Advertisement

ಶ್ರೀನಿವಾಸ್‌ ಪ್ರಸಾದ್‌, ಧ್ರುವನಾರಾಯಣ ಸಾಧನೆ ಬಗ್ಗೆ ಚರ್ಚೆಗೆ ಬನ್ನಿ

07:36 AM Mar 22, 2019 | Team Udayavani |

ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷ ಸಂಸದರಾಗಿರುವ ಶ್ರೀನಿವಾಸ್‌ ಪ್ರಸಾದ್‌ ಹಾಗೂ 10 ವರ್ಷ ಸಂಸದರಾಗಿರುವ ಧ್ರುವನಾರಾಯಣ ಸಾಧನೆ  ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಶಾಸಕ ಹರ್ಷವರ್ಧನ ಸವಾಲು ಹಾಕಿದರು. ನಗರದ ಯಾತ್ರಿ ಭವನದಲ್ಲಿ ಗುರುವಾರ ನಡೆದ ಬಿಜೆಪಿ ಕಾರ್ಯಕರ್ತರ ಲೋಕಸಭಾ ಚುನಾವಣಾ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಪ್ರಸಾದ್‌ ಭಯ: ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸಪ್ರಸಾದ್‌ ಕಣಕ್ಕಿಳಿಯುವ ಬಗ್ಗೆ ಕಾರ್ಯಕರ್ತರಲ್ಲಿ ಉತ್ಸಾಹ ಹಾಗೂ ಗೊಂದಲವೂ ಇದೆ. ಶ್ರೀನಿವಾಸಪ್ರಸಾದ್‌ ಅಭ್ಯರ್ಥಿ ಆಗಿರುವುದರಿಂದ ಎದುರಾಳಿ ಅಭ್ಯರ್ಥಿಗೆ ಭಯ ಆವರಿಸಿದೆ ಎಂದರು.

ರಾಜಕೀಯ ಗುರು: ಧ್ರುವನಾರಾಯಣ ಅವರಿಗೆ ರಾಜಕೀಯ ಗುರುಗಳು ಯಾರೆಂಬುದು ಚಾಮರಾಜನಗರ ಜನತೆಗೆ ತಿಳಿದಿದೆ. ಆರಂಭಿಕ ದಿನಗಳಲ್ಲಿ ಬಿ.ಬಸವಲಿಂಗಪ್ಪ ನಂತರ ರಾಜಶೇಖರಮೂರ್ತಿ ಇದ್ದರು. ಬಳಿಕ ಧ್ರುವಗೆ ಸಹಾಯ ಮಾಡಿದ್ದು ಯಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.

ಕಾಂಗ್ರೆಸ್‌-ಜೆಡಿಎಸ್‌ ಮೇಲ್ನೋಟಕ್ಕೆ ಮೈತ್ರಿಯಾಗಿದ್ದರೂ ತಳಮಟ್ಟದಲ್ಲಿ ಹಳಸಿಕೊಂಡಿದೆ. 8 ಲೋಕಸಭಾ ಕ್ಷೇತ್ರಗಳನ್ನು ಧಾರೆ ಎರೆದಿರುವ ಕಾಂಗ್ರೆಸ್‌ 64 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಂತಾಗಿದೆ. ಚುನಾವಣೆಯಲ್ಲಿ ಧ್ರುವನಾರಾಯಣ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.

ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುವುದರಿಂದ ಅವರ ಕನಸು ನನಸಾಗುವುದಿಲ್ಲ ಎಂದು ತಿಳಿಸಿದರು. ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್‌ ತಪ್ಪಿಸಿದ್ದು  ನೀವಲ್ಲವೇ ಎಂದು ಧ್ರುವ‌ನಾರಾಯಣ ಅವರನ್ನು ಪ್ರಶ್ನಿಸಿದರು.

Advertisement

ಸಭೆಯಲ್ಲಿ ಮುಖಂಡ ಯು.ಎನ್‌. ಪದ್ಮನಾಭ್‌ ರಾವ್‌, ಜಿಪಂ ಸದಸ್ಯರಾದ ಮಂಗಳ ಸೋಮಶೇಖರ್‌, ಬಿ.ಎನ್‌.ಸದಾನಂದ, ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯ್ಕ, ರಾಜ್ಯ ಸಮಿತಿ ಸದಸ್ಯ ಕುಂಬ್ರಹಳ್ಳಿ ಸುಬ್ಬಣ್ಣ, ತಾಲೂಕು ಅಧ್ಯಕ್ಷ ಎಚ್‌.ಎಂ.ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ಮುಖಂಡರಾದ ಎನ್‌.ಆರ್‌.ಕೃಷ್ಣಪ್ಪಗೌಡ, ಸಿಂಧುವಳ್ಳಿ ಕೆಂಪಣ್ಣ, ಮಹೇಶ್‌, ಜಯಕುಮಾರ್‌, ತಾಪಂ ಅಧ್ಯಕ್ಷ ಶಿವಣ್ಣ, ಸದಸ್ಯ ಸಿದ್ದರಾಜೇಗೌಡ, ಅಣ್ಣಯ್ಯಶೆಟ್ಟಿ ಇತರರಿದ್ದರು.

ಯತೀಂದ್ರಗೆ ಹರ್ಷವರ್ಧನ್‌ ತಿರುಗೇಟು: ರಾಜ್ಯದಲ್ಲಿ ದ್ವೇಷದ ರಾಜಕಾರಣ ಬಿತ್ತಿರುವವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊರತು ಶ್ರೀನಿವಾಸಪ್ರಸಾದ್‌ ಅಲ್ಲ ಎಂದು ಶಾಸಕ ಬಿ.ಹರ್ಷವರ್ಧನ್‌ ತಿಳಿಸಿದರು. ಗುಂಡ್ಲಪೇಟೆ ಸಭೆಯಲ್ಲಿ ಯತೀಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿದ ಹರ್ಷವರ್ಧನ್‌, ಅಪ್ಪ ದ್ವೇಷದ ರಾಜಕಾರಣ ಮಾಡಿದ್ದು ರಾಜ್ಯದ ಮುಂದಿರುವಂತೆಯೇ ಅ ತಪ್ಪನ್ನು ಮುಚ್ಚಿಕೊಳ್ಳಲು ಅವರ ಪುತ್ರ ಯತೀಂದ್ರ ಪ್ರಯತ್ನಿಸುತ್ತಿದ್ದಾರೆ.

ಅವರು ತಮ್ಮ ತಂದೆಯ ಸ್ವಭಾವವನ್ನು ಶ್ರೀನಿವಾಸ ಪ್ರಸಾದ್‌ ಮೇಲೆ ಹೊರಿಸಿದ್ದಾರೆ.  ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಗೊಂದಲ ಸೃಷ್ಟಿಸಿರುವುದು  ನಿಮ್ಮ ತಂದೆಯೇ ಹೊರತು ಪ್ರಸಾದ್‌ ಅಲ್ಲ. ಪರಿಸ್ಥಿತಿ ಹೀಗಿರುವಾಗ ನೀವು  ಶ್ರೀನಿವಾಸಪ್ರಸಾದ್‌ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next