ಬೆಂಗಳೂರು: ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿನ ವ್ಯಾಪಾರ ಮಳಿಗೆಗಳನ್ನು ತೆರವುಗೊಳಿಸುವ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಹೈಕೋರ್ಟ್ ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಶೃಂಗೇರಿ ಪಟ್ಟಣದ ಭಾರತಿ ಗಲ್ಲಿಯ ಗಾಂಧಿ ಮೈದಾನದಲ್ಲಿ ಛಾಯಾಚಿತ್ರಗಳ ವ್ಯಾಪಾರ ಮಳಿಗೆ ಹೊಂದಿರುವ ಕೆ.ಎ.ಮಹೇಶ್ ಸೇರಿ 17 ಮಂದಿ ವ್ಯಾಪಾರಿಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಜರುಗಿಸದಂತೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಭಾರಿ ಮಳೆ ಹಿನ್ನೆಲೆಯಲ್ಲಿ ಆಸ್ತಿ-ಪಾಸ್ತಿ ಹಾಗೂ ಪ್ರಾಣ ಹಾನಿಗೆ ಕಾರಣವಾಗುತ್ತಿರುವ ಮಳಿಗೆಗಳನ್ನು ತೆರವುಗೊಳಿಸಿ ವರದಿ ಸಲ್ಲಿಸುವಂತೆ ಪಟ್ಟಣ ಪಂಚಾಯಿತಿಗೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿಗಳು 2018ರ ಆ.21ರಂದು ಆದೇಶ ಹೊರಡಿಸಿದ್ದರು. ಇದಕ್ಕೆ ಆ.28ರಂದು ನಿರ್ಣಯ ಅಂಗೀಕರಿಸಿದ್ದ ಪಟ್ಟಣ ಪಂಚಾಯಿತಿಯು, ಮೈದಾನದಲ್ಲಿ ವ್ಯಾಪಾರಿಗಳು ಸೆಪ್ಟಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ವ್ಯಾಪಾರ ನಡೆಸುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಯಾವುದೇ ವ್ಯಾಪಾರ ನಡೆಯುವುದಿಲ್ಲ. ಅಲ್ಲದೇ ಈವರೆಗೆ ಇದರಿಂದಾಗಿ ಯಾವುದೇ ಆಸ್ತಿ ನಷ್ಟ ಅಥವಾ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸೆ.9ಕ್ಕೆ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿತ್ತು. ಈ ಮಧ್ಯೆ ಆತಂಕದಲ್ಲಿರುವ ವ್ಯಾಪಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಆದೇಶ ರದ್ದುಗೊಳಿಸುವಂತೆ ಕೋರಿದ್ದಾರೆ.
ಅರ್ಜಿದಾರರು ಕಳೆದ 15-20 ವರ್ಷಗಳಿಂದ ಈ ಮೈದಾನದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ಇವರಿಗೆ “ಬೀದಿ ವ್ಯಾಪಾರ ನಿಯಂತ್ರಣ ಹಾಗೂ ಜೀವನೋಪಾಯ ಸಂರಕ್ಷಣೆ ಕಾಯ್ದೆ-2014’ರ ಪ್ರಕಾರ ಗುರುತಿನ ಚೀಟಿ, ಪರವಾನಿಗೆ ಕೊಡಲಾಗಿದೆ. ಗುರುತಿನ ಚೀಟಿ ನವೀಕರಣ ಅವಧಿ 2019ರ ಮಾ.31ರವರೆಗೆ ಇದೆ. ಅದಾಗ್ಯೂ ಮಳಿಗೆಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಆದೇಶ ಕಾನೂನುಬಾಹಿರ ಮತ್ತು ಏಕಪಕ್ಷೀಯವಾಗಿದ್ದು, ಅದನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.ಅರ್ಜಿದಾರರ ಪರ ವಿಘ್ನೇಶ್ವರ ಎಸ್. ಶಾಸ್ತ್ರೀ ವಾದ ಮಂಡಿಸಿದರು.