ರಮೇಶ ಕರುವಾನೆ
ಶೃಂಗೇರಿ: ಕಾರ್ಮಿಕರ ಕೊರತೆ ಮತ್ತು ದುಬಾರಿ ಕೂಲಿಯಿಂದ ಸಾವಯವ ಗೊಬ್ಬರ ಬಳಕೆ ಕಡಿಮೆಯಾಗುತ್ತಿದ್ದು, ರಸಗೊಬ್ಬರ ಬಳಕೆಗೆ ರೈತರು ಹೊಂದಿಕೊಳ್ಳುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಉಂಟಾಗುತ್ತಿರುವ ಹಾನಿ ತಡೆಗಟ್ಟಲು ಸರಕಾರ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವಂತೆ, ಸಾವಯವ ಗೊಬ್ಬರ ಉತ್ಪಾದನೆ ಹಾಗೂ ಬಳಕೆ ಕಡಿಮೆಯಾಗುತ್ತಿದೆ. ತೋಟಗಾರಿಕಾ ಬೆಳೆ ಹಾಗೂ ಭತ್ತದ ಗದ್ದೆಗೆ ಸಮೃದ್ಧವಾಗಿ ಬಳಸುತ್ತಿದ್ದ ಹಟ್ಟಿ ಗೊಬ್ಬರ ಇದೀಗ ದುಬಾರಿ ಕೂಲಿ, ಅಡಕೆ ತೋಟಕ್ಕೆ ಬಂದಿರುವ ರೋಗ, ಹೈನುಗಾರಿಕೆಯಲ್ಲಿ ಹಿನ್ನಡೆಯಿಂದಾಗಿ ಹಟ್ಟಿ ಗೊಬ್ಬರ ಬಳಕೆ ಸಂಪೂರ್ಣ ಕಡಿಮೆಯಾಗಿದೆ.
ರೈತರ ಮನೆಯಲ್ಲಿ ಇರುತ್ತಿದ್ದ ಡಜನ್‌ಗಟ್ಟಲೇ ಜಾನುವಾರುಗಳು ಕಣ್ಮರೆಯಾಗಿದ್ದು, ರೈತರ ಕೊಟ್ಟಿಗೆಯಲ್ಲಿ ಒಂದೆರಡು ಹಸು ಅಥವಾ ಪ್ರತಿ ದಿನ ಪ್ಯಾಕೆಟ್ ಹಾಲು ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದೊರಕುವ ರಸಗೊಬ್ಬರ ಮತ್ತು ಸಿದ್ಧಪಡಿಸಿದ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ. ಅಡಕೆ ತೋಟಕ್ಕೆ ಹೆಚ್ಚಾಗಿ ಬಳಸುತ್ತಿದ್ದ ಹಟ್ಟಿ ಗೊಬ್ಬರ ಹೆಚ್ಚಿದ ರೋಗದಿಂದ ಬಹುತೇಕ ರೈತರು ಸಾವಯವ ಪದ್ಧತಿಯ ಬೇಸಾಯವನ್ನೇ ಬಿಟ್ಟಿದ್ದಾರೆ. ಸಗಣಿ ಗೊಬ್ಬರವನ್ನು ರೋಗಪೀಡಿತ ತೋಟಕ್ಕೆ ಬಳಸುವುದರಿಂದ ರೋಗ ಇನ್ನೂ ಬೇಗ ಹರಡುತ್ತದೆ ಎಂಬ ವಿಜ್ಞಾನಿಗಳ ಸಲಹೆಯಂತೆ ಸಗಣಿ ಗೊಬ್ಬರವನ್ನು ರೈತರು ದೂರ ಮಾಡಿದ್ದಾರೆ. ವರ್ಷಕ್ಕೆ ಎರಡು ಬಾರಿ ರಸಗೊಬ್ಬರ ಅಥವಾ ದ್ರವ ರೂಪದ ರಾಸಾಯನಿಕವನ್ನು ಬಳಸಲಾಗುತ್ತಿದೆ.
ರೈತರ ಮನೆಯಲ್ಲಿ ಇರುತ್ತಿದ್ದ ಜಾನುವಾರು ಕೊಟ್ಟಿಗೆಗೆ ಪ್ರತಿ ದಿನವೂ ಕಾಡಿನಿಂದ ಸೊಪ್ಪು ಹಾಗೂ ಬೇಸಿಗೆಯಲ್ಲಿ ದರಗು ಹಾಕಿ ಗೊಬ್ಬರ ಸಿದ್ಧ ಮಾಡಲಾಗುತ್ತಿತ್ತು. ಪ್ರತಿ ವರ್ಷ ಸಣ್ಣ ರೈತರಾದರೂ ಸಾಕಷ್ಟು ಹಟ್ಟಿ ಗೊಬ್ಬರ ಪ್ರತಿ ವರ್ಷ ತಯಾರಾಗುತ್ತಿತ್ತು. ಅಡಕೆ ತೋಟಕ್ಕೆ ಸಾಂಪ್ರದಾಯಿಕ ಬೇಸಾಯ ಕ್ರಮ ಅಳವಡಿಸಿಕೊಂಡಿದ್ದ ರೈತರು ಎರಡು ಹೆಡಿಗೆ ಹಟ್ಟಿ ಗೊಬ್ಬರವನ್ನು ಮರವೊಂದಕ್ಕೆ ನೀಡುತ್ತಿದ್ದರು.
ಭತ್ತದ ಗದ್ದೆಗೂ ಪ್ರತಿ ವರ್ಷ ಹಟ್ಟಿ ಗೊಬ್ಬರವನ್ನು ಸಮೃದ್ಧವಾಗಿ ನೀಡುತ್ತಿದ್ದವರು, ಇದೀಗ ರಾಸಾಯನಿಕಗೊಬ್ಬರ ಮಾತ್ರ ಹಾಕುತ್ತಿದ್ದಾರೆ. ಮನೆಯಲ್ಲಿ ಉತ್ಪಾದನೆಯಾಗುವ ಗೊಬ್ಬರ ಕಡಿಮೆಯಾಗಿದ್ದು, ಗೊಬ್ಬರ ಕೊಂಡು ಸಾಗಾಣಿಕಾ ವೆಚ್ಚ, ಕೂಲಿ ದರ ನೀಡಿ ಗದ್ದೆಗೆ ಗೊಬ್ಬರ ಹಾಕಿದರೆ ಅದು ತರಿಗೆ ಆರ್ಥಿಕವಾಗಿ ನಷ್ಟವಾಗುತ್ತದೆ. ಭತ್ತದ ಗದ್ದೆಗೆ ಸಾವಯವ ಗೊಬ್ಬರ ಹಾಕುವವರ ಸಂಖ್ಯೆ ಕುಸಿದಿದ್ದು, ಭತ್ತದ ಧಾರಣೆಯೂ ಹೆಚ್ಚಾಗದೇ ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ಗದ್ದೆಯಲ್ಲಿ ಉಳಿಯುತ್ತಿರುವ ಹಸಿ ಹುಲ್ಲು-ರೈತರ ಮನೆಗಳಲ್ಲಿ ಹೈನುಗಾರಿಕೆ ಕಡಿಮೆಯಾಗುತ್ತಿದ್ದಂತೆ ಗದ್ದೆ ಬದುವಿನಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಹಸಿ ಹುಲ್ಲು ಯಾರಿಗೂ ಬೇಡವಾಗಿದೆ. ಇದರಿಂದ ಗದ್ದೆ ಬದುವಿನಲ್ಲಿ ಹಸಿ ಹುಲ್ಲು ಬೆಳೆದು, ಭತ್ತದ ಗದ್ದೆಯಲ್ಲಿ ಇಲಿ ಕಾಟ ಹೆಚ್ಚಳವಾಗಲು ಪರೋಕ್ಷವಾಗಿ ಸಹಾಯಕವಾಗುತ್ತಿದೆ. ಉಪ ಆದಾಯಕ್ಕೆ ಕತ್ತರಿ: ಕೃಷಿ ಕೂಲಿ ಕಾರ್ಮಿಕರು ತಮ್ಮ ಮನೆಗಾಗಿ ಸಾಕುತ್ತಿದ್ದ ಹಸುಗಳಿಂದ ಹಟ್ಟಿ ಗೊಬ್ಬರವನ್ನು ತಯಾರಿಸಿ, ರೈತರಿಗೆ ಮಾರಾಟ ಮಾಡಿ ಒಂದಷ್ಟು ಉಪ ಆದಾಯ ಗಳಿಸುತ್ತಿದ್ದರು. ಕೆಲ ವರ್ಷದ ಹಿಂದೆ ತೀವ್ರ ಬೇಡಿಕೆ ಇದ್ದ ಗೊಬ್ಬರ ಈಗ ಕೇಳುವವರೇ ಇಲ್ಲದೇ ಗೊಬ್ಬರದ ಗುಂಡಿಯಲ್ಲಿ ಮಣ್ಣಾಗುತ್ತಿದೆ.