ಬೆಂಗಳೂರು: ಗುರು ಪೂರ್ಣಿಮೆ ನಿಮಿತ್ತ ಶುಕ್ರವಾರ ವಿವಿಧ ಮಠಾಧೀಶರು ಚಾತುರ್ಮಾಸ್ಯ ವ್ರತ ಆರಂಭಿಸಿದರು.
ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿಗಳು ಶುಕ್ರವಾರ ಗುರುಭವನದಲ್ಲಿ ವ್ಯಾಸಪೂಜೆ ನೆರವೇರಿಸಿ ವಿಧ್ಯುಕ್ತವಾಗಿ ವ್ರತಾಚರಣೆ ಪ್ರಾರಂಭಿಸಿದರು. ಉಭಯ ಶ್ರೀಗಳು ವ್ಯಾಸ ಪೂಜೆ ಅಕ್ಷತೆಯನ್ನು ಶನಿವಾರ ಭಕ್ತಾದಿಗಳಿಗೆ ನೀಡಲಿದ್ದಾರೆ. ಮೈಸೂರು ಮಹಾಸಂಸ್ಥಾನ, ಗ್ವಾಲಿಯರ್, ಸಂಡೂರು, ನೇಪಾಳ ಮುಂತಾದೆಡೆಯಿಂದ ಬಂದಿದ್ದ ಗುರು ಕಾಣಿಕೆಯನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. ಉಡುಪಿಯ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಮತ್ತು ಅದಮಾರು ಕಿರಿಯ ಶ್ರೀಗಳು ಶುಕ್ರವಾರ ಚಾತುರ್ಮಾಸ್ಯ ವ್ರತವನ್ನು ಕೈಗೊಂಡರು.
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು 28ನೇ ಚಾತುರ್ಮಾಸ್ಯ ವ್ರತಾಚರಣೆಗೆ ಶುಕ್ರವಾರ ಶಾಲ್ಮಲಾ ನದಿ ತಟದ ಸ್ವರ್ಣವಲ್ಲಿಯಲ್ಲಿ ವ್ಯಾಸಪೂಜೆ ನಡೆಸಿ ಸಂಕಲ್ಪ ಕೈಗೊಂಡರು. ಸಮಸ್ತ ಶಿಷ್ಯರ ಪರವಾಗಿ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಶ್ರೀಗಳ ಪಾದಪೂಜೆ ನಡೆಸಿದರು. ಐತಿಹಾಸಿಕ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಹಂಪಿ ವಿದ್ಯಾರಣ್ಯ ಪೀಠಾಧಿಪತಿ ಭಾರತಿ ಸ್ವಾಮೀಜಿ ಶ್ರೀವಿರೂಪಾಕ್ಷೇಶ್ವರಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ವೇದವ್ಯಾಸ ಪೂಜೆ ಸಲ್ಲಿಸಿದರು. ಬೆಳಗ್ಗೆ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಸ್ನಾನ, ಸಂಧ್ಯಾವಂದನೆ ಸಲ್ಲಿಸಿದ ಶ್ರೀಗಳು, ದತ್ತಾತ್ರೇಯ, ವೇದವ್ಯಾಸರು, ಕೃಷ್ಣ ಹಾಗೂ ಶಂಕರಾಚಾರ್ಯರಿಗೆ ಪೂಜೆ ನೆರವೇರಿಸಿದರು. ಬಳಿಕ ಚಾತುರ್ಮಾಸ್ಯ ವ್ರತ ಆರಂಭಿಸಿದರು.
ಈ ಮಧ್ಯೆ, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಗಳು ಮೂರು ದಶಕಗಳ ನಂತರ ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಳ್ಳುತ್ತಿದ್ದು, ಆ.2ರಿಂದ ಸೆ.25ರವರೆಗೆ ಇಲ್ಲಿನ ಅಮರಗೋಳದ ವಿದ್ಯಾಧಿರಾಜ ಭವನದಲ್ಲಿ ಚಾತುರ್ಮಾಸ್ಯ ನಡೆಯಲಿದೆ.
ಚಿತ್ರಾಪುರ ಸಂಸ್ಥಾನದ ಸದ್ಯೋಜಾತ ಶಂಕರಾಶ್ರಮ ಸ್ವಾಮಿಜೀಯವರು ಉತ್ತರ ಕನ್ನಡ ಜಿಲ್ಲೆ ಭಟ್ಕಳ ಸಮೀಪದ ಚಿತ್ರಾಪುರ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡರು.
ಕೊಲ್ಲೂರಿನಲ್ಲಿ ಭಕ್ತರ ಸಂಖ್ಯೆಯಲ್ಲಿ ಇಳಿಮುಖ
ಕುಂದಾಪುರ: ಚಂದ್ರಗ್ರಹಣ ಪ್ರಯುಕ್ತ ಶುಕ್ರವಾರ ಕೊಲ್ಲೂರು, ಆನೆಗುಡ್ಡೆ, ಮಾರಣಕಟ್ಟೆ, ಹಟ್ಟಿಯಂಗಡಿ, ಕಮಲಶಿಲೆ ದೇವಸ್ಥಾನಗಳಲ್ಲಿ ಮಧ್ಯಾಹ್ನದ ಬಳಿಕ ಭಕ್ತರ ಸಂಖ್ಯೆ ಇಳಿಮುಖಗೊಂಡಿತ್ತು. ಕೊಲ್ಲೂರಿನಲ್ಲಿ ಎಂದಿನಂತೆ ಬೆಳಗ್ಗಿನಿಂದ ಸಂಜೆಯವರೆಗೂ ಪೂಜೆ, ಸೇವೆಗಳಿದ್ದರೂ, ಮಧ್ಯಾಹ್ನದ ಬಳಿಕ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರ ಸಂಖ್ಯೆ ಕಡಿಮೆಯಿತ್ತು. ರಾತ್ರಿಯ ಅನ್ನದಾನ ಸೇವೆಯೂ ಇರಲಿಲ್ಲ. ಕಮಲಶಿಲೆಯಲ್ಲಿ ಗ್ರಹಣ ಆರಂಭ ಹಾಗೂ ಮೋಕ್ಷ ಸಮಯದಲ್ಲಿ ವಿಶೇಷ ನೈವೇದ್ಯ ಪ್ರಸಾದ ನೀಡಲಾಯಿತು.