ತಿರುವನಂತಪುರ/ಬೆಂಗಳೂರು: ಇಲ್ಲಿಗೆ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣ ಕಾರ್ಯಕ್ರಮದಲ್ಲಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿಯವರಿಗೆ ಕೇರಳ ಸಚಿವ ಹಾಗೂ ಶಾಸಕರಿಂದ ಅವಮಾನ ನಡೆದಿದೆ ಎನ್ನಲಾಗಿದೆ.
ಸ್ವಾಮೀಜಿಯವರಿಗೆ ಮೀಸಲಾದ ಆಸನದಲ್ಲಿ ಶ್ರೀಗಳನ್ನು ಆಸೀನರಾಗಲು ಬಿಡದೆ ಆ ಆಸನವನ್ನು ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಕಾಂಗ್ರೆಸ್ ಶಾಸಕ ಶಿವಕುಮಾರ್ ಅವರು ವೇದಿಕೆಯಿಂದ ತೆಗೆದು ಶ್ರೀಗಳಿಗೆ ಅವಮಾನ ಮಾಡಿದ ಬಗ್ಗೆ ಮಲಯಾಳ ಪತ್ರಿಕೆಯಲ್ಲಿ ವರದಿಯಾಗಿದೆ.
ಕೇರಳ ಸಚಿವರು ಮತ್ತು ಶಾಸಕರ ವರ್ತನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಖಂಡಿಸಿದ್ದು, ಕೂಡಲೇ ಸಚಿವರು ಮತ್ತು ಶಾಸಕರು ಸ್ವಾಮೀಜಿಯವರ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿ ಚಾಲನ ಸಮಾರಂಭದಲ್ಲಿ ಆಶೀರ್ವಚನ ನೀಡಲು ಶೃಂಗೇರಿ ಪೀಠದ ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿತ್ತು. ಸಂಪ್ರದಾಯದಂತೆ ಅವರಿಗೆ ವೇದಿಕೆ ಮೇಲೆ ವಿಶೇಷ ಪೀಠದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಸಚಿವ ಕಡನಪಳ್ಳಿ ಸುರೇಂದ್ರನ್ ಮತ್ತು ಶಾಸಕ ಶಿವಕುಮಾರ್ ಅವರು ಈ ಪೀಠವನ್ನು ಅಲ್ಲಿಂದ ತೆಗದುಹಾಕಿದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಸ್ವಾಮೀಜಿಯವರು ಆಶೀರ್ವಚನ ನೀಡದೆ ಸಭೆಯಿಂದ ನಿರ್ಗ ಮಿಸಿದರು ಎಂದು ಮೂಲಗಳು ತಿಳಿಸಿವೆ.
ಸಚಿವರ ವರ್ತನೆಗೆ ಖಂಡನೆ: ಕೇರಳ ಸಚಿವ ಕಡನಪಳ್ಳಿ ಸುರೇಂದ್ರನ್ ಅವರ ವರ್ತನೆ ಯನ್ನು ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸ್ವಾಮೀಜಿಯ ವರನ್ನು ಅತಿಥಿಯಾಗಿ ಆಹ್ವಾನಿಸಿ ಅವಮಾನಿ ಸಿರುವುದು ಖಂಡನಾರ್ಹ. ಸಚಿವರಿಗೆ ಇಷ್ಟವಿಲ್ಲ ದಿದ್ದರೆ ಸ್ವಾಮೀಜಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದಿತ್ತು. ಆದರೆ, ಆಹ್ವಾನಿಸಿ ಅವಮಾನಿಸಿರುವುದು ಮಠದ ಅಸಂಖ್ಯಾತ ಭಕ್ತರಿಗೆ ನೋವಾಗಿದೆ. ಹೀಗಾಗಿ ಸಚಿವರು ಕೂಡಲೇ ಸ್ವಾಮೀಜಿಯವರ ಕ್ಷಮೆಯಾಚಿಸ ಬೇಕು ಎಂದುಒತ್ತಾಯಿಸಿದ್ದಾರೆ.
ಕೇರಳ ಸಚಿವರು ಮತ್ತು ಶಾಸಕರ ವರ್ತನೆ ಖಂಡಿಸಿರುವ ಶೋಭಾ ಕರಂದ್ಲಾಜೆ, ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆ ಕೇರಳದ ಕಾಂಗ್ರೆಸ್-ಸಿಪಿಎಂ ಕೂಟ ವರ್ತಿಸುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳ ಮುಖ್ಯ ಮಂತ್ರಿಗಳು ಸ್ವಾಮೀಜಿಯವರ ಕ್ಷಮೆ ಯಾಚಿಸ ಬೇಕು ಎಂದು ಆಗ್ರಹಿಸಿದ್ದಾರೆ.