ಮೂಡುಬಿದಿರೆ: ಕಂಬಳ ಕ್ಷೇತ್ರದ `ಉಸೇನ್ ಬೋಲ್ಟ್’ ಖ್ಯಾತಿಯ, `ಕರ್ನಾಟಕ ಕ್ರೀಡಾರತ್ನ’ ಪ್ರಶಸ್ತಿ ಪುರಸ್ಕೃತ, ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರನ್ನು ಯುವಕನೋರ್ವ ದೂರವಾಣಿ ಕರೆಯ ಮುಖಾಂತರ ನಿಂದಿಸಿರುವ ಪ್ರಕರಣ ಮೂಡುಬಿದಿರೆ ಪೊಲೀಸ್ ಠಾಣೆಯ ಮೆಟ್ಟಲೇರಿದೆ.
ಗುರುವಾರ ಪ್ರಶಾಂತ್ ಎಂಬ ವ್ಯಕ್ತಿ ದೂರವಾಣಿಯಲ್ಲಿ ಕಂಬಳದ ಕುರಿತು ಮಾತನಾಡಿ, ತನ್ನನ್ನು, ತನ್ನ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಶ್ರೀನಿವಾಸ ಗೌಡ ಅವರು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.
ಸಾಧಕ ಓಟಗಾರನನ್ನು ಅವಹೇಳನ ಮಾಡಿರುವುದನ್ನು ಜನಪ್ರತಿನಿಧಿಗಳು, ಕಂಬಳ ಕ್ಷೇತ್ರದ ಪ್ರಮುಖರು, ಕಂಬಳಾಭಿಮಾನಿಗಳು ಖಂಡಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ಖಂಡನೆ, ಕಾನೂನು ಕ್ರಮಕ್ಕೆ ಸೂಚನೆ: ಕಂಬಳ ರಂಗದಲ್ಲಿ ಸಾಧಕನಾಗಿ ಮಿಂಚುತ್ತ ಊರಿಗೆ, ದೇಶಕ್ಕೆ ಕೀರ್ತಿ ತಂದಿರುವ ಶ್ರೀನಿವಾಸ ಗೌಡರನ್ನು, ಅವರ ಕುಟುಂಬದವರನ್ನು ನಿಂದಿಸಿರುವುದು ಅವರಿಗೆ ಮಾಡಿರುವ ಅವಮಾನ ಮಾತ್ರವಲ್ಲ, ಇಡೀ ಕಂಬಳ ರಂಗಕ್ಕೆ, ಈ ನಾಡಿಗೆ ಮಾಡಿರುವ ಮಾಡಿರುವ ಅಪಮಾನ; ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕನಾಗಿ, ಮೂಡುಬಿದಿರೆಯ ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷನಾಗಿ ಸದಾ ಶ್ರೀನಿವಾಸ ಗೌಡರ ಜತೆ ನಾನಿದ್ದೇನೆ. ಅವರನ್ನು ನಿಂದಿಸಿರುವ ಯುವಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.
ಅಭಯಚಂದ್ರ ಖಂಡನೆ: ಕರ್ನಾಟಕ ಸರಕಾರದಿಂದ ಕ್ರೀಡಾರತ್ನ ಪ್ರಶಸ್ತಿಯನ್ನು ಪಡೆದಿರುವ ಕಂಬಳದ ಶ್ರೇಷ್ಟ ಓಟಗಾರ, ಕುಡುಬಿ ಸಮಾಜದ ಮುಗ್ಧ ಯುವಕ ಶ್ರೀನಿವಾಸ ಗೌಡರಿಗೆ ಕಿಡಿಗೇಡಿಗಳು ಜೀವ ಬೆದರಿಕೆಯನ್ನು ಹಾಕಿರುವುದಕ್ಕೆ ಖಂಡಿಸುತ್ತೇನೆ. ಜಾನಪದ ಕ್ರೀಡೆ ಉಳಿಯಬೇಕು, ಅದಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ನಿಟ್ಟಿನಲ್ಲಿ ತಾನು ಕ್ರೀಡಾ ಸಚಿವನಾಗಿದ್ದಾಗ ಕಂಬಳ ಕ್ಷೇತ್ರದ ಓಟಗಾರರಿಗೆ ಮತ್ತು ಕಂಬಳದ ಸಂಯೋಜಕರಿಗೆ ಕ್ರೀಡಾರತ್ನ ಪ್ರಶಸ್ತಿಯನ್ನು ಘೋಷಿಸುವಂತಹ ಕೆಲಸ ಮಾಡಿದ್ದೆ. ಕಂಬಳದ ಓರ್ವ ಸಾಧಕ ಓಟಗಾರನಿಗೆ ಅವಮಾನ ಮಾಡಿರುವಾತನನ್ನು ಉನ್ನತ ಪೊಲೀಸ್ ಅ ಕಾರಿಗಳು ಜೈಲಿಗಟ್ಟಬೇಕು’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಹೇಳಿದ್ದಾರೆ.
ನಾಳೆ (ಜು.17) ಶ್ರೀನಿವಾಸ ಗೌಡ ಅಭಿಮಾನಿಗಳ ಸಭೆ :
ಪ್ರಕರಣದ ಕುರಿತು, ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶನಿವಾರ ಅಪರಾಹ್ನ 3 ಗಂಟೆಗೆ ಶ್ರೀನಿವಾಸ ಗೌಡರ ಅಭಿಮಾನಿಗಳು ತುರ್ತು ಸಭೆ ಕರೆಯಲಾಗಿದೆ.