಳ 25ಕ್ಕೂ ಹೆಚ್ಚು ಮಕ್ಕಳು ಕಳೆದ ಎರಡು ತಿಂಗಳಿನಿಂದ ಕಾಡಿನಲ್ಲಿಯೇ ಇದ್ದಾರೆ. ಇವರೆಲ್ಲರೂ ಶಾಲೆಯ ಮುಖವನ್ನೇ ನೋಡಿಲ್ಲ ಎಂಬುದು ಶಿರಿಗೆರೆ ಶಾಲೆಯ ಶಿಕ್ಷಕರಿಂದ ಮಾಹಿತಿ ತಿಳಿದು ಬಂದಿದೆ.

ಸಿಆರ್‌ಪಿಗೆ ಮಾಹಿತಿ: ಬುಧವಾರ ಶಿರಿಗೆರೆ ಶಾಲೆಯ ಶಿಕ್ಷಕಿಯೊಬ್ಬರು 4ನೇ ತರಗತಿಯ ಮಂಜುಳಾ ಅವರ ಪೋಷಕರಿಗೆ ಫೋನ್‌ ಕರೆ ಮಾಡಿ, ನಿಮ್ಮ ಮಗುವನ್ನು ಶಾಲೆಗೆ ಏಕೆ ಕಳಿಸುತ್ತಿಲ್ಲ? ಎಲ್ಲಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಪೋಷಕರು ನಮ್ಮ ಮಗು ಇಲ್ಲಿರುವ ಸರ್ಕಾರಿ ಶಾಲೆಗೆ ಹೋಗುತ್ತಿದೆ ಎಂದು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಶಿಕ್ಷಕಿಯ ಮೊಬೈಲ್‌ ನಂಬರ್‌ಅನ್ನು ಅಲ್ಲೇ ಇದ್ದ ಸಿಆರ್‌ಪಿ ಹರೀಶ್‌ಗೆ ವಿದ್ಯಾರ್ಥಿನಿ ತಂದು ಕೊಟ್ಟಿದ್ದು, ತಾನು ಈ ಶಾಲೆಗೆ ಬರುತ್ತಿರುವುದಾಗಿ ಅವರಿಗೆ ಹೇಳಿ ಸಾರ್‌ ಎಂದಿದ್ದಾಳೆ. ಅದೇ ರೀತಿ ಕೊಟ್ಟ ಮೊಬೈಲ್‌ ಸಂಖ್ಯೆಗೆ ಹರೀಶ್‌ ಫೋನಾಯಿಸಿದಾಗ ಮೇಲ್ಕಂಡಂತೆ ಮಾಹಿತಿ ಲಭ್ಯವಾಗಿದೆ.

Advertisement

ಪ್ರತಿ ದಿನವೂ ಫೋನ್‌ ಮಾಡುತ್ತಿದ್ದೆವು: ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಶಿವಮೊಗ್ಗ ಜಿಲ್ಲೆಯ ಶಿರಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಉದಯವಾಣಿ ಫೋನಾಯಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿಕ್ಷಕರು, ಜಾತ್ರೆಗೆ ಹೋಗಿ ಬರುವುದಾಗಿ ತಿಳಿಸಿ, ನಮ್ಮ ಶಾಲೆಯಲ್ಲಿ ಓದುತ್ತಿದ್ದ ಮಂಜುಳಾ, ಗಂಗಾಧರ, ಮೀನಾಕ್ಷಿ, ಚೈತ್ರ ಹೋಗಿದ್ದಾರೆ. ಆದರೆ, ಮತ್ತೆ ಶಾಲೆಯ ಕಡೆ ಬರಲಿಲ್ಲ.

ನಾವು ಅವರ ಮನೆಗಳ ಬಳಿ ಹೋದಾಗ ಇಲ್ಲದಿರುವುದು ಕಂಡು ಅವರ ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳಿಸಬೇಕೆಂದು ಪ್ರತಿದಿನ ಫೋನ್‌ ಕರೆ ಮಾಡುತ್ತಿದ್ದೇವೆ. ಅವರು ಇಂದು ನಾಳೆ ಬರುತ್ತೇವೆಂದು ಸಬೂಬು ಹೇಳುತ್ತಿದ್ದಾರೆ.

ಬುಧವಾರ ಕರೆ ಮಾಡಿದಾಗ ಮಂಜುಳಾ ಪೋಷಕರಾದ ತಾಯಮ್ಮ, ನಮ್ಮ ಮಗು ಇಲ್ಲಿನ ಶಾಲೆಗೆ ಹೋಗುತ್ತಿದೆ ಎಂದು ಹೇಳಿದ್ದಾರೆ. ಅದೇ ರೀತಿ ಅಲ್ಲಿನ ಸ್ಥಳೀಯ ಸಿಆರ್‌ಪಿ ಹರೀಶ್‌, ನಮಗೆ ಫೋನಾಯಿಸಿ ಮಕ್ಕಳ ಸ್ಥಿತಿಯ ಬಗ್ಗೆ ಹೇಳಿದ್ದಾರೆ ಎಂದು ವಿವರಿಸಿದರು.

ಅಷ್ಟೇ ಅಲ್ಲದೆ, ಮಕ್ಕಳ ಪೋಷಕರನ್ನು ಕೂಲಿಗೆ ಕರೆದುಕೊಂಡು ಬಂದಿರುವ ಮೇಸ್ತ್ರೀ ಅವರಿಗೂ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವಂತೆ ಹೇಳಿದ್ದೇವೆ ಎಂದು ಶಿರಗೆರೆಯ ಶಾಲಾ ಶಿಕ್ಷಕಿ ಸುಮತಿ ಹಾಗೂ ಶಾಲೆಗೆ 3 ತಿಂಗಳ ಹಿಂದೆ ಮುಖ್ಯ ಶಿಕ್ಷಕರಾಗಿ ಕಾರ್ಯಭಾರ ವಹಿಸಿಕೊಂಡಿರುವ ಉಪೇಂದ್ರ ಉದಯವಾಣಿಗೆ ಮಕ್ಕಳ ಬಗ್ಗೆ ಮಾಹಿತಿ ನೀಡಿದರು.

ಈ ಬಗ್ಗೆ ಶ್ರೀನಿವಾಸಪುರದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆಯಲು ಮೊಬೈಲ್‌ಗೆ ಉದಯವಾಣಿ ಸಂಪರ್ಕಿಸಿದಾಗ ಅವರು ಕರೆ ಸ್ವೀಕಾರ ಮಾಡಿಲ್ಲ. ಈ ಮಕ್ಕಳಿಗೆ ಶಾಶ್ವತ ಶಿಕ್ಷಣದ ನೆಲೆ ಕಾಣಿಸಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖೆ ಗಮನ ಹರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next