Advertisement

ಮಲ್ಲ ದೇಗುಲಕ್ಕೆ ಶೃಂಗೇರಿ ಶ್ರೀಗಳ ಭೇಟಿ

12:11 AM Jun 29, 2017 | Karthik A |

ಮುಳ್ಳೇರಿಯ: ವಿದ್ಯಾಲಯಗಳು ಜ್ಞಾನದ ಬೆಳಕನ್ನು ನೀಡಿ ಬದುಕನ್ನು ಉದ್ಧರಿಸುವ ದೇವಾಲಯಗಳು. ವಿದ್ಯೆ ಇಲ್ಲದವರು ಪ್ರಾಣಿಗಳಿಗೆ ಸಮಾನ. ಈ ಕಾರಣದಿಂದಾಗಿ ಪ್ರಾಚೀನ ಕಾಲದಿಂದಲೂ ವಿದ್ಯೆಗೆ ಮಹತ್ವ ನೀಡಲಾಗಿದೆ ಎಂದು ಶ್ರೀಮಜ್ಜಗದ್ಗುರು ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಹೇಳಿದರು. ಶೃಂಗೇರಿ ಪೀಠದ ಕಿರಿಯ ಯತಿ ಶ್ರೀ ವಿಧುಶೇಖರ ಭಾರತೀ ಅವರೊಂದಿಗೆ ಬುಧವಾರ ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೆ ಆಗಮಿಸಿದ ಅವರು ದೇಗುಲದ ಆಡಳಿತದ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

Advertisement

ಇಂದಿನ ಶಿಕ್ಷಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದನ್ನು ಮಾತ್ರ ಗುರಿಯಾಗಿಸಿ ಕೊಂಡಂತಿದೆ. ಆದರೆ ಶಿಕ್ಷಣ ನೈಜ ಅರ್ಥದ ಜ್ಞಾನಾರ್ಜನೆಗಾಗಿ ಎಂಬ ಅರಿವು ನಮ್ಮದಾದಾಗ ಶಿಕ್ಷಣ ಸಾರ್ಥಕವಾಗುತ್ತದೆ. ವಿದ್ಯೆಯಿಂದ ಸಮಗ್ರ ಜ್ಞಾನ ಪ್ರಾಪ್ತವಾಗಬೇಕು ಎಂದು ತಿಳಿಸಿದರು.

42 ವರ್ಷಗಳ ಬಳಿಕ ಭೇಟಿ
42 ವರ್ಷಗಳ ಹಿಂದೆ ತಾನು ಅಂದಿನ ಹಿರಿಯ ಯತಿಗಳ ಜತೆಗೆ ಮಲ್ಲ  ಕ್ಷೇತ್ರಕ್ಕೆ ಆಗಮಿಸಿದ್ದೆ ಎಂದು ನೆನಪಿಸಿದ ಶ್ರೀಗಳು, ಇಂದೀಗ ತಾನು ಕಿರಿಯ ಯತಿಗಳು ಮತ್ತೆ ಜತೆಯಾಗಿ ಬಂದಿದ್ದೇವೆ, ಮುಂದೆ 42 ವರ್ಷಗಳ ಬಳಿಕ ಕಿರಿಯ ಯತಿಗಳು ಅವರ ಶಿಷ್ಯನ ಜತೆ ಬರುವಂತಾಗಲಿ ಎಂದು ಹಾರೈಸಿದರು. ಯತಿದ್ವಯರನ್ನು ಮಲ್ಲ ದೇವಸ್ಥಾನದಲ್ಲಿ ಸ್ವಾಗತಿಸಿ ಪಾದಪೂಜೆ ಸಲ್ಲಿಸಲಾಯಿತು. ಜಗನ್ಮಾತೆ ಮಲ್ಲ ಶ್ರೀ ದುರ್ಗಾಂಬಿಕೆಯ ಸನ್ನಿಧಿ ಮತ್ತು ಸತ್ಯನಾರಾಯಣ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿತು.

ಮಲ್ಲ ಕ್ಷೇತ್ರದ ಮೊಕ್ತೇಸರ ಆನೆಮಜಲು ವಿಷ್ಣು ಭಟ್‌, ಶ್ರೀಧರ ಭಟ್‌, ರಾಧಾಕೃಷ್ಣ ಭಟ್‌ ಮತ್ತು ಸಹೋದರರು, ಉದುಮ ಶಾಸಕ ಕೆ. ಕುಂಞಿರಾಮನ್‌, ಮುಳಿಯಾರ್‌ ಗ್ರಾ.ಪಂ. ಅಧ್ಯಕ್ಷ ಖಾಲಿದ್‌ ಬೆಳ್ಳಿಪ್ಪಾಡಿ, ಅಸೀಸ್‌ ಮನ್ಸೂರ್‌ ಮಲ್ಲತ್‌, ಶರೀಫ್‌ ಕೊಡವಂಜಿ, ಮಲ್ಲ ಶಾಲಾ ಮುಖ್ಯೋಪಾಧ್ಯಾಯ ಸತ್ಯನ್‌, ಗ್ರಾ.ಪಂ. ಸದಸ್ಯ ಗಣೇಶ್‌, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕರುಣಾಕರನ್‌, ಕಜಂಪಾಡಿ ಸುಬ್ರಹ್ಮಣ್ಯ ಭಟ್‌, ದಕ್ಷಿಣ ಕನ್ನಡ ಮಾಜಿ ಶಾಸಕ ಬಾಲಕೃಷ್ಣ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next