ಶೃಂಗೇರಿ: ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶಾರದಾಂಬಾ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.
10 ದಿನ ವಿವಿಧ ಅಲಂಕಾರಗಳಲ್ಲಿ ಕಂಗೊಳಿಸಿದ ಶಾರದೆಗೆ ಶನಿವಾರ ಗಜಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸರ್ವಾಲಂಕೃತ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಭವ್ಯವಾದ ರಥದಲ್ಲಿ ಕುಳ್ಳಿರಿಸಿ ರಾಜಬೀದಿಯಲ್ಲಿ ಉತ್ಸವ ನಡೆಸಲಾಯಿತು.
ಸಾವಿರಾರು ಭಕ್ತರು ಜಯಘೋಷಗಳೊಂದಿಗೆ ರಥ ಎಳೆದರು.ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ರಥೋತ್ಸವದ ಪೂರ್ವಭಾವಿಯಾಗಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಗುರುಭವನದಲ್ಲಿ ಭಕ್ತರನ್ನು ಆಶೀರ್ವದಿಸಿ, ತುಂಗಾ ನದಿಯನ್ನು ದೋಣಿಯ ಮೂಲಕ ದಾಟಿ, ಗಂಗಾ ಪೂಜೆ ನೆರವೇರಿಸಿದರು. ನಂತರ, ಮಠದ ಹೊರ ಆವರಣ ಮತ್ತು ಒಳ ಆವರಣದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಶಾರದಾಂಬೆಗೆ ಪೂಜೆ ಸಲ್ಲಿಸಿದರು.
ನಂತರ, ಮಠದ ಎದುರು ಪುಷ್ಪಾಲಂಕೃತ ಚಿನ್ನದ ಅಡ್ಡ ಪಲ್ಲಕ್ಕಿಯಲ್ಲಿ ಆಸೀನರಾದರು. ಭಕ್ತರ ಜಯಘೋಷ ವಿಪ್ರತ್ತೋಮರ ವೇದಘೋಷಗಳು, ಮಂತ್ರಪಠಣದೊಂದಿಗೆ ಅಡ್ಡಪಲ್ಲಕ್ಕಿ, ರಥದ ಎದುರು ಸಾಗಿತು. ಅಡ್ಡಪಲ್ಲಕ್ಕಿ ಉತ್ಸವದ ಜೊತೆಯಲ್ಲಿ ಶಾರದಾಂಬಾ ರಥೋತ್ಸವಕ್ಕೂ ಚಾಲನೆ ನೀಡಲಾಯಿತು.
ರಥೋತ್ಸವದ ನಂತರ ಶಾರದಾ ಸನ್ನಿ ಧಿಯಲ್ಲಿ ಹಗಲು ರಾಜ ದರ್ಬಾರ್ ನಡೆಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳು ರಾಜ ಪೋಷಾಕಿನಲ್ಲಿ ಸ್ವರ್ಣ ಖಚಿತ ಸಿಂಹಾಸನದಲ್ಲಿ ಆಸೀನರಾಗಿ, ಭಕ್ತರನ್ನು ಆಶೀರ್ವದಿಸಿದರು. ದೀಪಾರಾಧನೆ ನಂತರ ಜಗದ್ಗುರುಗಳು ಭಕ್ತರಿಗೆ ಪ್ರಸಾದ ನೀಡಿದರು.