ಮೈಸೂರು: ಪರಮೇಶ್ವರ್ ಅವರು ಹಣ ಕೊಟ್ಟು ಶಾಸಕ, ಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪರಮೇಶ್ವರ್ ಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. ಅವರೇನು ಕಾಂಗ್ರೆಸ್ ಪಕ್ಷ ಕಟ್ಟಿಲ್ಲ, ಯಾರು ಅಂತಾನೇ ಜನಕ್ಕೆ ಗೊತ್ತಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಅವರು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಅಧಿಕಾರದ ಅಮಲಿನಲ್ಲಿ ಮಾತನಾಡುತ್ತಿದ್ದಾರೆ. ದುಡ್ಡು ಹಂಚಲು ಮನೆ, ಮನೆಗೆ ಕಾಂಗ್ರೆಸ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಣ ಹಂಚುವುದು ಸಿಎಂ ಸಿದ್ದರಾಮಯ್ಯಗೆ ಕರಗತ. ಸಂಸದ ಧ್ರುವನಾರಾಯಣ ಹಣ ಹಂಚುವುದರಲ್ಲಿ ನಿಪುಣ ಎಂದು ಆರೋಪಿಸಿದರು.
ಸಿಎಂ ಶಕ್ತಿಶಾಲಿ ಆಗಿದ್ದರೆ ಉಪಚುನಾವಣೆ ವೇಳೆ ಸಿದ್ದರಾಮಯ್ಯ ಜೆಡಿಎಸ್ ಬಳಿ ಹೋಗಿದ್ಯಾಕೆ ಎಂದು ವ್ಯಂಗ್ಯವಾಡಿದರು. ಪ್ರಧಾನಿ ಮೋದಿ ಅವರಿಗೆ ತನ್ನನ್ನು ಕಂಡರೆ ಭಯ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದನ್ನ ಹೇಳೋದಕ್ಕೆ ನನಗೆ ಪದಗಳೇ ಸಿಗುತ್ತಿಲ್ಲ. ಮೋದಿ ಹಂಬಲ್ ಆಗಿ ನಾನು ಟೀ ಮಾರುತ್ತಿದ್ದೆ ಎಂದು ಹೇಳುತ್ತಾರೆ. ಆದರೆ ನೀವು ಏನ್ ಅಂತ ಹೇಳ್ತೀರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.
ಎಚ್ .ಆಂಜನೇಯ ಅಂದರೆ ಹುಚ್ಚು ಆಂಜನೇಯ ಎಂದು ಅರ್ಥ. ಮಂತ್ರಿಸ್ಥಾನ ಕೊಟ್ಟಿರೋದಕ್ಕೆ ಆಂಜನೇಯ ಧನ್ಯನಾಗಿದ್ದಾನೆ. ಆಂಜನೇಯ ಸಮಾಜ ಸೇವೆ ಮಾಡುತ್ತಾನೋ, ಸಿದ್ದರಾಮಯ್ಯನವರ ಸೇವೆ ಮಾಡುತ್ತಾನೋ ಗೊತ್ತಿಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಟೀಕಿಸಿದರು.
ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಮಗನಿಗಾಗಿ ನೈನಿಕತೆಯನ್ನು ಕಳೆದುಕೊಂಡಿದ್ದಾರೆ. ಖರ್ಗೆ ಅವಕಾಶವಾದಿ, ಪಲಾಯನವಾದಿ ಎಂದು ದೂರಿದರು.