“ಬಿಟ್ ಹೋದ್ ಬಸ್ಸು, ಬಿಟ್ ಹೋದ್ ಹುಡುಗೀರ್ನ ಎಷ್ಟ್ ನೆನಪಿಸ್ಕೊಂಡ್ರೂ ವಾಪಸ್ ಬರಲ್ಲ…’ ಹೀಗೆ ಎರಡು ಸಲ ಈ ಡೈಲಾಗ್ ಬಂದು ಹೋಗುತ್ತೆ. ಪ್ರೀತಿಸಿದ ಹುಡುಗಿನ ಕಳಕೊಂಡ ಹುಡುಗ ಮೊದಲು ಹೇಳಿದರೆ, ಪ್ರೀತಿಸಿ ಕೈ ಕೊಟ್ಟ ಹುಡುಗನ ಕಳಕೊಂಡ ಹುಡುಗಿ ಆಮೇಲೆ ಹೇಳುತ್ತಾಳೆ. ಅವರಿಬ್ಬರ ಬಾಯಲ್ಲೂ ಒಂದೇ ಡೈಲಾಗ್ ಬರುವ ಹೊತ್ತಿಗೆ ಇಬ್ಬರ ಫ್ಲ್ಯಾಶ್‌ಬ್ಯಾಕ್‌ನಲ್ಲೂ, ಒಂದೊಂದು ಪ್ರೀತಿ ಚಿಗುರಿ ಹಾಗೇ ಕಮರಿ ಹೋಗಿರುತ್ತೆ. ಚಿಟಿಕೆಯಷ್ಟು ತಮಾಷೆ, ಬೊಗಸೆಯಷ್ಟು ಪ್ರೀತಿ, ನೆನಪಿಸಿಕೊಂಡಷ್ಟೂ ಮಧುರ ನೆನಪುಗಳು, ಇಡೀ ಲೈಫ್ಗಾಗುವಷ್ಟು ಬೇಸರ… ಇವಿಷ್ಟು ವಿಷಯಗಳೇ “ಶ್ರೀನಿವಾಸ ಕಲ್ಯಾಣ’ದ ಹೈಲೆಟ್.
ಹಾಗಂತ, ಸಿನಿಮಾ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ ಅಂದುಕೊಳ್ಳುವಂತಿಲ್ಲ. ಅಲ್ಲೂ ಬೇಜಾನ್ ಕಿರಿಕ್‌ಗಳಿವೆ. ಅವುಗಳ ನಡುವೆ ಆಗಾಗ ಕಚಗುಳಿ ಇಡುವಂತಹ “ಪೋಲಿ’ ಮಾತುಗಳು ಚಿತ್ರದ ಸಣ್ಣಪುಟ್ಟ ಕಿರಿಕ್ಕು, ತಪ್ಪುಗಳನ್ನೆಲ್ಲಾ ಪಕ್ಕಕ್ಕೆ ಸರಿಸುತ್ತವೆ ಅನ್ನೋದೇ ಸಮಾಧಾನ. ಇಲ್ಲಿ ನಿರ್ದೇಶಕರು ಫ್ಲ್ಯಾಶ್‌ಬ್ಯಾಕ್‌ನಲ್ಲೇ ಕಥೆಯನ್ನು ನಿರೂಪಿಸುತ್ತಾ ಹೋಗಿದ್ದಾರೆ. ಆದರೆ, ವೇಗವನ್ನು ಕಾಯ್ದುಕೊಂಡಿದ್ದರೆ, ಅವರ ಶ್ರಮಕ್ಕೊಂದು ಸಾರ್ಥಕತೆ ಸಿಗುತ್ತಿತ್ತು. ವಿನಾಕಾರಣ ಸಿನಿಮಾವನ್ನು ಎಳೆದಾಡಲಾಗಿದೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಲು ಅವಕಾಶವಿತ್ತು.
ಮೊದಲರ್ಧ ಫ್ಲ್ಯಾಶ್‌ಬ್ಯಾಕ್‌ನಲ್ಲೇ ಸಿನಿಮಾ ಹೋಗಿ ಬಂದು ಮಾಡುವುದರಿಂದ ನೋಡುಗರಿಗೆ ಹಾಗೊಮ್ಮೆ ಹಳೆಯ “ಡವ್’ಗಳ ನೆನಪಾಗೋದು ಗ್ಯಾರಂಟಿ. ಅಷ್ಟರಮಟ್ಟಿಗೆ “ಸ್ಕೂಲ್‌ಡೇಸ್’ ಲವ್ವನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಯಶಸ್ವಿಗೆ ಕಾರಣ, ಆ ವಯಸ್ಸಿನಲ್ಲಿ ಕಾಣಸಿಗುವ ತಮಾಷೆ, ತುಂಟತನ ಮತ್ತು ಪೋಲಿತನ. ಇದಿಷ್ಟೇ ಸಿನಿಮಾವನ್ನು ಹಿಡಿದಿಡಲು ಸಾಧ್ಯವಿಲ್ಲ ಎಂಬುದು ನಿರ್ದೇಶಕರಿಗೂ ಗೊತ್ತು. ಇವುಗಳೊಂದಿಗೆ ಅಲ್ಲಲ್ಲಿ ಪೋಲಿ ಮಾತುಗಳನ್ನು ಆಡಿಸಿ, ಒಂದಷ್ಟು ತಪ್ಪುಗಳನ್ನೆಲ್ಲಾ ಮರೆಸಲು ಪ್ರಯತ್ನಿಸಿದ್ದಾರೆ. ಆದರೆ, ಅದು ಇಲ್ಲಿ ಹೆಚ್ಚು ವಕೌìಟ್ ಆಗಿಲ್ಲ.
ಚಿತ್ರದ ಅಮೆಗತಿಯ ನಿರೂಪಣೆ ನೋಡುಗರಿಗೆ ಕೊಂಚ ಬೋರ್ ಎನಿಸಿ, ಇನ್ನೇನು ಸೀಟಿಗೆ ಒರಗಿಕೊಳ್ಳುತ್ತಾರೆ ಅಂದುಕೊಳ್ಳುವಷ್ಟರಲ್ಲಿ ಹಾಡುಗಳು ತೂರಿಬಂದು, ಕೊಂಚ ರಿಲ್ಯಾಕ್ಸ್ ಮೂಡ್‌ಗೆ ತರುವಲ್ಲಿ ಸಣ್ಣದ್ದೊಂದು ಪಾತ್ರವಹಿಸುತ್ತವೆ. ಯೂತ್ಸ್ಗೆ ಯಾವುದಿಷ್ಟ ಎನ್ನುವುದು ಶ್ರೀನಿಗೆ ಚೆನ್ನಾಗಿ ಗೊತ್ತಿರುವಂತಿದೆ. ಹಾಗಾಗಿಯೇ, ಹುಡುಗಿ ಬಾಯಲ್ಲೂ ಪೋಲಿ ಮಾತಗಳನ್ನೇ ಹೇಳಿಸಿದ್ದಾರೆ. ಅಷ್ಟೇ ಅಲ್ಲ, ಕಾಮಿಡಿಯನ್, ನಾಯಕನ ಬಾಯಲ್ಲೂ ಅಂಥದ್ದೇ ಡಬ್ಬಲ್ ಮೀನಿಂಗ್ ಮಾತುಗಳು ಹರಿದಾಡುತ್ತವೆ. ಇದು ಹೊರತುಪಡಿಸಿದರೆ, ಕಥೆ ಬಗ್ಗೆ ಹೇಳಿಕೊಳ್ಳುವಂಥದ್ದೇನೂ ಇಲ್ಲ.
ಪ್ಲ್ರಾಶ್‌ಬ್ಯಾಕ್‌ಗೆ ಹೋಗಿ ಬಂದೇ ಸಿನಿಮಾ ತೋರಿಸಲು ಹರಸಾಹಸ ಪಟ್ಟಿದ್ದಾರೆ ನಿರ್ದೇಶಕರು. 1995 ರಲ್ಲಿ ಒಂದು ಲವ್‌ಸ್ಟೋರಿ ಶುರುವಾದರೆ, 2008 ರಲ್ಲಿ ಇನ್ನೊಂದು ಲವ್‌ಸ್ಟೋರಿ ಶುರುವಾಗುತ್ತೆ. ಇವೆರೆಡೂ ಲವ್‌ಗಳು ಎಕ್ಕುಟ್ಟು ಹೋಗುತ್ತವೆ! 2016 ರಲ್ಲೊಂದು ಹೊಸ ಲವ್ ಹುಟ್ಟಿಕೊಳ್ಳುತ್ತೆ. ಆ ಎರಡು ಹಳೆಯ ಲವ್‌ಸ್ಟೋರಿಗಳ ನಡುವೆ ಏನೆಲ್ಲಾ ಆಗಿಹೋಗುತ್ತೆ, ಎಷ್ಟೆಲ್ಲಾ ಎಡವಟ್ಟುಗಳು ನಡೆದುಹೋಗುತ್ತವೆ ಎಂಬುದನ್ನು ತುಂಬಾ ಜಾಣ್ಮೆಯಿಂದ, ಪೋಲಿ ಮಾತುಗಳನ್ನೇ ಪೋಣಿಸಿಕೊಂಡು ಅಲ್ಲಲ್ಲಿ ಮನರಂಜನೆ ಕೊಡುವ ಮೂಲಕ ಪ್ರೇಕ್ಷಕರನ್ನು ಹಿಡಿದಿಡಲು ಪ್ರಯತ್ನಿಸುತ್ತಲೇ, ಸಾಕಷ್ಟು ತಾಳ್ಮೆ ಪರೀಕ್ಷಿಸುತ್ತ ಹೋಗುತ್ತಾರೆ.
ಆ ಎರಡು ಲವ್‌ಸ್ಟೋರಿಗಳೇನು, ಫ್ಲ್ಯಾಶ್‌ಬ್ಯಾಕ್ ಲವ್‌ಸ್ಟೋರಿಯಲ್ಲಿ ಏನೆಲ್ಲಾ ನಡೆದು ಹೋಗುತ್ತೆ. 2016 ರ ಲವ್‌ಸ್ಟೋರಿಯಲ್ಲಿ “ಶ್ರೀನಿವಾಸ ಕಲ್ಯಾಣ’ ನಡೆಯುತ್ತಾ? ಆ ಕುತೂಹಲವಿದ್ದರೆ, ಸಿನಿಮಾ ನೋಡಲ್ಲಡ್ಡಿಯಿಲ್ಲ. ಶ್ರೀನಿ ಇಲ್ಲಿ ಲವಲವಿಕೆಯಿಂದ ನಟಿಸಿದ್ದಾರೆ. ಡ್ಯಾನ್ಸ್‌ನಲ್ಲೂ ಹಿಂದೆ ಬಿದ್ದಿಲ್ಲ. ನಗಿಸೋಕೆ ಕಷ್ಟಪಟ್ಟಿದ್ದಾರೆ. ಇನ್ನಷ್ಟು ಬಾಡಿಲಾಂಗ್ವೇಜ್ ಬಗ್ಗೆ ಗಮನಹರಿಸುವ ಅಗತ್ಯವಿದೆ. ಅಚ್ಯುತರಾವ್ ಮಗನಿಗೆ ತಂದೆಯಾಗಿ, ಗೆಳೆಯನಾಗಿಯೂ ಇಷ್ಟವಾಗುತ್ತಾರೆ. ದತ್ತಣ್ಣ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಸುಜಯ್‌ಶಾಸಿŒ ಹಾಸ್ಯದಲ್ಲಿ ಆಗಾಗ “ಶರಣ್’ ಅವರನ್ನು ಕಾಣಬಹುದು.
ಕವಿತಾ ಇದ್ದಷ್ಟು ಸಮಯ ಹೆಚ್ಚೇನೂ ಗಮನಸೆಳೆಯೋದಿಲ್ಲ. ನಿಖೀಲಾ ರಾವ್, ನಟನೆ ಬಗ್ಗೆ ಹೇಳುವುದೇನೂ ಇಲ್ಲ. ಆದರೆ, ಅವರು ಬೀರ್ ಕುಡಿಯೋದು, ಎಗ್ಗಿಲ್ಲದೆ ಎರ್ರಾಬರ್ರಿ ಬೈಯೋದ್ದನ್ನ ಪ್ರಸ್ತಾಪಿಸಲೇಬೇಕು. ಅಷ್ಟರ ಮಟ್ಟಿಗೆ ಬೋಲ್ಡ್ ಆಗಿ ನಿರರ್ಗಳವಾಗಿ ಮಾತು ಹರಿಬಿಟ್ಟು ಕೊಂಚ ಗಮನಸೆಳೆಯುತ್ತಾರೆ. ಮಿಥುನ್ ಮುಕುಂದನ್ ಮತ್ತು ರಘುತಾಣೆ ಹಾಡುಗಳಿಗಿಂತ ಹಿನ್ನೆಲೆ ಸಂಗೀತವನ್ನು ಚೆನ್ನಾಗಿ ಕಟ್ಟಕೊಟ್ಟಿದ್ದಾರೆ. ಪ್ರಸನ್ನ ಮತ್ತು ಸುಕೃತ್ ಅವರ ಸಂಭಾಷಣೆಯಲ್ಲಿ “ಬೆಲೆ’ ಮಾತುಗಳಿವೆ. ಅಶ್ವಿನ್ ಕಡಂಬೂರ್ ಕ್ಯಾಮೆರಾ ಕೈಚಳಕದಲ್ಲಿ ಕೊಂಚಮಟ್ಟಿಗೆ “ಕಲ್ಯಾಣ’ದ ಸೊಬಗಿದೆ.
ಚಿತ್ರ: ಶ್ರೀನಿವಾಸ ಕಲ್ಯಾಣ
ನಿರ್ಮಾಣ: ಭರತ್‌ಜೈನ್
ನಿರ್ದೇಶನ: ಎಂ.ಜೆ.ಶ್ರೀನಿವಾಸ್
ತಾರಾಗಣ: ಶ್ರೀನಿ, ಕವಿತಾ, ನಿಖೀಲಾ ರಾವ್, ಅಚ್ಯುತ, ದತ್ತಣ್ಣ, ಸುಜಯ್ ಶಾಸಿŒ, ಅರುಣ ಬಾಲಾಜಿ, ಪಲ್ಲವಿ ಸೋಮಯ್ಯ ಇತರರು.
* ವಿಜಯ್ ಭರಮಸಾಗರ