ಬೆಂಗಳೂರು: ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆಯಾದರೂ ಮುಖ್ಯಮಂತ್ರಿ ಸಹಿತ ಸಂಪುಟದ ಕೆಲವು ಸಚಿವರು ಆ ಸಂಸ್ಥೆಯ ಮಾಲೀಕರ ಜತೆ ಪ್ರತ್ಯಕ್ಷ ಅಥವಾ ಪರೋಕ್ಷ ನಂಟು ಹೊಂದಿರುವ ಆರೋಪ ಇದೆ. ಹೀಗಾಗಿ, ಇದನ್ನು ಸಿಬಿಐ ತನಿಖೆಗೆ ವಹಿಸುವುದೇ ಸೂಕ್ತ ಎಂದು ಹೇಳಿದರು.
ಐಎಂಎ ಸಂಸ್ಥೆ ಮಾಲೀಕ ಮನ್ಸೂರ್ ಖಾನ್ ಬಂಧನಕ್ಕೆ ಕುಮಾರಸ್ವಾಮಿಯವರಿಗೆ ದಾಕ್ಷಿಣ್ಯ ಅಡ್ಡಿಯಾಗಬಹುದು. ಹೀಗಾಗಿ, ಹೂಡಿಕೆದಾರರ ಹಿತಾಸಕ್ತಿ ಕಾಪಾಡಬೇಕಾದರೆ ತಕ್ಷಣ ಸಿಬಿಐಗೆ ವಹಿಸಬೇಕು. ರಾಜ್ಯ ಸರ್ಕಾರವು ಯಾವುದೇ ಮುಲಾಜು ಇಲ್ಲದೆ ಮನ್ಸೂರ್‌ನನ್ನು ಬಂಧಿಸಿ ಆತನ ಆಸ್ತಿ ಪಾಸ್ತಿ ಜಫ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯವರು ಟ್ವೀಟ್ ಮೂಲಕ ಕ್ರಮ ಕೈಗೊಳ್ಳುವುದಾಗಿ ಹೂಡಿಕೆದಾರರಿಗೆ ಸಾಂತ್ವನ ಹೇಳಿದರೆ ಪ್ರಯೋಜನವಾಗದು. 56 ಇಂಚು ಇದ್ದರೆ ಸಾಲದು ಮಾನವೀಯ ಅಂತ:ಕರಣ ಬೇಕು ಎಂದು ಹೇಳುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಈ ವಿಚಾರದಲ್ಲಿ ಮೌನ ವಹಿಸಿರುವುದು ಯಾಕೆ ಎಂದ ಪ್ರಶ್ನಿಸಿದರು.
ಕುಮಾರಸ್ವಾಮಿ, ಸಚಿವರಾದ ಜಮೀರ್ ಅಹಮದ್, ಮಾಜಿ ಸಚಿವ ರೋಷನ್‌ಬೇಗ್ ಅವರು ಮನ್ಸೂರ್ ಜತೆ ಊಟ ಮಾಡುವ ಫೋಟೋ ಹರಿದಾಡುತ್ತಿದೆ. ವ್ಯಾವಹಾರಿಕ ಸಂಬಂಧ ಇದ್ದ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿವೆ. ಇದನ್ನೆಲ್ಲಾ ನೋಡಿದರೆ ಸಮಗ್ರ ತನಿಖೆ ಅಗತ್ಯ. ಅಲ್ಪಸಂಖ್ಯಾತರ ಸಮುದಾಯವೇ ಹೆಚ್ಚು ಹೂಡಿಕೆ ಮಾಡಿದ್ದು ಅವರಿಗೆ ನ್ಯಾಯ ಕೊಡಿಸಲು ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಐಎಂಎ ಹಗರಣದಲ್ಲಿ ಸಿಲುಕಿಕೊಂಡವರ ಪರಿಸ್ಥಿತಿ ಹೀನಾಯವಾಗಿದೆ. ಸರ್ಕಾರ ಬಡ್ಡಿ ದಂಧೆ ನಿಲ್ಲಿಸದ ಹೊರತು ಇಂಥ ಹಗರಣಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಜನರ ಹಣ ಲೂಟಿ ಮಾಡುವವರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು. ಅದರಲ್ಲಿ ಸಚಿವರು, ಮುಖ್ಯಮಂತ್ರಿಗಳೇ ಪಾಲ್ಗೊಂಡಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು.
-ಎನ್.ಮಹೇಶ್, ಬಿಎಸ್ಪಿ ಶಾಸಕ