Advertisement

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಮಿತಿಯು ಎಡವಿದೆ… : ಸಂಸದ ಶ್ರೀನಿವಾಸಪ್ರಸಾದ್ 

07:13 PM Jun 07, 2022 | Team Udayavani |

ಚಾಮರಾಜನಗರ : ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಎಡವಿದ್ದಾರೆ, ಡಾ. ಅಂಬೇಡ್ಕರ್, ಬಸವಣ್ಣನವರ ವಿಚಾರಗಳಲ್ಲಿ ಲೋಪಗಳಾಗಿವೆ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ತಪ್ಪಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಪರ ವಿರೋಧ ವ್ಯಕ್ತವಾಗಿದೆ. ಸಮಿತಿಯು ಎಡವಿದೆ. ಈ ಸಂಬಂಧ ಪುನರ್ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. ಪರಿಷ್ಕೃತ ಪಠ್ಯಪುಸ್ತಕ ಇನ್ನೂ ಓದಿಲ್ಲ. ಲೋಪದೋಷಗಳಿರುವುದು ಗೊತ್ತಾಗಿದೆ. ಪಠ್ಯಪುಸ್ತಕದಲ್ಲಿ ವಾಸ್ತವವನ್ನು ತಿಳಿಸಿ ಮಕ್ಕಳಿಗೆ ಅರ್ಥವಾಗುವ ರೀತಿ ಮಾಡಬೇಕು ಎಂದು ಹೇಳಿದರು.

ನಾನು ಮೊದಲ ಬಾರಿ ಲೋಕಸಭೆಗೆ ಗೆದ್ದಿದ್ದ ಸಂದರ್ಭದಲ್ಲೇ ಹೇಳಿದ್ದೆ. ಪಠ್ಯಪುಸ್ತಕಗಳಲ್ಲಿ ಮಕ್ಕಳ ಮನಸ್ಸಿಗೆ ನೋವಾಗುವಂತಹ ವಿಷಯಗಳಿರಬಾರದು. ಆಗ ಪಠ್ಯಪುಸ್ತಕವೊಂದರಲ್ಲಿ ಗಣೇಶನ ಹಬ್ಬ ಆಚರಣೆ ಕುರಿತ ಪಾಠವಿತ್ತು. ಗಣೇಶನ ಹಬ್ಬಕ್ಕೆ ಹೊಸಬಟ್ಟೆ ಹಾಕಿಕೊಂಡು ಸಂಭ್ರಮಿಸುತ್ತಾರೆ. ಮನೆಗಳಲ್ಲಿ ಕಾಯಿಕಡುಬು ಮಾಡುತ್ತಾರೆ ಎಂಬ ವಿವರಣೆಗಳಿದ್ದವು. ಈ ಪಾಠವನ್ನು ಓದಿದ ಬಡ ಮಕ್ಕಳಿಗೆ ಇದರಿಂದ ಬೇಸರವಾಗುತ್ತದೆ. ತಮಗೆ ಹಬ್ಬಕ್ಕೆ ಹೊಸಬಟ್ಟೆಯಿಲ್ಲ, ನಮ್ಮ ಮನೆಯಲ್ಲಿ ಕಾಯಿಕಡುಬು ಮಾಡುವುದಿಲ್ಲ ಎಂದು ನಿರಾಶೆ ಹೊಂದುತ್ತಾರೆ. ಹಾಗಾಗಿ ಇಂಥ ವಿಷಯಗಳು ಪಠ್ಯದಲ್ಲಿ ಬೇಡ ಎಂದು ಹೇಳಿದ್ದೆ ಎಂದರು.

ಇದನ್ನೂ ಓದಿ : ಇನ್ನೂ ಹತ್ತು ವರ್ಷ ಸಕ್ರೀಯ ರಾಜಕೀಯದಲ್ಲಿ ಇರುತ್ತೇನೆ: ಯಡಿಯೂರಪ್ಪ

ಧಾರ್ಮಿಕ-ಭಾವನಾತ್ಮಕ ವಿಷಯಗಳಿಂದ ಜನರನ್ನು ಕೆರಳಿಸುವುದು ತಪ್ಪು:
ಸರ್ಕಾರಗಳು ಅಭಿವೃದ್ಧಿ ಕಾರ್ಯದತ್ತ ಗಮನ ಕೇಂದ್ರೀಕರಿಸಬೇಕೇ ಹೊರತು, ಧಾರ್ಮಿಕ, ಭಾವನಾತ್ಮಕ ವಿಷಯಗಳನ್ನು ಎಳೆದುತಂದು ಜನರನ್ನು ಕೆರಳಿಸುವುದು ತಪ್ಪು. ಇದು ಅಫೀಮು ಇದ್ದಂತೆ. ಧರ್ಮವನ್ನು ಮನುಷ್ಯನ ಒಳಿತಿಗಾಗಿ ಬಳಸಬೇಕು ಎಂದು ಸಂಸದ ಶ್ರೀನಿವಾಸಪ್ರಸಾದ್ ಹೇಳಿದರು.

Advertisement

ಇಂದು ಧರ್ಮವನ್ನು ವೈಭವೀಕರಿಸಲಾಗುತ್ತಿದೆ. ಈ ಭಾವನಾತ್ಮಕ ವಿಷಯಗಳನ್ನೇ ಹಿಡಿದುಕೊಂಡು ಬಹಳ ಕಾಲದವರೆಗೆ ಆಡಳಿತ ನಡೆಸಲು ಸಾಧ್ಯವಿಲ್ಲ. ಇದು ಸೋಡಾಗ್ಯಾಸ್ ನಂತೆ. ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಮುಖ್ಯ. ಬೆಲೆಯೇರಿಕೆಯಿಂದ ತತ್ತರಿಸಿದ್ದರೂ ಜನರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡಬೇಕು ಎಂದು ಶ್ರೀನಿವಾಸಪ್ರಸಾದ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next