ಬೀದರ್: ವಿಶ್ವ ಜಲ ದಿನಾಚರಣೆ ಪ್ರಯುಕ್ತ ಜಲ ಸಂರಕ್ಷಣೆಯ ಮಹತ್ವದ ಕಾರ್ಯದಲ್ಲಿ ಯಶಸ್ಸು ಸಾಧಿಸಿರುವ ದೇಶದ 5 ಗ್ರಾ.ಪಂ. ಅಧ್ಯಕ್ಷರ ಜತೆ ಮಾ. 22 ರಂದು ಪ್ರಧಾನಿ ಮೋದಿ ವೀಡಿಯೋ ಸಂವಾದ ನಡೆಸಲಿದ್ದಾರೆ. ಇದರಲ್ಲಿ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧೂಪ ತಮಹಾಗಾಂವ್ ಗ್ರಾ.ಪಂ. ಅಧ್ಯಕ್ಷ ಶ್ರೀನಿವಾಸ ಅವರು ಭಾಗವಹಿಸಲಿದ್ದಾರೆ.
ಈ ಐದು ಗ್ರಾ.ಪಂ. ಅಧ್ಯಕ್ಷರು ತಮ್ಮ ಪಂಚಾಯತ್‌ಗಳಲ್ಲಿ ಜಲಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಯಶೋಗಾಥೆಗಳನ್ನು ಕಿರುಚಿತ್ರದ ಮೂಲಕ ತಿಳಿಯಲಿದ್ದಾರೆ. ಅಂತರ್ಜಲ ಸಮಸ್ಯೆ ನೀಗಿಸಲು ಅಗತ್ಯ ಸಲಹೆ ಸ್ವೀಕರಿಸಲಿದ್ದಾರೆ. ಕರ್ನಾಟಕ, ಗುಜರಾತ್, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳ 5 ಗ್ರಾ.ಪಂ. ಅಧ್ಯಕ್ಷರ ಜತೆ ಮಾ. 22ರಂದು ವರ್ಚುವಲ್ ಸಂವಾದ ನಡೆಯಲಿದೆ.
ಧೂಪತಮಹಾಗಾಂವ್ ಜಲಕ್ರಾಂತಿ :
ಧೂಪತಮಹಾಗಾಂವ್‌ನಲ್ಲಿ ಹೂಳು ತುಂಬಿದ್ದ ಸುಮಾರು 1.5 ಎಕರೆ ವಿಸ್ತಾರದ ಗೊಗ್ಗವ್ವೆ ಕೆರೆಯನ್ನು ಲಾಕ್‌ಡೌನ್ ಅವಧಿಯಲ್ಲಿ ನರೇಗಾದಡಿ 10 ಲಕ್ಷ ರೂ. ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿದೆ. ಹಾಳು ಕೊಂಪೆಯಾಗಿದ್ದ ಗ್ರಾ.ಪಂ. ವ್ಯಾಪ್ತಿಯ ಪುರಾತನ ಬಾವಿಗಳನ್ನು ಪುನಶ್ಚೇತನಗೊಳಿಸಲಾಗಿದೆ.
ಪ್ರಧಾನಿ ಜತೆಗೆ ಸಂವಾದ ನಡೆಸುವ ದೇಶದ ಐದು ಗ್ರಾ.ಪಂ. ಅಧ್ಯಕ್ಷರಲ್ಲಿ ನಾನೂ ಒಬ್ಬನಾಗಿರುವುದು ಹೆಮ್ಮೆ, ಖುಷಿ ತಂದಿದೆ. ಈ ಅವಕಾಶದಿಂದ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ಸಿಕ್ಕಂತಾಗಲಿದೆ.
– ಶ್ರೀನಿವಾಸ ಜೊನ್ನೆಕೇರಿ, ಧೂಪತಮಹಾಗಾಂವ್ ಗ್ರಾ.ಪಂ. ಅಧ್ಯಕ್ಷ
-ಶಶಿಕಾಂತ ಬಂಬುಳಗೆ